'ದೃಶ್ಯಂ' ಕಥೆಗೆ ಮೂರನೇ ಭಾಗದಲ್ಲಿ ಮುಕ್ತಾಯ?: ಕೈಕೋಳ ಹಾಕಿದ ಮೋಹನ್‌ ಲಾಲ್‌ ಪೋಸ್ಟರ್‌ ವೈರಲ್

Update: 2022-08-15 15:55 GMT
Photo: Twitter/@Chrissuccess
 

ಕೊಚ್ಚಿ: ಮೋಹನ್‌ ಲಾಲ್‌(Mohanlal) ನಟನೆಯ ಥ್ರಿಲ್ಲರ್‌ ಚಿತ್ರ ದೃಶ್ಯಂನ ಮೂರನೇ ಅವತರಣಿಕೆ(Drishyam 3) ನಿರ್ಮಿಸಲು ಚಿತ್ರತಂಡ ಸಜ್ಜಾಗುತ್ತಿದೆ ಎಂಬ ಸುದ್ದಿ ಈಗ ಮಾಲಿವುಡ್‌ ಅಂಗಳದಿಂದ ಕೇಳಿ ಬರುತ್ತಿವೆ. ಥ್ರಿಲ್ಲರ್‌ ಚಿತ್ರಗಳ ಮುಂದುವರಿದ ಭಾಗವು ಸಾಧಾರಣವಾಗಿ ಮೊದಲ ಸಿನೆಮಾದಷ್ಟು ಛಾಪು ಮೂಡಿಸಲು ಅನೇಕ ಬಾರಿ ಸೋಲುತ್ತವೆಯಾದರೂ, ದೃಶ್ಯಂ-2  ಪ್ರೇಕ್ಷಕರ, ವಿಮರ್ಷಕರ ಮೆಚ್ಚುಗೆಯನ್ನು ಗಳಿಸಿತ್ತು. ಈ ಹಿನ್ನೆಲೆಯಲ್ಲಿ ಮೂರನೇ ಭಾಗಕ್ಕಾಗಿ ಕುತೂಹಲ ಗರಿಗೆದರಿವೆ. 

ಜೀತು ಜೋಸೆಫ್‌(Jeethu Joseph) ನಿರ್ದೇಶನದ ದೃಶ್ಯಂ ಚಿತ್ರ ಮಳೆಯಾಲಂನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಹಿಂದಿ, ತೆಲುಗು ಭಾಷೆಯಲ್ಲೂ ರಿಮೇಕ್‌ ಮಾಡಲಾಗಿದ್ದೂ ಅಲ್ಲೂ ಸಾಕಷ್ಟು ಗಮನ ಸೆಳೆದಿತ್ತು. ಕನ್ನಡದಲ್ಲಿ ರವಿಚಂದ್ರನ್‌, ತಮಿಳಿನಲ್ಲಿ ಕಮಲ್‌ ಹಾಸನ್‌, ತೆಲುಗಿನಲ್ಲಿ ವೆಂಕಟೇಶ್‌, ಹಿಂದಿಯಲ್ಲಿ ಅಜಯ್‌ ದೇವಗನ್‌ ಅವರು ಮೋಹನ್‌ ಲಾಲ್‌ ಪಾತ್ರವನ್ನು ನಿಭಾಯಿಸಿದ್ದರು. ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ, ಸಿಂಹಳ, ಮ್ಯಾಂಡರಿನ್ ಚೈನೀಸ್ ಭಾಷೆಗಳಿಗೆ ರೀಮೇಕ್ ಆಗಿತ್ತು. ಇಂಡೋನ್ಯೇಶ್ಯನ್ ಭಾಷೆಗೂ ಚಿತ್ರ ರೀಮೇಕ್ ಆಗುತ್ತಿದೆ ಎಂಬ ಬಗ್ಗೆಯೂ ವರದಿಗಳಾಗಿವೆ.

ತನ್ನ ಕುಟುಂಬವನ್ನು ರಕ್ಷಿಸುವ ಪ್ರಯತ್ನದಲ್ಲಿ ಆಕಸ್ಮಿಕವಾಗಿ ಪೊಲೀಸ್‌ ಅಧಿಕಾರಿ ದಂಪತಿಗಳ ಮಗನನ್ನು ಕೊಂದ ನಂತರ ಪ್ರಕರಣದಿಂದ ತನ್ನ ಕುಟುಂಬವನ್ನು ರಕ್ಷಿಸುವ ಕತೆಯೇ ದೃಶ್ಯಂ ಚಿತ್ರದ ಒಂದು ಸಾಲಿನ ಕತೆ. ಇಂತಹ ಸರಳ ಎಳೆಯನ್ನು ಇಟ್ಟುಕೊಂಡು ಎರಡೂ ಸಿನೆಮಾಗಳನ್ನು ರಚಿಸಿ ಗೆಲ್ಲಿಸಿದ ಜೀತು ಜೋಸೆಫ್‌ ಚಿತ್ರಕಥೆಯ ಮ್ಯಾಜಿಕ್‌ ಮುಂದಿನ ಸಿನೆಮಾದಲ್ಲೂ ಮುಂದುವರಿಯುತ್ತಾ ಎಂದು ಕಾದು ನೋಡಬೇಕು. 

ಅದೇನೇ ಇದ್ದರೂ, ಈಗ ಸಾಮಾಜಿಕ ಮಾಧ್ಯಮದಲ್ಲಿ ಮೋಹನ್‌ ಲಾಲ್‌ ಕೈಕೋಳ ಧರಿಸಿ ಕೂತಿರುವ ಪೋಸ್ಟರ್‌ ಒಂದು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಲವಾರು ಫ್ಯಾನ್‌ ಥಿಯರಿಗಳು ಹುಟ್ಟಿಕೊಂಡಿದ್ದು, ದೃಶ್ಯಂ-3 ರಲ್ಲಿ ಕಥೆಗೆ ಸಮಾಪ್ತಿ ಹಾಡಲಾಗುತ್ತದೆ ಎಂದು ಹೇಳಲಾಗಿದೆ. ಚಿತ್ರದ ಮೊದಲೆರಡು ಅವತರಣಿಕೆಯಲ್ಲೂ ತನ್ನ ಬುದ್ಧಿವಂತಿಕೆಯಿಂದ ಜೋರ್ಜ್‌ ಕುಟ್ಟಿ(ಮೋಹನ್‌ ಲಾಲ್) ಪೊಲೀಸರಿಂದ ಪಾರಾಗಿದ್ದು, ಮೂರನೇ ಅವತರಣಿಕೆಯಲ್ಲಿ ಪೊಲೀಸರಿಗೆ ಜೋರ್ಜ್‌ ಕುಟ್ಟಿ ಸಿಕ್ಕಿಬೀಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಎರಡನೇ ಚಿತ್ರದಲ್ಲಿ ಕಥೆಗೆ ಒಂದು ತಾರ್ಕಿಕ ಅಂತ್ಯ ನೀಡದ ಕಾರಣ ಮೂರನೇ ಭಾಗ ಬರಬಹುದು ಎಂದು ನಿರೀಕ್ಷಿಸಲಾಗಿದ್ದರೂ, ದೃಶ್ಯಂ-2 ಬಂದಾಗ ತನ್ನಲ್ಲಿ ಕಥೆಯ ಮುಂದುವರಿದ ಭಾಗ ಸದ್ಯ ಇಲ್ಲ, ಮುಂದೆ ಸಿನೆಮಾ ಬರುತ್ತೋ ಇಲ್ಲವೋ ಎಂಬರ್ಥದಲ್ಲಿ ನಿರ್ದೇಶಕ ಜೀತು ಜೋಸೆಫ್‌ ಹೇಳಿದ್ದರು. ಅದರ ನಡುವೆ, 12th man (ಹನ್ನೆರಡನೇ ಮನುಷ್ಯ) ಎಂಬ ಚಿತ್ರವನ್ನು ಮೋಹನ್‌ ಲಾಲ್‌ ಅವರನ್ನು ಮುಖ್ಯ ಪಾತ್ರದಲ್ಲಿ ಇಟ್ಟುಕೊಂಡ ಥ್ರಿಲ್ಲರ್‌ ಚಿತ್ರವನ್ನೂ ಜೀತು ಜೋಸೆಫ್‌ ನಿರ್ದೇಶಿಸಿ ಸೈ ಎಣಿಸಿಕೊಂಡಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿ ಹಾಕಿದ್ದ ಬ್ಯಾನರ್ ಗಳಲ್ಲಿ ಗಾಂಧೀಜಿ ಭಾವಚಿತ್ರ ನಾಪತ್ತೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News