ನಾವು ಮರೆತ ಮಹನೀಯರು: ತ್ರಿವರ್ಣ ಧ್ವಜಕ್ಕೆ ಅಂತಿಮ ರೂಪ ಕೊಟ್ಟ ಸುರಯ್ಯ ತಯ್ಯಬ್ಜಿ

Update: 2022-08-15 16:27 GMT
Photo credit: shethepeople 

ದೇಶವೀಗ ಸ್ವಾತಂತ್ರ್ಯದ 75ನೆ ಸಂಭ್ರಮಾಚರಣೆಯಲ್ಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಎಲ್ಲರ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಪ್ರಧಾನಿ ಈಗಾಗಲೇ ಕರೆ ಕೊಟ್ಟಿದ್ದಾರೆ. ಭಾರತೀಯರ ಹೆಮ್ಮೆಯ ಗುರುತಾದ ತ್ರಿವರ್ಣ ಧ್ವಜ ಈ ದೇಶದ ಅಧಿಕೃತ ಧ್ವಜವಾಗಿ ಅಂಗೀಕಾರಗೊಂಡದ್ದು 1947ರಲ್ಲಿ. ನಮ್ಮ ತ್ರಿವರ್ಣ ಧ್ವಜ ಈಗಿನ ರೂಪಕ್ಕೆ ಬಂದಿರುವ ಹಿಂದೆ ಹಲವು ಮಹನೀಯರು ಕೆಲಸ ಮಾಡಿದ್ದಾರೆ. ಆದರೆ ತ್ರಿವರ್ಣ ಧ್ವಜಕ್ಕೆ ಅಂತಿಮ ರೂಪ ಕೊಟ್ಟು, ವಿನ್ಯಾಸಗೊಳಿಸಿದ ಒಬ್ಬ ಮಹಿಳೆಯನ್ನು ಮಾತ್ರ ನಾವ್ಯಾರು ನೆನಪಿಸುತ್ತಿಲ್ಲ. ಅವರೇ ಹೈದರಾಬಾದಿನ ಮುಸ್ಲಿಂ ಮಹಿಳೆ ಸುರಯ್ಯ ತಯ್ಯಬ್ಜಿ. 

1919ರಲ್ಲಿ ಹೈದರಾಬಾದ್‌ ನ ಪ್ರತಿಷ್ಠಿತ ಕುಟುಂಬದಲ್ಲಿ ಸುರಯ್ಯ ಜನಿಸಿದರು. ಅವರ ಪತಿ ಬದ್ರುದ್ದೀನ್‌ ತಯ್ಯಬ್ಜಿ ಈಗಿನ ಪ್ರತಿಷ್ಠಿತ IAS ಗೆ ಸಮನಾದ ಐಸಿಎಸ್‌ ಅಧಿಕಾರಿಯಾಗಿದ್ದವರು. 1962ರಿಂದ 1965ರವರೆಗೆ ಆಲಿಗರ್‌ ಮುಸ್ಲಿಂ ಯುನಿವರ್ಸಿಟಿಯಲ್ಲಿ ವೈಸ್‌ ಚಾನ್ಸಲರ್‌ ಆಗಿ ಕಾರ್ಯನಿರ್ವಹಿಸಿದ್ದ ಬದ್ರುದ್ದೀನ್‌ ದೇಶದ ಸಂವಿಧಾನ ಸಭೆಯ ಸದಸ್ಯರೂ ಆಗಿದ್ದರು. ಸುರಯ್ಯ  ಅತ್ಯಾಧುನಿಕ ಹಾಗೂ ಅಸಂಪ್ರದಾಯಿಕ ದೃಷ್ಟಿಕೋನ ಇರುವ ಕಲಾವಿದರಾಗಿ ಖ್ಯಾತಿ ಪಡೆದಿದ್ದರು.

1916ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಅವರು ಧ್ವಜವೊಂದನ್ನು ವಿನ್ಯಾಸಗೊಳಿಸಿದ್ದರು. ಆನಂತರ ಅವರು ಗಾಂಧೀಜಿಯನ್ನು ಭೇಟಿ ಮಾಡಿದಾಗ ಗಾಂಧೀಜಿ ಅದರಲ್ಲಿ ಚರಕದ ಚಿಹ್ನೆ ಇರಬೇಕು ಎಂದಿದ್ದರು. ಕೆಂಪು ಮತ್ತು ಹಸಿರು ಬಣ್ಣಗಳು ಮತ್ತು ಚರಕದ ಚಿಹ್ನೆ ಇರುವ ಧ್ವಜವನ್ನು ಮತ್ತೆ ಪಿಂಗಾಳಿ ವೆಂಕಯ್ಯ ವಿನ್ಯಾಸಗೊಳಿಸಿದ್ದರು. 1921ರಲ್ಲಿ ಇಂಡಿಯನ್‌ ನ್ಯಾಶನಲ್‌ ಕಾಂಗ್ರೆಸ್ ನ ಸಭೆಯೊಂದರಲ್ಲಿ ಮಹಾತ್ಮಾ ಗಾಂಧೀಜಿ ದೇಶಕ್ಕೆ ಒಂದು ಧ್ವಜ ಬೇಕು ಎನ್ನುವ ಪ್ರಸ್ತಾವವನ್ನು ಮುಂದಿಟ್ಟಿದ್ದರು. 

ಪಿಂಗಾಳಿ ವೆಂಕಯ್ಯ ಸ್ವರಾಜ್ಯ ಧ್ಚಜದ ವಿನ್ಯಾಸಕಾರರಾಗಿದ್ದು, ಈ ಧ್ವಜ ಮೂರು (ಅಥವಾ ಎರಡು?) ಬಣ್ಣಗಳನ್ನು ಹೊಂದಿತ್ತು ಮತ್ತು ಈ ಧ್ವಜದ ಮಧ್ಯದಲ್ಲಿ ಚರಕವಿತ್ತು. ಇದು ನಮ್ಮ ರಾಷ್ಟ್ರಧ್ವಜವಾಗಬೇಕೇ ಅಥವಾ ಬೇಡವೇ ಎನ್ನುವ ಚರ್ಚೆಗಳು ನಡೆದಾಗ ಡಾ. ಬಾಬು ರಾಜೇಂದ್ರ ಪ್ರಸಾದ್‌ ಅವರ ನೇತೃತ್ವದಲ್ಲಿ ಫ್ಲ್ಯಾಗ್ ಕಮಿಟಿಯೊಂದನ್ನು ರಚಿಸಲಾಯಿತು. ಆನಂತರ 1931ರಲ್ಲಿ ಕಾಂಗ್ರೆಸ್‌ ಕಮಿಟಿ ಸಭೆಯೊಂದರಲ್ಲಿ, "ನಮ್ಮ ದೇಶದ ಬಾವುಟವು ಮೂರು ಬಣ್ಣಗಳನ್ನು ಹೊಂದಿರಬೇಕು. ಕೇಸರಿ, ಬಿಳಿ ಹಸಿರು, ಬಣ್ಣಗಳು ಇರಬೇಕು. ಕಡು ನೀಲಿ ಬಣ್ಣದ ಚರಕವು ಮಧ್ಯದಲ್ಲಿರಬೇಕು. ಈ ಬಣ್ಣಗಳು ಯಾವುದೇ ಧರ್ಮ ಸೂಚಕವಲ್ಲ, ಬದಲಿಗೆ ಕೇಸರಿಯು ಧೈರ್ಯ ಮತ್ತು ತ್ಯಾಗ, ಬಿಳಿಯು ಶಾಂತಿ ಮತ್ತು ಸತ್ಯ ಹಾಗು ಹಸಿರು ಪ್ರಗತಿಯ ಸಂಕೇತವಾಗಿರುತ್ತದೆ" ಎನ್ನುವ ನಿರ್ಣಯ ಕೈಗೊಳ್ಳಲಾಯಿತು. 1931ರ ಆಗಸ್ಟ್‌ 6ರಂದು ಇದೇ ಧ್ವಜವನ್ನು ಹಾರಿಸಲಾಗಿತ್ತು. ಆದರೆ ಈ ಧ್ವಜದ ಮಧ್ಯದಲ್ಲಿ ಚರಕವಿತ್ತು. ಇತಿಹಾಸಕಾರ ರಾಮಚಂದ್ರ ಗುಹಾ ಅವರ ಟ್ರುತ್ಸ್‌ ಅಬೌಟ್‌ ದ ಟ್ರೈಕಲರ್‌ ಲೇಖನದ ಪ್ರಕಾರ 1931ರಲ್ಲಿ ಕಾಂಗ್ರೆಸ್‌ ನ ಫ್ಲ್ಯಾಗ್‌ ಕಮಿಟಿ ಆಗ ಇದ್ದ ಧ್ವಜದಲ್ಲಿ ಕೆಲವೊಂದು ಬದಲಾವಣೆ ಮಾಡಿತ್ತು. ಧ್ವಜದಲ್ಲಿದ್ದ ಕೆಂಪು ಬಣ್ಣದ ಬದಲಿಗೆ ಕೇಸರಿ ಬಣ್ಣವನ್ನು ಅಳವಡಿಸಲಾಯಿತು. ಜೊತೆಗೆ ಬಣ್ಣಗಳ ಕ್ರಮವನ್ನು ಬದಲಾಯಿಸಿ ಈಗಿರುವ ಕ್ರಮದಲ್ಲಿ ಜೋಡಿಸಲಾಯಿತು.

ದೇಶವು ಬ್ರಿಟಿಷರಿಂದ ಸ್ವತಂತ್ರಗೊಳ್ಳಲು ಕೆಲ ತಿಂಗಳುಗಳು ಇರುವಾಗ ಸಂವಿಧಾನ ಸಭೆಯ ಸದಸ್ಯರಾಗಿದ್ದ ಬದ್ರುದ್ದೀನ್‌ ಅವರಲ್ಲಿ ಜವಹರಲಾಲ್‌ ನೆಹರೂ ಅವರು ರಾಷ್ಟ್ರೀಯ ಲಾಂಛನವೊಂದನ್ನು ತಯಾರಿಸುವಂತೆ ಹೇಳಿದ್ದರು. ರಾಷ್ಟ್ರೀಯ ಲಾಂಛನದ ವಿನ್ಯಾಸ ಮಾಡುವಂತೆ ಬದ್ರುದ್ದೀನ್‌ ಹಲವಾರು ಕಲಾ ಕಾಲೇಜುಗಳಿಗೆ ಪತ್ರ ಬರೆದರು. ಹೆಚ್ಚಿನ ಲಾಂಛನಗಳು ಬ್ರಿಟಷರ ರಾಷ್ಟ್ರೀಯ ಲಾಂಛನವನ್ನೇ ಹೋಲುತ್ತಿದ್ದವು. ಆನಂತರ ಬದ್ರುದ್ದೀನ್‌ ಮತ್ತು ಸುರಯ್ಯ ತಯ್ಯಬ್ಜಿ ಸಾರನಾಥದಲ್ಲಿರುವ ಅಶೋಕ ಸ್ಥಂಬದ ಚಕ್ರವನ್ನು ಚಿತ್ರಿಸಿ ಪ್ರಿಂಟ್ ಮಾಡಿಸಿದ್ದರು. ಆನಂತರ ತ್ರಿವರ್ಣ ಧ್ವಜದ ಮಧ್ಯದಲ್ಲಿ ಚರಕದ ಬದಲಾಗಿ ಚಕ್ರವನ್ನು ಬಿಡಿಸಲಾಯಿತು. ಇದು ಎಲ್ಲರ ಗಮನ ಸೆಳೆದಿತ್ತು ಎಂದು ಸುರಯ್ಯ ಅವರ ಪುತ್ರಿ ಲೈಲಾ ತಯ್ಯಬ್ಜಿ ದ ವೈರ್‌ ಲೇಖನವೊಂದರಲ್ಲಿ ವಿವರಿಸುತ್ತಾರೆ.
 
ನನ್ನ ತಾಯಿ ಸುರಯ್ಯ ಅವರ ಉಸ್ತುವಾರಿಯಲ್ಲಿ ಕನಾಟ್ ಪ್ಲೇಸ್ ನಲ್ಲಿ ಎಡ್ಡಿ ಟೆಲರ್ಸ್ ಎಂಡ್ ಡ್ರೆಪರ್ಸ್ ಅವರು ಹೊಲಿದ ಆ ಮೊದಲ ಧ್ವಜ ರೈಸಿನ ಹಿಲ್ ನಲ್ಲಿ ಹಾರುವುದನ್ನು ನೋಡಿದರು ಎಂದು ಬರೆಯುತ್ತಾರೆ ಲೈಲಾ.

ಸುರಯ್ಯ ಅವರು ವಿನ್ಯಾಸಗೊಳಿಸಿದ್ದ ಚರಕದ ಬದಲಿಗೆ ಅಶೋಕ ಚಕ್ರವಿರುವ ಧ್ವಜವು ಸರ್ವಾನುಮತದಿಂದ ದೇಶದ ರಾಷ್ಟ್ರಧ್ವಜವಾಗಿ ಆಯ್ಕೆಯಾಯಿತು. 1947ರ ಜುಲೈ 22ರಂದು ಜವಹರಲಾಲ್‌ ನೆಹರೂ ಅವರು ಪ್ರಸ್ತಾಪಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಧ್ವಜವನ್ನು ಸಂವಿಧಾನ ಸಭೆಯು ಅಂಗೀಕರಿಸಿತು. 

ಇತಿಹಾಸಕಾರ, ವಾಯ್ಸ್‌ ಆಫ್‌ ತೆಲಂಗಾಣ ಅಧ್ಯಕ್ಷ ಕ್ಯಾಪ್ಟನ್‌ ಎಲ್.‌ ಪಾಂಡುರಂಗ ರೆಡ್ಡಿ ಈ ಹಿಂದೆ ತ್ರಿವರ್ಣ ಧ್ವಜದ ವಿನ್ಯಾಸಕಾರರು ಸುರಯ್ಯ ತಯ್ಯಬ್ಜಿಯೇ ಹೊರತು ಪಿಂಗಾಳಿ ವೆಂಕಯ್ಯ ಅವರಲ್ಲ ಎಂದಿದ್ದರು. ಆನಂತರ ಈ ಬಗ್ಗೆ ಭಾರೀ ಚರ್ಚೆಯೇ ನಡೆದಿತ್ತು. ಆಂಗ್ಲ ಇತಿಹಾಸಕಾರ ಟ್ರೆವರ್‌ ರಾಯಲ್‌ ʼದ ಲಾಸ್ಟ್‌ ಡೇಸ್‌ ಆಫ್‌ ರಾಜ್‌ ಪುಸ್ತಕದಲ್ಲಿ, "ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ್ದು, ಒಬ್ಬ ಮುಸ್ಲಿಂ ಬದ್ರುದ್ದೀನ್‌ ತಯ್ಯಬ್ಜಿಯಾಗಿದ್ದು, ನೆಹರೂ ಕಾರಿನಲ್ಲಿದ್ದ ಧ್ವಜವನ್ನು ತಯ್ಯಬ್ಜಿಯವರ ಪತ್ನಿ ವಿನ್ಯಾಸಗೊಳಿಸಿದ್ದರು" ಎಂದು ಬರೆದಿದ್ದರು. ನವೀನ್ ಜಿಂದಾಲ್‌ ಅವರ ಎನ್‌ ಜಿಒ ಫ್ಲ್ಯಾಗ್‌ ಫೌಂಡೇಶನ್‌ ಆಫ್‌ ಇಂಡಿಯಾ ಕೂಡ ಸುರಯ್ಯ ಬದ್ರುದ್ದೀನ್‌ ತಯ್ಯಬ್ಜಿಯವರೇ ಭಾರತದ ತ್ರಿವರ್ಣ ಧ್ವಜದ ವಿನ್ಯಾಸಕಾರರು ಎಂದು ಹೇಳುತ್ತದೆ. ಆಗಸ್ಟ್‌ 14ರಂದು ರಾಷ್ಟ್ರಧ್ವಜವನ್ನು ಪ್ರಸ್ತುತಪಡಿಸಿದ ಫ್ಲ್ಯಾಗ್‌ ಪ್ರೆಸೆಂಟೇಶನ್‌ ಕಮಿಟಿಯ ಸದಸ್ಯರ ಹೆಸರುಗಳಲ್ಲಿ ಸುರಯ್ಯ ಅವರ ಹೆಸರೂ ಇದೆ. 

ಈ ರೀತಿ ನಮ್ಮ ರಾಷ್ಟ್ರಧ್ವಜಕ್ಕೆ ಅಂತಿಮ ರೂಪ ಕೊಟ್ಟ ಒಬ್ಬ ಮಹಿಳೆಯನ್ನು ನಾವೆಲ್ಲರೂ ಮರೆತಿದ್ದೇವೆ. ದೇಶಕ್ಕಾಗಿ ಬದ್ರುದ್ದೀನ್‌ ಮತ್ತು ಅವರ ಕುಟುಂಬ ದಶಕಗಳ ಸೇವೆ ಸಲ್ಲಿಸಿತ್ತು. ಸ್ವಾತಂತ್ರ್ಯಾ ನಂತರ ನೂತನವಾಗಿ ರಚನೆಯಾದ ಪಾಕಿಸ್ತಾನ ಸರಕಾರದಲ್ಲಿ ಉನ್ನತ ಹುದ್ದೆಯೊಂದನ್ನು ಆಫರ್‌ ಮಾಡಿದ್ದಾಗ ಬದ್ರುದ್ದೀನ್‌ ಅದನ್ನು ನಿರಾಕರಿಸಿ ಪತ್ರವೊಂದನ್ನು ಬರೆದಿದ್ದರು. "ನಾನು ಭಾರತದಲ್ಲೇ ಉಳಿದುಕೊಳ್ಳುತ್ತೇನೆ ಮತ್ತು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದಿದ್ದರು. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ತ್ರಿವರ್ಣ ಧ್ವಜಕ್ಕೆ ಸುರಯ್ಯ ಅವರು ನೀಡಿದ ಕೊಡುಗೆ ಬಗ್ಗೆ ಎಲ್ಲೂ ಹೆಚ್ಚಿನ ಮಾಹಿತಿಗಳಿಲ್ಲ. 1978ರಲ್ಲಿ ಮುಂಬೈಯಲ್ಲಿ ಸುರಯ್ಯ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News