ವೈದ್ಯರಿಗೆ ಥಳಿಸಿದ ಮಿಝೋರಾಂ ಮುಖ್ಯಮಂತ್ರಿ ಪುತ್ರಿ: ವೀಡಿಯೊ ವೈರಲ್

Update: 2022-08-21 15:38 GMT
Photo: Twitter/SS

ಗುವಾಹಟಿ: ಮಿಝೋರಾಂ ಮುಖ್ಯಮಂತ್ರಿ ಝೋರಂತಂಗ ಅವರು ತಮ್ಮ ಪುತ್ರಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ರಾಜ್ಯದ ರಾಜಧಾನಿ ಐಜ್ವಾಲ್‌ನ ಕ್ಲಿನಿಕ್‌ನ ಚರ್ಮರೋಗ ವೈದ್ಯರು ಅಪಾಯಿಂಟ್‌ಮೆಂಟ್ ಇಲ್ಲದೆ ಭೇಟಿ ನಿರಾಕರಿಸಿದ ನಂತರ ಮುಖ್ಯಮಂತ್ರಿಯವರ ಪುತ್ರಿ ಮಿಲಾರಿ ಚಾಂಗ್ಟೆ ಅಸಮಾಧಾನಗೊಂಡಿದ್ದರು ಎಂದು ವರದಿಯಾಗಿದೆ. ಬುಧವಾರ ಈ ಘಟನೆ ನಡೆದಿದ್ದು, ಸಮಾಲೋಚನೆಗಾಗಿ ಕ್ಲಿನಿಕ್‌ಗೆ ಬರುವ ಮೊದಲು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವಂತೆ ವೈದ್ಯರು ಮುಖ್ಯಮಂತ್ರಿಯವರ ಮಗಳಲ್ಲಿ ಹೇಳಿದ್ದರು ಎನ್ನಲಾಗಿದೆ.

ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮುಖ್ಯಮಂತ್ರಿಯ ಮಗಳು ವೈದ್ಯರ ಬಳಿಗೆ ಹೋಗುವುದನ್ನು ಮತ್ತು ಇತರರು ಅವಳನ್ನು ಹಿಡಿದಿಡಲು ಪ್ರಯತ್ನಿಸಿದಾಗ ಅವರ ಮುಖಕ್ಕೆ ಹೊಡೆಯುವುದನ್ನು ತೋರಿಸುತ್ತದೆ.

ಸುಮಾರು ಎರಡು ದಿನಗಳ ಹಿಂದೆ ವಿಡಿಯೋ ವೈರಲ್ ಆದ ನಂತರ, ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಿಝೋರಾಂ ಘಟಕ ಪ್ರತಿಭಟನೆ ಆರಂಭಿಸಿದ್ದು, ವೈದ್ಯರು ಕಪ್ಪು ಬ್ಯಾಡ್ಜ್ ಧರಿಸಿ ನಿನ್ನೆ ಕೆಲಸ ಮಾಡಿದರು.

ಮುಖ್ಯಮಂತ್ರಿಯವರು ಅಂತಿಮವಾಗಿ ತಮ್ಮ ಅಧಿಕೃತ Instagram ಹ್ಯಾಂಡಲ್ ಮೂಲಕ ಸಾರ್ವಜನಿಕ ಕ್ಷಮೆಯಾಚಿಸಿದರು. ಅವರು ತಮ್ಮ ಪೋಸ್ಟ್‌ನಲ್ಲಿ, "ಐಜ್ವಾಲ್ ಮೂಲದ ಚರ್ಮರೋಗ ವೈದ್ಯರೊಂದಿಗೆ ತಮ್ಮ ಮಗಳ "ದುರ್ವರ್ತನೆ" ಗಾಗಿ ಕ್ಷಮೆಯಾಚಿಸುತ್ತೇನೆ ಮತ್ತು ತಾನು ಯಾವುದೇ ರೀತಿಯಲ್ಲಿ ಆಕೆಯ ನಡವಳಿಕೆಯನ್ನು ಸಮರ್ಥಿಸುವುದಿಲ್ಲ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News