60 ವರ್ಷ ಮೇಲ್ಪಟ್ಟ ಬಿಸಿಯೂಟ ಕಾರ್ಯಕರ್ತರ ವಜಾ; ಚಿಕ್ಕಮಗಳೂರಿನಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತೆಯರು ಮನೆಗೆ?

Update: 2022-08-18 10:19 GMT

ಚಿಕ್ಕಮಗಳೂರು, ಆ.18: ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ಸರಕಾರಿ ಶಾಲಾ ಮಕ್ಕಳಿಗೆ ಲಕ್ಷಾಂತರ ಕಾರ್ಯಕರ್ತೆಯರು ಅನ್ನ ಹಾಕುತ್ತಿದ್ದಾರೆ. ಈ ಪೈಕಿ 60 ವರ್ಷ ಪೂರೈಸಿದ ಕಾರ್ಯಕರ್ತೆಯರನ್ನು ರಾಜ್ಯ ಸರಕಾರ ವಜಾ ಮಾಡಿ ಮನೆಗೆ ಕಳುಹಿಸುತ್ತಿದೆ. ಕಾಫಿನಾಡಿನಲ್ಲಿ ಸುಮಾರು 500ಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಸರಕಾರದ ಯಾವುದೇ ಸೌಲಭ್ಯಗಳನ್ನೂ ಪಡೆಯದೇ ಬರೀಗೈಲಿ ಮನೆಯ ಹಾದಿ ತುಳಿಯುವಂತಾಗಿದೆ.

ರಾಜ್ಯ ಸರಕಾರ 2003, ಫೆ.3ರಂದು ಸರಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಅಕ್ಷರ ದಾಸೋಹ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯಡಿ ರಾಜ್ಯಾದ್ಯಂತ ಲಕ್ಷಾಂತರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಕಾಫಿನಾಡಿನಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರಿದ್ದು, ಈ ಪೈಕಿ ಕಳೆದ ಹಲವು ದಶಕಗಳಿಂದ ಶಾಲಾ ಮಕ್ಕಳಿಗೆ ಅನ್ನ ಹಾಕುತ್ತಿದ್ದ ಕೈಗಳು ಸದ್ಯ ತಮ್ಮ ವಯಸ್ಸಿನ ಕಾರಣಕ್ಕಾಗಿ ಕೆಲಸ ಕಳೆದುಕೊಳ್ಳಬೇಕಾದ ಆತಂಕದಲ್ಲಿದ್ದಾರೆ. ರಾಜ್ಯ ಸರಕಾರ 60 ವರ್ಷ ತುಂಬಿಸಿ ಬಿಸಿಯೂಟ ಕಾರ್ಯಕರ್ತೆಯರನ್ನು ಕೆಲಸದಿಂದ ಬಿಡುಗಡೆ ಮಾಡುವ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಈ ಸಾಲಿನಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. 

ಮೂರು ದಶಕಗಳಿಂದ ಅತ್ಯಂತ ಕಡಿಮೆ ವೇತನಕ್ಕೆ ಕೆಲಸ: ಚಿಕ್ಕಮಗಳೂರು ಜಿಲ್ಲೆಯ 9 ತಾಲೂಕು ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಕರ್ತೆಯರಿಗೆ ಸರಕಾರ ನೀಡುತ್ತಿರುವ ವೇತನ ಕೇವಲ 2700 ರೂ. ಮಾತ್ರ. ಇತ್ತೀಚೆಗೆ ಬಿಸಿಯೂಟ ಕಾರ್ಯಕರ್ತೆಯರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಕಾರ್ಯಕರ್ತೆಯರ ವೇತನದಲ್ಲಿ 1 ಸಾವಿರ ರೂ. ಹೆಚ್ಚಳ ಮಾಡಿದ್ದು, ಸದ್ಯ 3700 ರೂ. ವೇತನ ಪಡೆಯುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡುವ ಬಿಸಿಯೂಟ ಕಾರ್ಯಕರ್ತೆಯರು ಸರಕಾರದ ಅತ್ಯಂತ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ. ಇದರ ಹೊರತಾಗಿ ಸರಕಾರದ ಯಾವುದೇ ಸೌಲಭ್ಯಗಳು ಈ ನೌಕರರಿಗಿಲ್ಲವಾಗಿದ್ದು, ಉದ್ಯೋಗದ ಭದ್ರತೆಗಾಗಿ ಇಎಸ್‍ಐ ಸೌಲಭ್ಯ, ಪಿಎಫ್, ನಿವೃತ್ತಿ ಬಳಿಕ ನಿಡಗಂಟು ಯೋಜನೆ ಸೇರಿದಂತೆ ಕೆಲಸ ಖಾಯಂ ನಂತಹ ಬೇಡಿಕೆಗಳಿಗೆ ಸರಕಾರಗಳು ಇದುವರೆಗೂ ಸ್ಪಂದಿಸದ ಹಿನ್ನೆಲೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಸರಕಾರದ ಯಾವುದೇ ಸೌಲಭ್ಯವಿಲ್ಲದೇ ಕನಿಷ್ಠ ವೇತನಕ್ಕೆ ದುಡಿಯುವುದು ಅನಿವಾರ್ಯ ಎಂಬಂತಾಗಿದೆ.

ಜಿಲ್ಲೆಯಲ್ಲಿ ಕೆಲಸ ಕಳೆದುಕೊಂಡ 206 ಕಾರ್ಯಕರ್ತೆಯರು: ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳ ವಿವಿಧ ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ಕಾರ್ಯಕರ್ತೆಯರು 2003ರಿಂದಲೂ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಮಕ್ಕಳಿಗೆ ಅನ್ನ ಉಣಿಸುವ ಕೆಲಸ ಮಾಡುತ್ತಿದ್ದಾರೆ. 60 ವರ್ಷ ತುಂಬಿದ ಕಾರ್ಯಕರ್ತೆಯರನ್ನು ಕೆಲಸದಿಂದ ಬಿಡುಗಡೆ ಮಾಡುವ ಸರಕಾರದ ಆದೇಶ ಹೊರಬಿದ್ದ ಬಳಿಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಮಾರ್ಚ್ ಅಂತ್ಯಕ್ಕೆ 206 ಮಂದಿ ಕೆಲಸ ಕಳೆದುಕೊಂಡಿದ್ದು, ಚಿಕ್ಕಮಗಳೂರು ತಾಲೂಕೊಂದರಲ್ಲೇ 54 ಮಂದಿ ಕೆಲಸದಿಂದ ಬಿಡುಗಡೆಯಾಗಿದ್ದಾರೆ. 60 ವರ್ಷದ ಅಂಚಿನಲ್ಲಿರುವ ಕಾರ್ಯಕರ್ತೆಯರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಿರುವುದರಿಂದ ಅವರೆಲ್ಲೂ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಸರಕಾರ ಆಧಾರ್ ಕಾರ್ಡ್‍ನಲ್ಲಿರುವ ವಯಸ್ಸಿನ ದಾಖಲೆ ಪರಿಗಣಿಸಿ 60 ವರ್ಷ ತುಂಬುತ್ತಿದ್ದಂತೆ ಕಾರ್ಯಕರ್ತೆಯರನ್ನು ಕೆಲಸದಿಂದ ಹಂತಹಂತವಾಗಿ ಬಿಡುಗಡೆ ಮಾಡುತ್ತಿದೆ. ಬಿಸಿಯೂಟ ಕಾರ್ಯಕರ್ತೆಯರ ಫೆಡರೇಶನ್ ಮುಖಂಡರ ಮಾಹಿತಿ ಪ್ರಕಾರ ಜಿಲ್ಲಾದ್ಯಂತ 500ಕ್ಕೂ ಹೆಚ್ಚು ಮಂದಿ ಈ ಸಾಲಿನಲ್ಲೇ ಕೆಲಸ ಕಳೆದುಕೊಳ್ಳಲಿದ್ದಾರೆ.


ಇದನ್ನೂ ಓದಿ:  ಬೆಂಗಳೂರು | ಬೇಡಿಕೆ ಈಡೇರಿಸುವ ಭರವಸೆ ಹಿನ್ನೆಲೆ: 2 ದಿನಗಳಿಂದ ನಡೆಯುತ್ತಿದ್ದ ದಾಸೋಹ ನೌಕರರ ಧರಣಿ ವಾಪಸ್

'ಕೊಟ್ಟ ಭರವಸೆಯನ್ನೂ ಈಡೇರಿಸದೇ ವಂಚನೆ':

60 ವರ್ಷ ತುಂಬಿದ ಬಿಸಿಯೂಟ ಕಾರ್ಯಕರ್ತೆರನ್ನು ಕೆಲಸದಿಂದ ಬಿಡುಗಡೆ ಮಾಡುವ ಆದೇಶ ಹೊರ ಬಿದ್ದ ಬಳಿಕ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದು, ಈ ವೇಳೆ 60 ವರ್ಷ ತುಂಬಿದವನ್ನು ಕೆಲಸದಿಂದ ತೆಗೆಯಲ್ಲ ಎಂದು ಶಿಕ್ಷಣ ಸಚಿವ ನಾಗೇಶ್ ಭರವಸೆಯನ್ನೂ ನೀಡಿದ್ದರು. ಆದರೆ ಈ ಭರವಸೆ ಸುಳ್ಳಾಗಿದೆ ಎಂಬುದು ಫೆಡರೇಶನ್ ಮುಖಂಡರ ಆರೋಪವಾಗಿದೆ.

ಜಿಲ್ಲೆಯಲ್ಲಿ ಸದ್ಯ 206 ಬಿಸಯೂಟ ಕಾರ್ಯಕರ್ತೆಯರು ಕೆಲಸ ಕಳೆದುಕೊಂಡಿದ್ದು, 60 ವರ್ಷದ ಅಂಚಿನಲ್ಲಿರುವವರು ಹಂತಹಂತವಾಗಿ ಕೆಲಸ ಕಳೆದುಕೊಳ್ಳಲಿದ್ದಾರೆ. ಹೀಗೆ ಕೆಲಸ ಕಳೆದುಕೊಂಡ ಕಾರ್ಯಕರ್ತೆಯರ ಬದಲಿಗೆ ಹೊಸ ಕಾರ್ಯಕರ್ತೆರ ನೇಮಕಾತಿ ಪ್ರಕ್ರಿಯೂ ಜಿಲ್ಲೆಯಲ್ಲಿ ನಡೆದಿದ್ದು, ನಿವೃತ್ತಿಯಾದವರ ಕುಟುಂಬಸ್ಥರಿಗೆ ಕೆಲಸ ನೀಡಬೇಕೆಂಬ ಆಗ್ರಹವನ್ನು ಫೆಡರೇಶನ್ ಸರಕಾರದ ಮುಂದಿಟ್ಟಿದೆ. ಈ ಸಂಬಂಧ ಸರಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸರಕಾರ ಅಧಿಕೃತ ಆದೇಶವನ್ನು ಹೊರಡಿಸಿಲ್ಲ.

3 ತಿಂಗಳಿನಿಂದ ವೇತನ ಇಲ್ಲ: ಸದ್ಯ ಬಿಸಿಯೂಟ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಕಳೆದ ಮೇ ತಿಂಗಳಿನಿಂದ ವೇತನ ಬಿಡುಗಡೆ ಮಾಡಿಲ್ಲ. ಆಗಸ್ಟ್ ತಿಂಗಳ ಅಂತ್ಯಕ್ಕೆ ಸರಕಾರ ವೇತನ ನೀಡುವುದಾಗಿ ಹೇಳುತ್ತಿದ್ದು, ವೇತನ ಬಿಡುಗಡೆಯಾಗದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಕಾರ್ಯಕರ್ತೆಯರು ಸಜ್ಜಾಗುತ್ತಿದ್ದಾರೆ.

ಒಟ್ಟಾರೆ ರಾಜ್ಯ ಸರಕಾರ ಬಿಸಿಯೂಟ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡಿ ದುಡಿಸಿಕೊಂಡಿದ್ದು, 60 ವರ್ಷ ತುಂಬಿದ ಕಾರ್ಯಕರ್ತೆಯರಿಗೆ ಯಾವುದೇ ಸರಕಾರಿ ಸೌಲಭ್ಯ ನೀಡದೇ ಕೆಲಸದಿಂದ ತೆಗೆದು ಹಾಕುತ್ತಿರುವುದು ಸರಕಾರದ ಅಮಾನವೀಯ ನಡೆ ಎಂಬ ಟೀಕೆ ವ್ಯಾಪಕವಾಗಿ ಕೇಳಿ ಬರುತ್ತಿದೆ.

'60 ವರ್ಷ ಪೂರೈಸಿದ ಕಾರ್ಯಕರ್ತೆಯರನ್ನು ಸರಕಾರ ವಜಾ ಮಾಡುತ್ತಿರುವುದು ಅಮಾನವೀಯ ದೋರಣೆಯಾಗಿದೆ. ಬಿಸಿಯೂಟ ಕಾರ್ಯಕರ್ತೆಯರಿಗೆ ಸರಕಾರ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಕೊನೆಪಕ್ಷ ನಿವೃತ್ತಿ ಬಳಿಕ ಕಾರ್ಯಕರ್ತೆಯರ ಕುಟುಂಬ ನಿರ್ವಹಣೆಗಾಗಿ 1 ಲಕ್ಷ ರೂ. ಇಡಗಂಟು ನೀಡಬೇಕೆಂಬ ಬೇಡಿಕೆಯನ್ನೂ ಸರಕಾರ ಈಡೇರಿಸಿಲ್ಲ. ಸರಕಾರ ಬಿಸಿಯೂಟ ಕಾರ್ಯಕರ್ತೆರ ಸೇವೆ ಪಡೆದು ವಯಸ್ಸಿನ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕುತ್ತಿರುವುದು ವಿಪರ್ಯಾಸ. ಕೆಲಸ ಕಳೆದುಕೊಂಡವರ ಕುಟುಂಬಸ್ಥರಿಗೆ ಕೆಲಸ ನೀಡಬೇಕೆಂಬ ಬೇಡಿಕೆ ಇಟ್ಟಿದ್ದೇವೆ. ಸರಕಾರ ಇದಕ್ಕಾದರೂ ಸ್ಪಂದಿಸುತ್ತದೋ ಎಂಬುದನ್ನು ಕಾದು ನೋಡಬೇಕು'. 

- ಇಂದುಮತಿ, ಬಿಸಿಯೂಟ ಫೆಡರೇಶನ್ ಜಿಲ್ಲಾಧ್ಯಕ್ಷೆ

---------------------------------------------

 'ಸರಕಾರದ ಆದೇಶದ ಮೇರೆಗೆ 60 ವರ್ಷ ತುಂಬಿದವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗುತ್ತಿದೆ. ಕಳೆದ ಮಾರ್ಚ್ ಅಂತ್ಯಕ್ಕೆ 206 ಮಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಅವರ ಜಾಗದಲ್ಲಿ ಬೇರೆಯವರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಬಿಡುಗಡೆಗೊಂಡವರ ವೇತನವನ್ನು ನೀಡಲಾಗಿದೆ'.

- ಸುಂದರೇಶ್, ಶಿಕ್ಷಣಾಧಿಕಾರಿ, ಜಿಪಂ ಅಕ್ಷರದಾಸೋಹ ಯೋಜನೆ
 

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News