×
Ad

‘ಕರ್ವಾಚೌತ್’ ಮೂಢನಂಬಿಕೆ ಎಂದ ರಾಜಸ್ಥಾನ ಸಚಿವ ರಾಮ್ ಮೇಘವಾಲ್, ಕ್ಷಮೆಯಾಚಿಸಲು ಬಿಜೆಪಿ ಒತ್ತಾಯ

Update: 2022-08-21 12:38 IST
ಗೋವಿಂದ್ ರಾಮ್ ಮೇಘವಾಲ್, Photo: SOCIAL MEDIA

ಜೈಪುರ,ಆ.21: ಅಭಿವೃದ್ಧಿ ಹೊಂದಿದ ದೇಶಗಳ ಜನರು ವಿಜ್ಞಾನ ಜಗತ್ತಿನಲ್ಲಿ ವಾಸವಾಗಿರುವಾಗ ಭಾರತದಲ್ಲಿಯ ಮಹಿಳೆಯರು ಈಗಲೂ ಕರವಾ ಚೌಥ್‌ನಂದು ಜರಡಿಯ ಮೂಲಕ ಚಂದ್ರನನ್ನು ನೋಡುತ್ತಿರುವುದು ಮತ್ತು ತಮ್ಮ ಗಂಡಂದಿರ ದೀರ್ಘಾಯುಷ್ಯಕ್ಕೆ ಪ್ರಾರ್ಥಿಸುತ್ತಿರುವುದು ದುರದೃಷ್ಟಕರವಾಗಿದೆ ಎಂದು ಹೇಳುವ ಮೂಲಕ ರಾಜಸ್ಥಾದ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವ ಗೋವಿಂದರಾಮ ಮೇಘ್ವಾಲ್ ಅವರು ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.

ಸಚಿವರ ಹೇಳಿಕೆಯನ್ನು ತೀಕ್ಷ್ಣವಾಗಿ ಟೀಕಿಸಿರುವ ಬಿಜೆಪಿ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಮೇಘ್ವಾಲ್ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರನ್ನೂ ಅದು ಒತ್ತಾಯಿಸಿದೆ.ಶನಿವಾರ ಇಲ್ಲಿ 'ಡಿಜಿಫೆಸ್ಟ್ 'ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮೇಘ್ವಾಲ್,ಚೀನಾ ಮತ್ತು ಅಮೆರಿಕದಲ್ಲಿ ಮಹಿಳೆಯರು ವಿಜ್ಞಾನ ಜಗತ್ತಿನಲ್ಲಿ ವಾಸವಾಗಿದ್ದಾರೆ. ಆದರೆ ಇಲ್ಲಿ ಇಂದಿಗೂ ಕರವಾ ಚೌಥ್‌ನಂದು ಮಹಿಳೆಯರು ಜರಡಿಯ ಮೂಲಕ ನೋಡುತ್ತಾರೆ,ತಮ್ಮ ಗಂಡಂದಿರ ದೀರ್ಘಾಯುಷ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಗಂಡ ಎಂದಿಗೂ ತನ್ನ ಹೆಂಡತಿಯ ದೀರ್ಘಾಯುಷ್ಯಕ್ಕಾಗಿ ಜರಡಿಯನ್ನು ನೋಡುವುದಿಲ್ಲ. ಜನರು ಇತರರನ್ನು ಮೂಢನಂಬಿಕೆಯ ಕೂಪದಲ್ಲಿ ತಳ್ಳುತ್ತಿದ್ದಾರೆ,ಅವರು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜಗಳವಾಡುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭ ಗೆಹ್ಲೋಟ್ ಅವರೂ ಉಪಸ್ಥಿತರಿದ್ದರು.

 ಮೇಘ್ವಾಲ್ ವಿರುದ್ಧ ದಾಳಿ ನಡೆಸಿದ ಬಿಜೆಪಿ ರಾಜ್ಯ ವಕ್ತಾರ ಹಾಗೂ ಶಾಸಕ ರಾಮಲಾಲ ಶರ್ಮಾ ಅವರು,ಖಗೋಳಯಾತ್ರಿ ಕಲ್ಪನಾ ಚಾವ್ಲಾ ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದರು ಮತ್ತು ಅನೇಕ ಭಾರತೀಯ ಮಹಿಳೆಯರು ಪೈಲಟ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವುದು ಸಚಿವರಿಗೆ ತಿಳಿದಿರಬೇಕು. ಅವರು ದೇಶದ ಕೋಟ್ಯಂತರ ಮಹಿಳೆಯರನ್ನು ಅವಮಾನಿಸಿದ್ದಾರೆ. ಅವರು ಕ್ಷಮೆ ಯಾಚಿಸಬೇಕು ಮತ್ತು ತನ್ನ ಹೇಳಿಕೆಯನ್ನು ಹಿಂದೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಭಾರತೀಯ ಮಹಿಳೆಯರು ಸಂಪ್ರದಾಯಗಳನ್ನು ಪಾಲಿಸುವಲ್ಲಿ ಹೆಸರಾಗಿದ್ದಾರೆ ಹಾಗೂ ವೈಯಕ್ತಿಕ ಬದುಕು ಮತ್ತು ವೃತ್ತಿಯ ನಡುವೆ ಸಮತೋಲನ ಸಾಧಿಸುವುದು ಅವರಿಗೆ ಗೊತ್ತಿದೆ ಎಂದರು.

 ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮೇಘ್ವಾಲ್,ತಾನು ವೈಜ್ಞಾನಿಕ ಮನೋಭಾವ ಮತ್ತು ಶಿಕ್ಷಣವನ್ನು ಉತ್ತೇಜಿಸುತ್ತಿದ್ದೇನಷ್ಟೇ. ತಾನು ಕರವಾ ಚೌಥ್‌ಗೆ ವಿರೋಧಿಯಲ್ಲ,ಯಾರು ಬೇಕಾದರೂ ಅದನ್ನು ಅನುಸರಿಸಬಹುದು. ತಾನು ವೈಜ್ಞಾನಿಕ ಮನೋಧರ್ಮದ ಮಹತ್ವದ ಕುರಿತು ಮಾತನಾಡುತ್ತಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News