ಪ್ರಧಾನಿಯ ‘ಉಚಿತ ಸೌಲಭ್ಯ’ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡ ಕೇಜ್ರಿವಾಲ್

Update: 2022-08-15 18:09 GMT

ಹೊಸದಿಲ್ಲಿ, ಆ. 15: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆ ಭಾರತದ ಅಭಿವೃದ್ಧಿಗೆ ಅಗತ್ಯವಾಗಿದೆ. ಈ ಕಲ್ಯಾಣ ಯೋಜನೆಗಳನ್ನು ‘ಉಚಿತ ಸೌಲಭ್ಯ’ ಎಂದು ಕರೆಯಲು ಸಾಧ್ಯವಾಗದು ಎಂದು ಪ್ರತಿಪಾದಿಸಿದ್ದಾರೆ.

ಗುಣಮಟ್ಟದ ಶಿಕ್ಷಣ ಕೇವಲ ಒಂದು ತಲೆಮಾರಿನ ಬಡತನವನ್ನು ನಿರ್ಮೂಲನೆ ಮಾಡಲು ನೆರವಾಗುತ್ತದೆ ಎಂದು ಅವರು ಹೇಳಿದರು. ‘‘ಶಿಕ್ಷಣ ಕ್ರಾಂತಿಯ ಕಾರಣಕ್ಕೆ ಬಡ ವ್ಯಕ್ತಿಯೋರ್ವನ ಮಗು ದಿಲ್ಲಿಯಲ್ಲಿ ವಕೀಲ ಅಥವಾ ಎಂಜಿನಿಯರ್ ಆಗಬಹುದು’’ ಎಂದು ಕೇಜ್ರಿವಾಲ್ ಹೇಳಿದರು.

ದಿಲ್ಲಿ ಸರಕಾರ ಆಯೋಜಿಸಿದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್, ಬಡವರಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆ ಪೂರೈಸುವ ಮೂಲಕ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

‘‘ನಾವು ಸರಕಾರಿ ಆಸ್ಪತ್ರೆಗಳ ಮೂಲಭೂತ ಸೌಕರ್ಯವನ್ನು ಸುಧಾರಿಸಿದ್ದೇವೆ ಹಾಗೂ ಮೊಹಲ್ಲಾ ಕ್ಲಿನಿಕ್‌ಗಳನ್ನು ಆರಂಭಿಸಿದ್ದೇವೆ. ದಿಲ್ಲಿಯಲ್ಲಿ ಪ್ರತಿಯೊಬ್ಬರಿಗೆ ಉಚಿತ ಆರೋಗ್ಯ ಸೇವೆ ಲಭ್ಯವಾಗಬೇಕು. ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ಉಚಿತ ಸೌಲಭ್ಯ ಅಲ್ಲ’’ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮತದಾರರಿಗೆ ಉಚಿತ ಸೌಲಭ್ಯ ನೀಡುವ ವಿರುದ್ಧ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News