ತಮ್ಮದೇ ರಿವಾಲ್ವರ್‌ನಿಂದ ಆಕಸ್ಮಿಕವಾಗಿ ಸಿಡಿದ ಗುಂಡು: ಅಕಾಲಿದಳ ಮುಖಂಡ ಮೃತ್ಯು

Update: 2022-08-21 02:20 GMT
(ಕೃಪೆ: HT Photo)

ಚಂಡೀಗಢ: ಶಿರೋಮಣಿ ಅಕಾಲಿದಳದ ಹಿರಿಯ ಮುಖಂಡ ಹಾಗೂ ಮೋಗಾ ಅಭಿವೃದ್ಧಿ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಯೋಗೇಶ್ ಗೋಯಲ್ ಅವರು ತಮ್ಮ ಲೈಸನ್ಸ್ ಹೊಂದಿದ ರಿವಾಲ್ವರ್ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ ಮೃತಪಟ್ಟಿದ್ದಾರೆ. ಗೋಯಲ್ ಅವರು ಉದ್ಯಮಿ ಹಾಗೂ ಮೋಗಾ ನಗರದಲ್ಲಿ ಮಲ್ಟಿಪ್ಲೆಕ್ಸ್ ಮಾಲಕರಾಗಿದ್ದರು.

ರಾತ್ರಿ ಊಟದ ಬಳಿಕ ತಂದೆ ತಮ್ಮ ಕೊಠಡಿಗೆ ವಿಶ್ರಾಂತಿಗೆ ತೆರಳಿದ್ದರು. ಕೆಲ ಹೊತ್ತಿನ ಬಳಿಕ ಅವರ ಕೊಠಡಿಯಿಂದ ಗುಂಡಿನ ಸದ್ದು ಕೇಳಿಸಿತು. ಕೊಠಡಿಗೆ ಧಾವಿಸಿದಾಗ, ರಿವಾಲ್ವರ್ ಜತೆಗೆ ನೆಲದಲ್ಲಿ ಬಿದ್ದದ್ದು ಕಂಡುಬಂತು. ತಕ್ಷಣವೇ ಖಾಸಗಿ ಆಸ್ಪತ್ರೆಗೆ, ಅಲ್ಲಿಂದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾಗಿ ಅವರ ಪುತ್ರ ತುಷಾರ್ ಗೋಯಲ್ ಹೇಳಿಕೆ ನೀಡಿದ್ದಾರೆ ಎಂದು ಠಾಣಾಧಿಕಾರಿ ದಲ್ಜೀತ್ ಸಿಂಗ್ ಪ್ರಕಟಿಸಿದ್ದಾರೆ.

ರಿವಾಲ್ವರ್‌ ನಿಂದ ಗುಂಡು ಆಕಸ್ಮಿಕವಾಗಿ ಸಿಡಿದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ. ಅಪರಾಧ ದಂಡಸಂಹಿತೆಯ ಸೆಕ್ಷನ್ 174ರ ಅನ್ವಯ ಮೋಗಾ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News