ಪಾನೀಯದಲ್ಲಿ ನಿದ್ರಾಜನಕ ಬೆರೆಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಗಾಝಿಯಾಬಾದ್: ಹುಟ್ಟುಹಬ್ಬದ ಪಾರ್ಟಿಯಲ್ಲಿ ಯುವತಿಗೆ ನಿದ್ರಾಜನಕ ಬೆರೆಸಿದ ಪಾನೀಯ ಕುಡಿಸಿದ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಗಾಝಿಯಾಬಾದ್ ಜಿಲ್ಲೆಯ ಮೋದಿ ನಗರದಲ್ಲಿ ನಡೆದಿದೆ.
ಆರೋಪಿಗಳಾದ ಶೇಖರ್, ಕೃಷ್ಣ ಮತ್ತು ಅರ್ಜುನ್ ಎಂಬವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿ ರವಿವಾರ ರಾತ್ರಿ ಹುಟ್ಟುಹಬ್ಬದ ಪಾರ್ಟಿಯೊಂದಕ್ಕೆ ಹೋಗಿದ್ದಾಗ ಆಕೆಗೆ ನಿದ್ರಾಜಕರ ಬೆರೆಸಿದ ಪಾನೀಯ ನೀಡಲಾಗಿದೆ. ಬಳಿಕ ವ್ಯಕ್ತಿಯೊಬ್ಬ ಆಕೆಯನ್ನು ಕೊಠಡಿಗೆ ಕರೆದೊಯ್ದು ತನ್ನ ಸ್ನೇಹಿತರನ್ನೂ ಕರೆದು ಒಬ್ಬರ ಬಳಿಕ ಮತ್ತೊಬ್ಬರಂತೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿಗೆ ಪ್ರಜ್ಞೆ ಮರುಕಳಿಸಿದಾಗ ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಆರೋಪಿಗಳು ಆಕೆಯನ್ನು ಥಳಿಸಿ ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಅವರು ಅಲ್ಲಿಂದ ಪಲಾಯನ ಮಾಡಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
ಬಳಿಕ ಮನೆಗೆ ಬಂದ ಯುವತಿ ಕುಟುಂಬದ ಜತೆ ಘಟನೆಯನ್ನು ಹಂಚಿಕೊಂಡಿದ್ದಾರೆ. ಸೋಮವಾರ ತಂದೆಯ ಜತೆ ಮೋದಿ ನಗರ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಲಾಗಿದ್ದು, ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ವೈದ್ಯಕೀಯ ವರದಿ ದೃಢಪಡಿಸಿದೆ. ಆರೋಪಿಗಳಾದ ಶೇಖರ್, ಕೃಷ್ಣ ಮತ್ತು ಅರ್ಜುನ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಗ್ರಾಮೀಣ ಎಎಸ್ಪಿ ಐರಾಜ್ ರಾಜಾ ಹೇಳಿದ್ದಾರೆ.