ಧರ್ಮದ್ವೇಷವನ್ನು ರಾಜಕೀಯ ಪಕ್ಷಗಳು ಪ್ರೋತ್ಸಾಹಿಸುತ್ತಿರುವುದು ವಿಷಾದನೀಯ: ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಮೂರ್ತಿ

Update: 2022-08-15 11:06 GMT

ಹೈದರಾಬಾದ್: "ಸ್ವಾತಂತ್ರ್ಯ ಹೋರಾಟದ ಸಂದರ್ಭ ಈ ದೇಶದ ಎಲ್ಲಾ ಜನರು,  ತಮ್ಮ ಧರ್ಮ, ಪಕ್ಷ ಅಥವಾ ಸಿದ್ಧಾಂತಗಳನ್ನು ಮರೆತು ದೇಶಕ್ಕಾಗಿ  ಒಗ್ಗಟ್ಟಿನಿಂದ ಹೋರಾಡಿದ್ದರು. ಆದರೆ ಈಗ ಜಾತಿ, ಧರ್ಮದ ಹೆಸರಿನಲ್ಲಿ ಜನರಲ್ಲಿ ಒಡಕು ಮೂಡಿದೆ. ರಾಜಕೀಯ ಪಕ್ಷಗಳು ಈ ಒಡಕನ್ನು ಪ್ರೋತ್ಸಾಹಿಸುತ್ತಿರುವುದು ದುರಾದೃಷ್ಟಕರ" ಎಂದು ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಎಟಿಕುರಿ ಕೃಷ್ಣಮೂರ್ತಿ ವಿಷಾದಿಸಿದ್ದಾರೆ. 

ಈ ವರ್ಷದ ಎಪ್ರಿಲ್ 9ರಂದು ತಮ್ಮ 100ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಕೃಷ್ಣಮೂರ್ತಿಯವರು ತಮ್ಮ 14ನೇ ವರ್ಷದಲ್ಲಿ ಭಗತ್ ಸಿಂಗ್ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕಮ್ಯುನಿಸ್ಟ್ ಸಿದ್ಧಾಂತದತ್ತ ಆಕರ್ಷಿತರಾಗಿದ್ದರು. 

"ಎರಡನೇ ಜಾಗತಿಕ ಮಹಾಯುದ್ಧದ ವೇಳೆ ಹಿಟ್ಲರ್ ಅಂದಿನ ಸೋವಿಯತ್ ಯೂನಿಯನ್ ಮೇಲೆ ದಾಳಿ ನಡೆಸಿದಾಗ ನಾವು ನಮ್ಮ ನೀತಿ ಬದಲಾಯಿಸಿದೆವು. ಅಲ್ಲಿಯ ತನಕ ನಾವು ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದೆವು" ಎಂದು ಅವರು ಹೇಳಿದರು. ಹಿಟ್ಲರನ ಗೆಲುವು ನಮ್ಮನ್ನು ಇನ್ನಷ್ಟು ಗುಲಾಮಗಿರಿಗೆ ತಳ್ಳಬಹುದೆಂಬ ಅವರ ಯೋಚನೆ ಅವರನ್ನು 1942 ರಲ್ಲಿ ಬ್ರಿಟಿಷ್ ಸೇನೆಗೆ ಸೇರುವಂತೆ ಪ್ರೇರೇಪಿಸಿತು. ಮುಂದೆ ಚಂದ್ರಶೇಖರ್ ಆಜಾದ್ ಅವರ ಸಾವು ಅವರಲ್ಲಿ ಇನ್ನಷ್ಟು ಆಕ್ರೋಶ ಮೂಡಿಸಿತ್ತು. ಮದ್ರಾಸ್ ಗವರ್ನರ್ ಅವರು ಗುಂಟೂರಿಗೆ ಆಗಮಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಮೊದಲ ಬಾರಿ 1943 ರಲ್ಲಿ ಬಂಧಿಸಲಾಗಿತ್ತು.

1946 ರಲ್ಲಿ ರಾಯಲ್ ಇಂಡಿಯನ್ ನೇವಿ ಮ್ಯುಟಿನಿ ನಡೆದಾಗ ಕೃಷ್ಣಮೂರ್ತಿ ಮತ್ತವರ ಮೂವರು ಸಹವರ್ತಿಗಳು ಸುಮಾರು 400 ಸೈನಿಕರನ್ನು ಒಗ್ಗೂಡಿಸಿ, ಕರಪತ್ರಗಳನ್ನು ಮುದ್ರಿಸಿ ಧರಣಿಗಳನ್ನು ನಡೆಸಿದರು. "ನಮ್ಮಲ್ಲಿ ನಾಲ್ಕು ಮಂದಿಯನ್ನು ಬ್ರಿಟಿಷರು ಬಂಧಿಸಿ ಲಾಹೋರ್ ಜೈಲಿನಲ್ಲಿ ಎಂಟು ತಿಂಗಳು ಇರಿಸಿದ್ದರು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

"ನಾವು ಜೈಲಿನಲ್ಲಿದ್ದಾಗ ಅಲ್ಲಿ ಭಾರತೀಯ ಸೈನಿಕರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ದಿನಪತ್ರಿಕೆಗಳನ್ನು ಓದುವುದು ಹಾಗೂ ದೇಶಕ್ಕಾಗಿ ನಾವೇನು ಮಾಡಬಹುದೆಂಬ ಚರ್ಚೆಯೊಂದಿಗೆ ಸಮಯ ಕಳೆಯುತ್ತಿದ್ದೆವು" ಎಂದು ಅವರು ನೆನಪಿಸುತ್ತ್ತಾರೆ.

ಸ್ವಾತಂತ್ರ್ಯಾನಂತರ ಕಂದಾಯ ಇಲಾಖೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದಾರೆ ಕೃಷ್ಣಮೂರ್ತಿ.

ಕೃಪೆ: Newindianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News