ಹಿಮಾಚಲ ಕಾಂಗ್ರೆಸ್ ಸಂಚಾಲನಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಆನಂದ್ ಶರ್ಮಾ ರಾಜೀನಾಮೆ
ಹೊಸದಿಲ್ಲಿ,ಆ.21: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಆಘಾತವುಂಟಾಗಿದೆ. ಹಿರಿಯ ನಾಯಕ ಆನಂದ್ ಶರ್ಮಾ ಅವರು ರವಿವಾರ ಹಿಮಾಚಲ ಕಾಂಗ್ರೆಸ್‌ನ ಸಂಚಾಲನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಇಂತಹುದೇ ಬೆಳವಣಿಗೆಯಲ್ಲಿ ಪಕ್ಷದ ಇನ್ನೋರ್ವ ನಾಯಕ ಗುಲಾಂ ನಬಿ ಆಝಾದ್ ಅವರು ಜಮ್ಮು-ಕಾಶ್ಮೀರದಲ್ಲಿಯ ಕಾಂಗ್ರೆಸ್‌ನ ಪ್ರಚಾರ ಸಮಿತಿ ಮತ್ತು ರಾಜಕೀಯ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.
ಚುನಾವಣೆಗೆ ಮುನ್ನ ಪಕ್ಷದ ನಿರ್ಧಾರಗಳಿಂದ ತನ್ನನ್ನು ಹೊರಗಿಡಲಾಗಿದೆ ಎಂದು ತಾನು ಭಾವಿಸಿದ್ದೇನೆ ಮತ್ತು ತನ್ನ ಆತ್ಮಗೌರವದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಶರ್ಮಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
‘ನಾನು ಆಜೀವ ಪರ್ಯಂತ ಕಾಂಗ್ರೆಸಿಗನಾಗಿದ್ದೇನೆ ಮತ್ತು ನನ್ನ ನಂಬಿಕೆಗಳಿಗೆ ಬದ್ಧನಾಗಿರುತ್ತೇನೆ ಎನ್ನುವುದನ್ನು ಪುನರುಚ್ಚರಿಸುತ್ತಿದ್ದೇನೆ. ನಿರಂತರವಾಗಿ ಹೊರಗಿಡುವಿಕೆ ಮತ್ತು ಅವಮಾನಗಳಿಂದಾಗಿ ಓರ್ವ ಆತ್ಮಗೌರವವುಳ್ಳ ವ್ಯಕ್ತಿಯಾಗಿ ನನಗೆ ಬೇರೆ ಆಯ್ಕೆಯಿಲ್ಲ ’ಎಂದು ಶರ್ಮಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಚುನಾವಣೆಗಳಿಗಾಗಿ ಸಮಾಲೋಚನಾ ಪ್ರಕ್ರಿಯೆಯಲ್ಲಿ ತನ್ನನ್ನು ಕಡೆಗಣಿಸಲಾಗಿದೆ, ಆದಾಗ್ಯೂ ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನು ಮುಂದುವರಿಸುತ್ತೇನೆ ಎಂದೂ ಶರ್ಮಾ ಪಕ್ಷಾಧ್ಯಕ್ಷೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಶರ್ಮಾರನ್ನು ಎ.26ರಂದು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಸಂಚಾಲನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು.