ಮಧ್ಯಪ್ರದೇಶ: ಆಂಬ್ಯುಲೆನ್ಸ್‌ ಕೊರತೆಯ ಸುದ್ದಿ ಮಾಡಿದ ಮೂವರು ಪತ್ರಕರ್ತರ ಮೇಲೆ ಎಫ್‌ಐಆರ್

Update: 2022-08-21 08:37 GMT

ಭೋಪಾಲ್:‌ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್‌ಗಳ ಕೊರತೆಯಿಂದಾಗಿ ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ಮಗನ ಕುರಿತ ಸುದ್ದಿಯನ್ನು ವರದಿ ಮಾಡಿದ್ದಕ್ಕಾಗಿ ಮೂವರು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಈ ಸುದ್ದಿಯನ್ನು ವರದಿ ಮಾಡಿದ Patrika, News18 ಹಾಗೂ Lalluram.com ಪತ್ರಕರ್ತರಾದ ಕುಂಜ್‌ಬಿಹಾರಿ ಕೌರವ್, ಅನಿಲ್ ಶರ್ಮಾ ಮತ್ತು ಎನ್‌ಕೆ ಭಟೆಲೆ ಅವರು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕತೆ), 505-2 (ವರ್ಗಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, 2008 ರ ಸೆಕ್ಷನ್ 69 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಾಬೋ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೀವ್ ಕೌರವ್ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಸುದ್ದಿ ಲೇಖನಗಳು "ಸುಳ್ಳು ಮತ್ತು ಆಧಾರರಹಿತ" ಎಂದು ಎಫ್‌ಐಆರ್‌ ನಲ್ಲಿ ಹೇಳಲಾಗಿದೆ ಎಂದು NDTV ವರದಿ ಮಾಡಿದೆ.



ಭಿಂಡ್ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಸ್ ಮತ್ತು ಕಂದಾಯ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡವು ಕುಟುಂಬವು ಆಂಬ್ಯುಲೆನ್ಸ್‌ಗೆ ಕರೆ ಮಾಡಲಿಲ್ಲ ಎಂದು ಹೇಳಿಕೊಂಡಿದೆ. ಜ್ಞಾನಪ್ರಸಾದ್ ವಿಶ್ವಕರ್ಮ ಎಂದು ಗುರುತಿಸಲಾದ ವ್ಯಕ್ತಿಯನ್ನು ಮೊದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಸರ್ಕಾರಿ ಆಸ್ಪತ್ರೆಗೆ ಅಲ್ಲ ಎಂದು ತಂಡ ಹೇಳಿದೆ.

ಆದರೆ, ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೂ ಸಿಗದ ಕಾರಣ ಸುಮಾರು 5 ಕಿಲೋಮೀಟರ್ ಗಾಡಿ ತಳ್ಳಬೇಕಾಯಿತು ಎಂದು ವ್ಯಕ್ತಿಯ ಮಗ ಹರಿಕೃಷ್ಣ ಮತ್ತು ಪುತ್ರಿ ಪುಷ್ಪಾ ಆರೋಪಿಸಿದ್ದಾರೆ.

ತಮ್ಮ ಕುಟುಂಬಕ್ಕೆ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಒದಗಿಸಲಾಗಿದೆ ಎಂಬ ಆಡಳಿತದ ಹೇಳಿಕೆಗಳನ್ನು ಪುಷ್ಪಾ ಸಹ ಪ್ರತಿಪಾದಿಸಿದ್ದಾರೆ ಎಂದು NDTV ವರದಿ ಮಾಡಿದೆ. "ನಮಗೆ ಪಿಎಂ ಆವಾಸ್ ಯೋಜನೆಯ ಒಂದು ಕಂತು ಮಾತ್ರ ಸಿಕ್ಕಿದೆ" ಎಂದು ಅವರು ಹೇಳಿದ್ದಾರೆ.  

ಕೆಲವು ಸರ್ಕಾರಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಹಾಕುವಂತೆ ಮಾಡಿದ್ದಾರೆ ಎಂದು ಹರಿಕೃಷ್ಣ ಆರೋಪಿಸಿದ್ದಾರೆ. ಆದರೆ ಈ ಆರೋಪಕ್ಕೆ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News