ಹಿಮಾಚಲ ಪ್ರದೇಶದಲ್ಲಿ ಭೂಕುಸಿತಗಳಿಂದಾಗಿ ಮೃತರ ಸಂಖ್ಯೆ 22ಕ್ಕೇರಿಕೆ, ಆರು ಜನರು ನಾಪತ್ತೆ
ಶಿಮ್ಲಾ,ಆ.21: ರಾಜ್ಯ ವಿಪತ್ತು ಪ್ರಕ್ರಿಯಾ ಪಡೆ ಮತ್ತು ಸ್ಥಳೀಯ ಆಡಳಿತ ರವಿವಾರ ಇನ್ನೂ ಒಂದು ಶವವನ್ನು ಪತ್ತೆ ಹಚ್ಚುವುದರೊಂದಿಗೆ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತಗಳು,ದಿಢೀರ್ ಪ್ರವಾಹ ಮತ್ತು ಮೇಘಸ್ಫೋಟದ ಘಟನೆಗಳಲ್ಲಿ ಮೃತರ ಸಂಖ್ಯೆ 22ಕ್ಕೇರಿದೆ. ಆರು ಜನರು ಈಗಲೂ ನಾಪತ್ತೆಯಾಗಿದ್ದಾರೆ.ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಪ್ರವಾಸಿಗಳು ಮತ್ತು ಸ್ಥಳೀಯ ನಿವಾಸಿಗಳು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕ ಆಸ್ತಿಗಳಿಗೆ ಭಾರೀ ಹಾನಿಯುಂಟಾಗಿದೆ.
ರಾಜ್ಯದ 30 ಕಡೆಗಳಲ್ಲಿ ದಿಢೀರ್ ಪ್ರವಾಹ ಮತ್ತು ಹವಾಮಾನ ಸಂಬಂಧಿತ ಘಟನೆಗಳು ವರದಿಯಾಗಿವೆ. ಹಲವಾರು ಮನೆಗಳು ಕುಸಿದಿದ್ದು,ಶಿಮ್ಲಾ,ಮಂಡಿ ಸೇರಿದಂತೆ ಆರು ಜಿಲ್ಲೆಗಳು ತೀವ್ರ ಬಾಧಿತವಾಗಿವೆ.
ಮಂಡಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳನ್ನು ನಿರ್ಬಂಧಿಸಿರುವುದರಿಂದ ಹಲವಾರು ಪ್ರವಾಸಿಗಳು ಅತಂತ್ರರಾಗಿದ್ದಾರೆ. ಪಠಾಣಕೋಟ್ ಮತ್ತ ಹಿಮಾಚಲ ಪ್ರದೇಶವನ್ನು ಸಂಪರ್ಕಿಸುವ ಚಕ್ಕಿ ರೈಲು ಸೇತುವೆ ಕುಸಿದಿದೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ಶನಿವಾರ ಪ್ರವಾಹ ಸ್ಥಿತಿಯನ್ನು ಪುನರ್ಪರಿಶೀಲಿಸಿದ ಮುಖ್ಯಮಂತ್ರಿ ಜೈರಾಮ ಠಾಕೂರ್ ಅವರು,ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮಂದುವರಿದಿದೆ. ಆಸ್ಪತ್ರೆಗಳಿಗೆ ಸಾಗುವ ಮುಖ್ಯ ರಸ್ತೆಗಳ ಮರುಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.ಈ ನಡುವೆ ಹವಾಮಾನ ಇಲಾಖೆಯು ಹಿಮಾಚಲ ಪ್ರದೇಶದಾದ್ಯಂತ ಆರೆಂಜ್ ಅಲರ್ಟ್ ಘೋಷಿಸಿದೆ.