ಬಹುಭಾಷಾ ನಟಿ ತ್ರಿಶಾ ಕೃಷ್ಣನ್‌ ಕಾಂಗ್ರೆಸ್‌ ಮೂಲಕ ರಾಜಕೀಯ ಪ್ರವೇಶ?

Update: 2022-08-20 16:37 GMT
Photo: Twitter/LutyensMediaIN

 ಚೆನ್ನೈ: ಬಹುಭಾಷಾ ನಟಿ ತ್ರಿಶಾ ಕೃಷ್ಣನ್‌ ಅವರು ಶೀಘ್ರದಲ್ಲೇ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ವರದಿಗಳು ಬರತೊಡಗಿವೆ.

ನಟಿ ತ್ರಿಶಾ ತಮ್ಮ 39 ನೇ ವಯಸ್ಸಿನಲ್ಲಿ ರಾಜಕೀಯ ಜೀವನ ಆರಂಭಿಸಲು ಬಯಸಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ತ್ರಿಶಾ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ, ಆದರೆ ತ್ರಿಶಾ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ತಮಿಳುನಾಡಿನಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಕಾಂಗ್ರೆಸ್ ಗೆ ತ್ರಿಶಾ ಯಾಕೆ ಸೇರಲಿದ್ದಾರೆ ಅನ್ನುವುದೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಇದುವರೆಗೂ ತ್ರಿಶಾ ಅವರು ಯಾವುದೇ ಅಧಿಕೃತ ಮಾಹಿತಿಯನ್ನು ಹೊರಬಿಟ್ಟಿಲ್ಲ.

ತೆಲುಗಿನ ‘ವರ್ಷಂ’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಟಿ ತ್ರಿಶಾ ಕೃಷ್ಣನ್ ದಕ್ಷಿಣ ಭಾರತದ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ತ್ರಿಶಾ 2002 ರ ತಮಿಳು ಚಿತ್ರ 'ಮೌನಂ ಪೇಸಿಯತೇʼ ಮೂಲಕ ತಮಿಳಿಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಕನ್ನಡದಲ್ಲಿ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ʼಪವರ್‌ʼ ಚಿತ್ರದಲ್ಲೂ ನಟಿಸಿದ್ದ ತ್ರಿಶಾ, ದ್ವಿತ್ವ ಚಿತ್ರಕ್ಕೂ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಪುನೀತ್‌ ರಾಜ್‌ಕುಮಾರ್‌ ಅಕಾಲಿಕ ನಿಧನದಿಂದ ಆ ಚಿತ್ರವನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ತಮಿಳಿನ ಥ್ರಿಲ್ಲರ್ ಚಿತ್ರ ಪರಮಪದಂ ವಿಲಯಾಟ್ಟು ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟಿ ತ್ರಿಶಾ ಪ್ರಸ್ತುತ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಟಿ ತ್ರಿಶಾ ಸದ್ಯ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News