ತಾಲಿಬಾನ್ ಅಧಿಕಾರಿಗಳ ಪ್ರಯಾಣ ನಿಷೇಧ ವಿನಾಯತಿ ಅಂತ್ಯಕ್ಕೆ ವಿಶ್ವಸಂಸ್ಥೆ ನಿರ್ಧಾರ

Update: 2022-08-20 17:05 GMT

ಜಿನೆವಾ, ಆ.20: ತಾಲಿಬಾನ್ ನ 13 ಅಧಿಕಾರಿಗಳಿಗೆ ನೀಡಿದ್ದ ಪ್ರಯಾಣ ನಿಷೇಧ ವಿನಾಯತಿಯನ್ನು ಅಂತ್ಯಗೊಳಿಸಲು ವಿಶ್ವಸಂಸ್ಥೆ ನಿರ್ಧರಿಸಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. 2011ರ ವಿಶ್ವಸಂಸ್ಥೆ ಭದ್ರತಾ ಸಮಿತಿ ನಿರ್ಣಯದ ಪ್ರಕಾರ 135 ತಾಲಿಬಾನ್ ಅಧಿಕಾರಿಗಳ ವಿರುದ್ಧ ಆಸ್ತಿ ಸ್ಥಂಭನ, ಪ್ರಯಾಣ ನಿಷೇಧ ಸೇರಿದಂತೆ ನಿರ್ಬಂಧ ಜಾರಿಗೊಳಿಸಲಾಗಿತ್ತು.

ಆದರೆ 13 ಅಧಿಕಾರಿಗಳಿಗೆ ಪ್ರಯಾಣ ನಿಷೇಧದಿಂದ ವಿನಾಯತಿ ನೀಡಲಾಗಿದ್ದು ಅವರು ವಿದೇಶಕ್ಕೆ ತೆರಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅವಕಾಶವಿತ್ತು. ಅಫ್ಘಾನ್ನಲ್ಲಿ ತಾಲಿಬಾನ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರ ಹಕ್ಕನ್ನು ಮೊಟಕುಗೊಳಿಸಿದ್ದಕ್ಕೆ ಪ್ರತಿಯಾಗಿ ಜೂನ್ನಲ್ಲಿ ತಾಲಿಬಾನ್ ನ ಇಬ್ಬರು ಶಿಕ್ಷಣ ಸಚಿವರನ್ನು ವಿನಾಯತಿ ಪಟ್ಟಿಯಿಂದ ಕೈಬಿಡುವ ನಿರ್ಧಾರವನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿಯ ಅಫ್ಘಾನಿಸ್ತಾನ ನಿರ್ಬಂಧ ಸಮಿತಿ ಕೈಗೊಂಡಿತ್ತು. ಉಳಿದವರಿಗೆ ಆಗಸ್ಟ್ 19ರವರೆಗೆ ವಿನಾಯತಿ ಮುಂದುವರಿಸುವ, ಯಾವುದೇ ಸದಸ್ಯರಿಂದ ಆಕ್ಷೇಪಣೆ ಬಾರದಿದ್ದಲ್ಲಿ ಮತ್ತೊಂದು ತಿಂಗಳು ಮುಂದುವರಿಸುವ ನಿರ್ಧಾರಕ್ಕೆ ಬರಲಾಗಿತ್ತು.

ಆದರೆ ಇದಕ್ಕೆ ಐರ್ಲ್ಯಾಂಡ್ ಆಕ್ಷೇಪ ಸಲ್ಲಿಸಿತು. ಚೀನಾ ಮತ್ತು ರಶ್ಯ ವಿನಾಯತಿ ಮುಂದುವರಿಸುವುದನ್ನು ಬೆಂಬಲಿಸಿದರೆ, ವಿನಾಯತಿ ಪಡೆಯುವ ಅಧಿಕಾರಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಅಮೆರಿಕ ಆಗ್ರಹಿಸಿತು. ಇದರಂತೆ ರಾಜತಾಂತ್ರಿಕ ಕಾರಣಗಳಿಗಾಗಿ ಪ್ರಯಾಣ ನಡೆಸಲು ತಾಲಿಬಾನ್ನ 6 ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡುವ ಹೊಸ ಪ್ರಸ್ತಾವನೆಯನ್ನು ಮಂಡಿಸಲಾಗಿದ್ದು, ಸೋಮವಾರದ ವರೆಗೆ ಇದಕ್ಕೆ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದಲ್ಲಿ ಇದು ಜಾರಿಗೆ ಬರಲಿದೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.

ಈ ಮಧ್ಯೆ, 13 ತಾಲಿಬಾನ್ ಅಧಿಕಾರಿಗಳಿಗೆ ಪ್ರಯಾಣ ನಿಷೇಧ ವಿನಾಯತಿ ಒದಗಿಸುವ ಹಳೆಯ ಪ್ರಸ್ತಾವನೆ ಶುಕ್ರವಾರ ಅಂತ್ಯಗೊಂಡಿದೆ. ಇದರಲ್ಲಿ ಉಪಪ್ರಧಾನಿ ಅಬ್ದುಲ್ ಘನಿ ಬರಾದಾರ್, ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಶೇರ್ ಮುಹಮ್ಮದ್ ಅಬ್ಬಾಸ್ ಸ್ಟನೆಕ್ಝಾ ಸೇರಿದ್ದಾರೆ. ಇವರಿಬ್ಬರು ಅಫ್ಘಾನ್ನಿಂದ ಅಮೆರಿಕ ನೇತೃತ್ವದ ವಿದೇಶಿ ಸೇನೆ ವಾಪಸಾತಿಗೆ 2020ರಲ್ಲಿ ಅಮೆರಿಕ ಸರಕಾರದೊಂದಿಗೆ ನಡೆದ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮಾನವ ಹಕ್ಕುಗಳಿಗೆ ಪ್ರಯಾಣ ನಿಷೇಧವನ್ನು ಲಿಂಕ್ ಮಾಡುವ ಪಾಶ್ಚಿಮಾತ್ಯ ನಿಲುವು ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಲಿದೆ ಎಂದು ಭದ್ರತಾ ಸಮಿತಿಯ ಪರ್ಯಾಯ ಅಧ್ಯಕ್ಷ ದೇಶವಾಗಿರುವ ಚೀನಾದ ವಿಶ್ವಸಂಸ್ಥೆ ನಿಯೋಗದ ವಕ್ತಾರರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News