ಮಲ್ಪೆ, ಬೈಂದೂರುಗಳಲ್ಲಿ ವಿವಿದ್ದೋದ್ದೇಶದ ಬಂದರು: ಸ್ವಾತಂತ್ರ್ಯ ದಿನಾಚರಣೆಯ ಸಂದೇಶದಲ್ಲಿ ಸಚಿವ ಅಂಗಾರ

Update: 2022-08-15 13:25 GMT

ಉಡುಪಿ, ಆ.15: ಸಾಗರಮಾಲ ಯೋಜನೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ತಲಾ ಶೇ.50ರ ಅನುದಾನದಲ್ಲಿ ಬೈಂದೂರು ವಿವಿದ್ದೋದ್ದೇಶ ಬಂದರು ನಿರ್ಮಾಣಕ್ಕೆ228.78 ಕೋಟಿ ರೂ. ಹಾಗೂ ಮಲ್ಪೆಯ ವಿವಿದ್ದೋದ್ದೇಶದ ಬಂದರು ನಿರ್ಮಾಣಕ್ಕೆ 304.17 ಕೋಟಿ ರೂ. ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ರಾಜ್ಯ ಬಂದರು, ಮೀನುಗಾರಿಕೆ ಮತ್ತು ಒಳನಾಡ ಜಲಸಾರಿಗೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಪ್ರಕಟಿಸಿದ್ದಾರೆ.

ಸೋಮವಾರ ಅವರು ನಗರದ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ‘ಆಜಾದೀ ಕಾ ಅಮೃತ್ ಮಹೋತ್ಸವ’ ಅಂಗವಾಗಿ ೭೬ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡುತಿದ್ದರು.

ಅಲ್ಲದೇ ಸಾಗರಮಾಲಾ ಯೋಜನೆಯಡಿ ಹಂಗಾರಕಟ್ಟೆಯಲ್ಲಿ 7.80 ಕೋಟಿ ರೂ. ವೆಚ್ಚದ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದರೆ, ಗಂಗೊಳ್ಳಿಯಲ್ಲಿ ಕೋಸ್ಟಲ್‌ಬರ್ತ್ ನಿರ್ಮಾಣಕ್ಕೆ 95.88 ಕೋಟಿ ರೂ. ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ ಎಂದವರು ವಿವರಿಸಿದರು.

ತ್ರಾಸಿ-ಮರವಂತೆ ಹಾಗೂ ಪಡುವರಿಯ ಸೋಮೇಶ್ವರ ಬೀಚ್, ಒತ್ತಿನೆಣೆ ಕಡಲ ತೀರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸರಕಾರ 25 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತಿದ್ದು, ಕಾರ್ಕಳದ ಆನೆಕೆರೆಯಲ್ಲಿ ಪುರಾತನ ಜೈನ ಬಸದಿಯ ಸಂಪೂರ್ಣ ನವೀಕರಣ ಹಾಗೂ ಅಭಿವೃದ್ಧಿ ಕಾರ್ಯವನ್ನು ಎರಡು ಕೋಟಿ ರೂ. ಹಾಗೂ ಉಮಿಕಲ್ಕುಂಜ ಬೆಟ್ಟದಲ್ಲಿ ಪರಶುರಾಮ ಥೀಮ್‌ಪಾರ್ಕ್ ಅಭಿವೃದ್ಧಿಯನ್ನು ಐದು ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಿದ್ಧಾಪುರದಲ್ಲಿ ಇಂದಿರಾ ಗಾಂಧಿ ಮಾದರಿ ವಸತಿ ಶಾಲೆಯ ಕಟ್ಟಡವನ್ನು 19 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 71,885 ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಫಲಾನುಭವಿಗಳಾಗಿ ನೋಂದಣಿಯಾಗಿದ್ದು, ಕಾರ್ಮಿಕ ಇಲಾಖೆಯಿಂದ ಇವರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಪಶ್ಚಿಮ ವಾಹಿನಿ ಯೋಜನೆಯಡಿ ಜಿಲ್ಲೆಯಲ್ಲಿ ೨೦೪.೧೩ ಕೋಟಿ ರೂ.ವೆಚ್ಚದಲ್ಲಿ ೧೭೫ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳ ಕಾಮಗಾರಿ ನಡೆಯುತ್ತಿದೆ.  ಕಾರ್ಕಳ ತಾಲೂಕಿನ ಎಣ್ಣೆಹೊಳ್ಳೆ ನದಿಗೆ ಅಜೆಕಾರು ಗ್ರಾಮದ ಬಳಿ ೧೦೮ ಕೋಟಿ ರೂ.ವೆಚ್ಚದಲ್ಲಿ ವೆಂಟೆಡ್ ಡ್ಯಾಮ್ ನಿರ್ಮಿಸಿ ಏತ ನೀರಾವರಿ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಇದರಿಂದ ಆಸುಪಾಸಿನ ರೈತರ ೧೫೦೦ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯುವಂತಾಗಿದೆ ಎಂದು ಅಂಗಾರ ನುಡಿದರು.

ಸ್ವಾತಂತ್ರ್ಯೋತ್ಸವ ಪ್ರತಿಯೊಬ್ಬ ಭಾರತೀಯನ ಪಾಲಿಗೆ ಅತ್ಯಂತ ಮಹತ್ವದ ದಿನ. ಸ್ವಾತಂತ್ರ್ಯವೆಂದರೆ ಸ್ವಚ್ಛಂದತೆಯಲ್ಲ. ದೇಶದ ಸಮಷ್ಟಿ ಸ್ವಾತಂತ್ರ್ಯ ಮತ್ತು ಇನ್ನೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವವನು ಮಾತ್ರ ತನ್ನ ಸ್ವಾತಂತ್ರ್ಯಕ್ಕಾಗಿ ಹಕ್ಕು ಮಂಡಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಭಿಪ್ರಾಯ ಪಟ್ಟರು.

ಶಾಸಕ ಕೆ.ರಘುಪತಿ ಭಟ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಕೆ.ಉದಯಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಎಸ್.ಕಲ್ಮಾಡಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ವೆಯ್ಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿರುವ ಗುರುರಾಜ್ ಪೂಜಾರಿ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯಿಂದ  ಅರ್ಹ ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.

ಇದರೊಂದಿಗೆ ೨೦೨೧-೨೧ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಜಿಲ್ಲೆಯ ಸರಕಾರಿ ಶಾಲೆಗಳ ೧೦ ಮಂದಿ ಅಗ್ರಸ್ಥಾನಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.

ಕೊನೆಯಲ್ಲಿ ಉಡುಪಿಯ ಮೂರು ಶಾಲೆಗಳ ತಲಾ 100ಕ್ಕೂ ಅಧಿಕ ಮಕ್ಕಳಿಂದ ಸಾಮೂಹಿಕ ನೃತ್ಯ ಕಾರ್ಯಕ್ರಮಗಳು ನಡೆದವು.

ಸಚಿವ ಅಂಗಾರ ಮರೆತ ನೆಹರು

ರಾಜ್ಯ ಸರಕಾರ ರವಿವಾರ ಪತ್ರಿಕೆಗಳಿಗೆ ನೀಡಿದ ಸ್ವಾತಂತ್ರ್ಯೋತ್ಸವ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸೇರಿದಂತೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಕೈಬಿಟ್ಟಿರುವುದು ವಿವಾದವೊಂದಕ್ಕೆ ಕಾರಣವಾಗಿದ್ದರೆ, ಇಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ  ಧ್ವಜಾರೋಹಣ ನೆರವೇರಿಸಿ ನೀಡಿದ ಸಂದೇಶದಲ್ಲೂ ಅವರ ಹೆಸರನ್ನು ಕೈಬಿಟ್ಟಿರುವುದು ಕಂಡುಬಂತು.

ಸ್ವಾತಂತ್ರ್ಯ ಹೋರಾಟದ ಕುರಿತು ಪ್ರಸ್ತಾಪಿಸುತ್ತಾ ಸಚಿವರು ಹೋರಾಟದ ಮುಂಚೂಣಿಯಲ್ಲಿದ್ದವರೆಂದು ಮಹಾತ್ಮಗಾಂಧಿ, ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾರ್ ಹಾಗೂ ವಿ.ಡಿ.ಸಾವರ್ಕರ್ ಅವರ ಹೆಸರನ್ನು ನೆನಪಿಸಿಕೊಂಡರಾದರೂ ಜವಾಹರಲಾಲ್ ನೆಹರು ಹೆಸರನ್ನು ಉಲ್ಲೇಖಿಸಲೇ ಇಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News