ಪ್ರಧಾನಿ ಮೋದಿಯಿಂದ ಸಾವರ್ಕರ್ ವೈಭವೀಕರಣ ನೈಜ ಹುತಾತ್ಮರ ಇನ್ನೊಂದು ಸುತ್ತಿನ ಕೊಲೆ

Update: 2022-08-23 07:44 GMT

ಅಂಡಮಾನ್ ಸೆಲ್ಯುಲರ್ ಜೈಲಿನ ಕೈದಿಗಳು ಬ್ರಿಟಿಷರಿಗೆ ದಯಾ ಅರ್ಜಿ ಬರೆಯುವುದರಲ್ಲಿ ಏನೂ ತಪ್ಪಿಲ್ಲ. ಅದು ಕೈದಿಗಳಿಗೆ ಸಿಗುವ ಮುಖ್ಯ ಕಾನೂನು ಸೌಲಭ್ಯ. ಸಾವರ್ಕರ್ ಅಲ್ಲದೆ, ಬರೀಂದ್ರ ಕುಮಾರ್ ಘೋಷ್, ಎಚ್.ಕೆ. ಕಾಂಜಿಲಾಲ್ ಮತ್ತು ನಂದ ಗೋಪಾಲ್ ಕೂಡ ದಯಾ ಅರ್ಜಿಗಳನ್ನು ಬರೆದಿದ್ದರು. ಆದರೆ, ತಮ್ಮ ಹಿಂದಿನ ಕ್ರಾಂತಿಕಾರಿ ಚಟುವಟಿಕೆಗಳನ್ನು ಕ್ಷಮಿಸುವಂತೆ ಕೋರಿದ್ದು ಸಾವರ್ಕರ್ ಮತ್ತು ಬರೀಂದ್ರ ಮಾತ್ರ.

ಎರಡು-ದೇಶ ಸಿದ್ಧಾಂತವನ್ನು ಜಿನ್ನಾಗಿಂತಲೂ

ಮೊದಲೇ ಮುಂದಿಟ್ಟ ಸಾವರ್ಕರ್

ಮುಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಮ್ ಲೀಗ್ 1940ರ ಮಾರ್ಚ್‌ನಲ್ಲಿ ಪಾಕಿಸ್ತಾನಕ್ಕಾಗಿ ಬೇಡಿಕೆ ಇಟ್ಟರು. ಅದಕ್ಕಿಂತಲೂ ತುಂಬಾ ಮೊದಲೇ ಸಾವರ್ಕರ್ ಎರಡು-ದೇಶ ಸಿದ್ಧಾಂತವನ್ನು ಮುಂದಿಟ್ಟಿದ್ದರು. ಭಾರತವು ಕೇವಲ ಹಿಂದೂಗಳ ತಾಯ್ನೆಲ ಎಂಬುದಾಗಿ ತನ್ನ ಪುಸ್ತಕ ‘ಹಿಂದುತ್ವ’ (1923)ದಲ್ಲಿ ಅವರು ಘೋಷಿಸಿದರು ಹಾಗೂ ಮುಸ್ಲಿಮರು ಭಾರತೀಯ ರಾಷ್ಟ್ರೀಯತೆಯ ಭಾಗವಾಗಬಾರದು ಎಂದು ಅವರು ಬರೆದರು. ‘‘ಹಿಂದೂವಿನ ಮೂಲ ಅರ್ಥ ಕೇವಲ ಭಾರತೀಯ ಎಂದಾಗಿರಬಹುದು. ಆದರೂ, ಓರ್ವ ಮುಸ್ಲಿಮ್ ಭಾರತೀಯ ನಿವಾಸಿ ಆಗಿರುವ ಕಾರಣಕ್ಕಾಗಿ ಅವರನ್ನು ಹಿಂದೂ ಎಂಬುದಾಗಿ ಕರೆಯಬಹುದೇ ಎಂಬ ಬಗ್ಗೆ ನಾವು ತುಂಬಾ ತಲೆಕೆಡಿಸಿಕೊಂಡಿದ್ದೇವೆ ಎಂದು ನನಗನಿಸುತ್ತದೆ’’ ಎಂದು ತನ್ನ ಪುಸ್ತಕದಲ್ಲಿ ಅವರು ಹೇಳಿದ್ದಾರೆ.

ಸಾವರ್ಕರ್ ಹಿಂದೂ ಮಹಾಸಭಾದ ನಾಯಕತ್ವವನ್ನು 1937ರಲ್ಲಿ ವಹಿಸಿಕೊಂಡರು. ಅದೇ ವರ್ಷ ಅಹ್ಮದಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾದ 19ನೇ ಅಧಿವೇಶನದಲ್ಲಿ ಮಾತನಾಡುತ್ತಾ, ‘‘ಈಗ, ಭಾರತದಲ್ಲಿ ಎರಡು ಎದುರಾಳಿ ದೇಶಗಳು ಅಕ್ಕಪಕ್ಕದಲ್ಲಿ ವಾಸಿಸುತ್ತಿವೆ. ಇಂದು ಭಾರತವನ್ನು ಏಕ ಧರ್ಮೀಯ ಮತ್ತು ಏಕ ಸ್ವರೂಪದ ದೇಶವನ್ನಾಗಿ ಪರಿಗಣಿಸುವಂತಿಲ್ಲ. ಬದಲಿಗೆ, ಇದಕ್ಕೆ ವಿರುದ್ಧವಾಗಿ ಭಾರತದಲ್ಲಿ ಮುಖ್ಯವಾಗಿ ಎರಡು ದೇಶಗಳಿವೆ: ಹಿಂದೂಗಳು ಮತ್ತು ಮುಸ್ಲಿಮರು.’’

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹಿಂದೂ ಮಹಾಸಭಾದಿಂದ ಬ್ರಿಟಿಷ್ ಸರಕಾರಕ್ಕೆ ನಿಶ್ಶರ್ತ ಬೆಂಬಲ

ಭಾರತದಿಂದ ಬ್ರಿಟಿಷರನ್ನು ಹೊರದಬ್ಬುವುದಕ್ಕಾಗಿ ‘ಮಾಡು ಇಲ್ಲವೇ ಮಡಿ’ ಎಂಬುದಾಗಿ ಗಾಂಧೀಜಿ ನೀಡಿದ ಕರೆಯಂತೆ, 1942 ಆಗಸ್ಟ್ 9ರಂದು ಕ್ವಿಟ್ ಇಂಡಿಯಾ ಚಳವಳಿ ಆರಂಭಗೊಂಡಿತು. ಈ ಹಿನ್ನೆಲೆಯಲ್ಲಿ, ಬ್ರಿಟಿಷ್ ಆಡಳಿತಗಾರರು ಆಗಸ್ಟ್ 8ರಿಂದಲೇ ಜನರನ್ನು ಸಾಮೂಹಿಕವಾಗಿ ಬಂಧಿಸಲು ಆರಂಭಿಸಿದರು. ಗಾಂಧೀಜಿ ಮತ್ತು ಉನ್ನತ ಕಾಂಗ್ರೆಸ್ ನಾಯಕರು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಯಿತು. ಅವರಿಗೆ ಬೃಹತ್ ಪ್ರಮಾಣದಲ್ಲಿ ದಂಡವನ್ನು ವಿಧಿಸಲಾಯಿತು. ಪ್ರತಿಭಟನೆಗಳನ್ನು ನಡೆಸಿದವರಿಗೆ ಸಾರ್ವಜನಿಕವಾಗಿ ಛಡಿ ಏಟುಗಳನ್ನು ನೀಡಲಾಯಿತು. ಹಿಂಸಾಚಾರದಲ್ಲಿ ನೂರಾರು ಮಂದಿ ಹತರಾದರು. ಅವರ ಪೈಕಿ ಹೆಚ್ಚಿನವರಿಗೆ ಪೊಲೀಸರು ಮತ್ತು ಸೈನಿಕರು ಗುಂಡು ಹಾರಿಸಿದರು. ಕಾಂಗ್ರೆಸನ್ನು ನಿಷೇಧಿಸಲಾಯಿತು. ಆದರೆ, ಈ ದಮನಕಾರಿ ಅವಧಿಯಲ್ಲಿ ಸಾವರ್ಕರ್ ಬ್ರಿಟಿಷ್ ಆಡಳಿತಗಾರರಿಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದರು ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. 1942ರಲ್ಲಿ ಹಿಂದೂ ಮಹಾಸಭಾದ 24ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸಾವರ್ಕರ್, ಬ್ರಿಟಿಷರಿಗೆ ಸಹಕಾರ ನೀಡುವ ಹಿಂದೂ ಮಹಾಸಭಾದ ತಂತ್ರಗಾರಿಕೆಯನ್ನು ಹೀಗೆ ವಿವರಿಸಿದರು: ‘‘ಬ್ರಿಟಿಷರೊಂದಿಗೆ ಪರಸ್ಪರ-ಸಹಕಾರ ಹೊಂದುವ ನೀತಿಯನ್ನು ಎಲ್ಲಾ ಪ್ರಾಯೋಗಿಕ ರಾಜಕೀಯದ ಪ್ರಮುಖ ತತ್ವವೆಂಬುದಾಗಿ ಹಿಂದೂ ಮಹಾಸಭಾ ಭಾವಿಸಿದೆ’’. ಪರಸ್ಪರ-ಸಹಕಾರವನ್ನು ನೀಡುವಂತೆ ಅವರು ಹಿಂದೂ ಮಹಾಸಭಾದ ಕೌನ್ಸಿಲರ್‌ಗಳು, ಸಚಿವರು ಮತ್ತು ಶಾಸಕರಿಗೆ ಕರೆ ನೀಡಿದರು. ಈ ಪರಸ್ಪರ-ಸಹಕಾರದಲ್ಲಿ, ನಿಶ್ಶರ್ತ ಸಹಕಾರದಿಂದ ಹಿಡಿದು ಸಕ್ರಿಯ ಸಹಕಾರ ಹಾಗೂ ಸಶಸ್ತ್ರ ಸಂಘರ್ಷವೂ ಒಳಗೊಂಡಿದೆ ಎಂದು ಅವರು ಹೇಳಿದರು.

ಮುಸ್ಲಿಮ್ ಲೀಗ್‌ನೊಂದಿಗೆ ಸಮ್ಮಿಶ್ರ ಸರಕಾರ

ಬಂಗಾಳ ಮತ್ತು ಸಿಂಧ್‌ನಲ್ಲಿ ಸಮ್ಮಿಶ್ರ ಸರಕಾರಗಳನ್ನು ನಡೆಸಲು ಹಿಂದೂ ಮಹಾಸಭಾ ಮತ್ತು ಮುಸ್ಲಿಮ್ ಲೀಗ್‌ಗಳು ಕೈಜೋಡಿಸಿದವು. ಕಾಂಗ್ರೆಸ್‌ಗೆ ಸವಾಲಾಗಿ ಏರ್ಪಡಿಸಲಾದ ಈ ಸಮ್ಮಿಶ್ರ ಸರಕಾರಗಳನ್ನು ಸಮರ್ಥಿಸುತ್ತಾ ಸಾವರ್ಕರ್ ಹೀಗೆ ಹೇಳಿದ್ದಾರೆ: ‘‘ವಾಸ್ತವಿಕ ರಾಜಕೀಯದಲ್ಲೂ, ಸಕಾರಣದ ರಾಜಿಗಳನ್ನು ಮಾಡಿಕೊಂಡು ನಾವು ಮುಂದಕ್ಕೆ ಸಾಗಬೇಕು ಎನ್ನುವುದು ಮಹಾಸಭಾಕ್ಕೆ ತಿಳಿದಿದೆ. ಇತ್ತೀಚೆಗಷ್ಟೆ ಸಿಂಧ್‌ನಲ್ಲಿ ಸಮ್ಮಿಶ್ರ ಸರಕಾರವನ್ನು ರಚಿಸುವುದಕ್ಕಾಗಿ ಮುಸ್ಲಿಮ್ ಲೀಗ್‌ನೊಂದಿಗೆ ಕೈಜೋಡಿಸುವ ಜವಾಬ್ದಾರಿಯನ್ನು ಸಿಂಧ್ ಹಿಂದೂ ಸಭಾ ಕೈಗೆತ್ತಿಕೊಂಡಿದೆ. ಬಂಗಾಳದ ಪ್ರಕರಣ ಎಲ್ಲರಿಗೂ ಗೊತ್ತಿದೆ. ಉದ್ಧಟ ಮುಸ್ಲಿಮ್ ಲೀಗ್‌ನವರನ್ನು ಕಾಂಗ್ರೆಸ್‌ಗೆ ತನ್ನ ಶರಣಾಗತಿಯ ಮೂಲಕವೂ ತೃಪ್ತಿ ಪಡಿಸಲು ಸಾಧ್ಯವಾಗಿಲ್ಲ. ಅಂಥವರು ಹಿಂದೂ ಮಹಾಸಭಾದ ಸಂಪರ್ಕಕ್ಕೆ ಬಂದ ಕೂಡಲೇ ಮೃದುವಾಗಿದ್ದಾರೆ ಹಾಗೂ ರಾಜಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಲ್ಲಿ ಈಗ ಫಝ್ಲುಲ್ ಹಕ್ ಅವರ ಪ್ರೀಮಿಯರ್‌ಶಿಪ್‌ನಲ್ಲಿ ಹಾಗೂ ನಮ್ಮ ಮಹಾಸಭಾದ ಗೌರವಾನ್ವಿತ ನಾಯಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ನಡೆಸುತ್ತಿದ್ದೇವೆ. ಸರಕಾರವು ಒಂದು ವರ್ಷ ಯಶಸ್ವಿಯಾಗಿ ನಡೆದಿದ್ದು, ಎರಡೂ ಸಮುದಾಯಗಳಿಗೆ ಪ್ರಯೋಜನಕಾರಿಯಾಗಿದೆ’’.

ಆ ಸಮ್ಮಿಶ್ರ ಸರಕಾರದಲ್ಲಿ ಮುಖರ್ಜಿ ಉಪ ಪ್ರೀಮಿಯರ್ ಆಗಿದ್ದರು ಹಾಗೂ ಬಂಗಾಳದಲ್ಲಿ ಕ್ವಿಟ್ ಇಂಡಿಯಾ ಚಳವಳಿಯನ್ನು ದಮನಿಸುವ ಖಾತೆಯನ್ನು ಅವರು ಹೊಂದಿದ್ದರು.

ಸುಭಾಶ್ ಚಂದ್ರ ಬೋಸ್‌ರ ಬೆನ್ನಿಗೆ ಇರಿದರು

ನೇತಾಜಿ ಸುಭಾಶ್ ಚಂದ್ರ ಬೋಸ್‌ರಿಗೆ ಸಾವರ್ಕರ್ ಮಾಡಿದ ಘೋರ ವಿಶ್ವಾಸದ್ರೋಹವನ್ನು ನಾವು ಮರೆಯಬೇಕೆಂದು ಸಾವರ್ಕರ್ ಪುನರ್ವಸತಿ ಗಡಣವು ಬಯಸುತ್ತದೆ. ಭಾರತವನ್ನು ಸೇನಾ ಕಾರ್ಯಾಚರಣೆ ಮೂಲಕ ಬ್ರಿಟಿಷರ ಹಿಡಿತದಿಂದ ಮುಕ್ತಗೊಳಿಸಬೇಕು ಎಂಬುದಾಗಿ ನೇತಾಜಿ ಯೋಜನೆ ರೂಪಿಸುತ್ತಿದ್ದಾಗ, ಸಾವರ್ಕರ್ ತನ್ನ ಬ್ರಿಟಿಷ್ ಧಣಿಗಳಿಗೆ ಸಂಪೂರ್ಣ ಸೇನಾ ಸಹಕಾರ ನೀಡಿದರು. 1941ರಲ್ಲಿ ಭಾಗಲ್ಪುರದಲ್ಲಿ ನಡೆದ ಹಿಂದೂ ಮಹಾಸಭಾದ 23ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸಾವರ್ಕರ್, ‘‘ನಮ್ಮ ಅತ್ಯುನ್ನತ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ, ಹಿಂದೂಗಳು ಯಾವುದೇ ಅಳುಕಿಲ್ಲದೆ ಪರಸ್ಪರ-ಸಹಕಾರದ ತಳಹದಿಯಲ್ಲಿ ಭಾರತ ಸರಕಾರದ ಯುದ್ಧದಲ್ಲಿ ಸಹಕಾರ ನೀಡಬೇಕು. ಎಷ್ಟು ಸಾಧ್ಯವೋ ಅಷ್ಟು ಸಂಖ್ಯೆಯಲ್ಲಿ ನಾವು ಸರಕಾರದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗೆ ಸೇರ್ಪಡೆಗೊಳ್ಳಬೇಕು ಹಾಗೂ ಎಲ್ಲ ಶಸ್ತ್ರಾಗಾರಗಳು, ಮದ್ದುಗುಂಡು ಡಿಪೊಗಳು ಮತ್ತು ಯುದ್ಧೋಪಕರಣಗಳ ಕಾರ್ಖಾನೆಗಳಿಗೆ ಪ್ರವೇಶ ಪಡೆಯಬೇಕು. ಜಪಾನ್ ಯುದ್ಧ ರಂಗವನ್ನು ಪ್ರವೇಶಿಸಿದ ಬಳಿಕ ನಾವೀಗ ಬ್ರಿಟನ್‌ನ ಶತ್ರುಗಳ ದಾಳಿಗೆ ನೇರವಾಗಿ ಗುರಿಯಾಗಿದ್ದೇವೆ. ಹಾಗಾಗಿ, ಸೇನೆಯ ಎಲ್ಲಾ ವಿಭಾಗಗಳಿಗೆ ಸೇರ್ಪಡೆಗೊಳ್ಳುವಂತೆ ಹಿಂದೂಗಳನ್ನು, ಅದರಲ್ಲೂ ಮುಖ್ಯವಾಗಿ ಬಂಗಾಳ ಮತ್ತು ಅಸ್ಸಾಮ್ ಪ್ರಾಂತಗಳಲ್ಲಿರುವ ಹಿಂದೂಗಳನ್ನು ಹಿಂದೂ ಮಹಾಸಭಾದ ಸದಸ್ಯರು ಜಾಗೃತಗೊಳಿಸಬೇಕು. ಈ ನಿಟ್ಟಿನಲ್ಲಿ ಒಂದು ನಿಮಿಷವನ್ನೂ ವ್ಯಯಿಸಬಾರದು’’ ಎಂದು ಹೇಳಿದರು.

ಹಿಂದೂ ಮಹಾಸಭಾದ ದಾಖಲೆಗಳ ಪ್ರಕಾರ, ಬ್ರಿಟಿಷ್ ಸಶಸ್ತ್ರ ಪಡೆಗಳಿಗೆ ಒಂದು ಲಕ್ಷಕ್ಕೂ ಅಧಿಕ ಹಿಂದೂಗಳನ್ನು ಸೇರ್ಪಡೆಗೊಳಿಸುವಲ್ಲಿ ಸಾವರ್ಕರ್ ಯಶಸ್ವಿಯಾದರು.

ಸಾವರ್ಕರ್‌ರ ದಯಾ ಅರ್ಜಿಗಳು

ವೀರ ಸಾವರ್ಕರ್ 1911, 1913, 1914, 1918 ಮತ್ತು 1920ರಲ್ಲಿ ಕನಿಷ್ಠ 5 ದಯಾ ಅರ್ಜಿಗಳನ್ನು ಬ್ರಿಟಿಷ್ ಸರಕಾರಕ್ಕೆ ಬರೆದರು. ಆದರೆ, ಸಾವರ್ಕರ್ ಇದನ್ನು ಹೇಡಿತನದಿಂದ ಬರೆದಿಲ್ಲ ಎಂಬುದಾಗಿ ಅವರ ಅಭಿಮಾನಿಗಳು ಈಗ ಹೇಳಿಕೊಳ್ಳುತ್ತಿದ್ದಾರೆ. ‘‘ಶಿವಾಜಿಯ ಕಟ್ಟಾ ಅನುಯಾಯಿಯಾಗಿ, ಯುದ್ಧದಲ್ಲಿ ಸಾಯಲು ಸಾವರ್ಕರ್ ಬಯಸಿದ್ದರು. ಅದಕ್ಕಾಗಿ ಇದೇ ಏಕೈಕ ದಾರಿ ಎಂಬುದನ್ನು ಮನಗಂಡು ಅವರು, ತನ್ನನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಕೋರಿ ಬ್ರಿಟಿಷರಿಗೆ ಪತ್ರಗಳನ್ನು ಬರೆದರು’’ ಎಂದು ಅವರು ಹೇಳುತ್ತಾರೆ. ಆದರೆ, ಈಗ ಲಭ್ಯವಿರುವ ಎರಡು ದಯಾ ಅರ್ಜಿಗಳನ್ನು ಗಮನಿಸಿದರೆ ಇದಕ್ಕಿಂತ ದೊಡ್ಡ ಸುಳ್ಳು ಬೇರೊಂದಿಲ್ಲ ಅನಿಸುತ್ತದೆ. ಮೊಗಲ್ ದೊರೆಗಳನ್ನು ವಂಚಿಸಲು ಶಿವಾಜಿ ಯಶಸ್ವಿಯಾಗಿ ಬಳಸಿದ ತಂತ್ರಗಾರಿಕೆಯನ್ನು ಸಾವರ್ಕರ್ ಕೂಡ ಬಳಸಿದ್ದಾರೆ ಎಂದು ವಾದಿಸಲು ಯಾವುದೇ ಕಾರಣಗಳಿಲ್ಲ. ಅವರು 1913 ನವೆಂಬರ್ 14ರಂದು ಬರೆದ ದಯಾ ಅರ್ಜಿಯು ಈ ಕೆಳಗಿನಂತೆ ಕೊನೆಗೊಳ್ಳುತ್ತದೆ:

‘‘ಹಾಗಾಗಿ, ಅಗಾಧ ದಯೆಯುಳ್ಳ ಸರಕಾರವು ನನ್ನನ್ನು ಬಿಡುಗಡೆ ಮಾಡಿದರೆ, ನಾನು ಸಾಂವಿಧಾನಿಕ ಪ್ರಗತಿಯ ಕಟ್ಟಾ ಬೆಂಬಲಿಗನಾಗಿರುತ್ತೇನೆ ಮತ್ತು ಇಂಗ್ಲಿಷ್ ಸರಕಾರಕ್ಕೆ ನಿಷ್ಠನಾಗಿರುತ್ತೇನೆ. ಇದು ನನ್ನ ಪ್ರಮುಖ ಶರತ್ತಾಗಿದೆ... ಅದೂ ಅಲ್ಲದೆ, ನಾನು ಸಾಂವಿಧಾನಿಕ ದಾರಿಗೆ ಮರಳಿದರೆ, ಭಾರತ ಮತ್ತು ವಿದೇಶಗಳಲ್ಲಿರುವ, ನನ್ನ ಅನುಯಾಯಿಗಳಾಗಿರುವ ತಪ್ಪುದಾರಿ ತುಳಿದಿರುವ ಯುವಕರು ಕೂಡ ಅದೇ ದಾರಿಗೆ ಮರಳುತ್ತಾರೆ. ನಾನು ಸರಕಾರಕ್ಕೆ ಸೇವೆ ಸಲ್ಲಿಸಲು ಸಿದ್ಧನಾಗಿದ್ದೇನೆ. ನನ್ನನ್ನು ಅವರು ಬೇಕಾದ ಪಾತ್ರದಲ್ಲಿ ಉಪಯೋಗಿಸಿಕೊಳ್ಳಬಹುದು. ನಾನು ಪ್ರಜ್ಞಾಪೂರ್ವಕವಾಗಿ ಪರಿವರ್ತನೆಗೊಂಡಿದ್ದು ನನ್ನ ಭವಿಷ್ಯದ ವರ್ತನೆಯು ಇದೇ ರೀತಿ ಇರುತ್ತದೆ. ಶಕ್ತಿವಂತರು ಮಾತ್ರ ದಯಾಳುಗಳಾಗಲು ಸಾಧ್ಯ. ನನ್ನನ್ನು ಜೈಲಿನಲ್ಲೇ ಇರಿಸಿದರೆ ಇದು ಯಾವುದನ್ನೂ ಪಡೆಯಲು ಸಾಧ್ಯವಾಗದು. ಹಾಗಾಗಿ, ದುಂದುವೆಚ್ಚಗಾರ ಮಗ ಸರಕಾರವೆನ್ನುವ ಹೆತ್ತವರ ಬಳಿಗಲ್ಲದೆ ಬೇರೆಲ್ಲಿಗೆ ಹೋಗಲು ಸಾಧ್ಯ?’’

1920 ಮಾರ್ಚ್ 30ರಂದು, ಬ್ರಿಟಿಷ್ ಧಣಿಗಳ ಈ ‘‘ದುಂದುವೆಚ್ಚಗಾರ ಮಗ’’ ಬರೆದ ದಯಾ ಅರ್ಜಿಯು ಹೀಗೆ ಕೊನೆಗೊಳ್ಳುತ್ತದೆ: ‘‘ನನ್ನ ಯೌವನದ ಸುಂದರ ಕನಸುಗಳೆಲ್ಲವೂ ತುಂಬಾ ಬೇಗ ಮುದುಡಿಹೋದವು. ನಾನೀಗ ಪಶ್ಚಾತ್ತಾಪ ಪಡುತ್ತಿದ್ದೇನೆ. ಇಲ್ಲಿಂದ ನನಗೆ ಸಿಗುವ ಬಿಡುಗಡೆಯು ಹೊಸ ಹುಟ್ಟು ಆಗಿರುತ್ತದೆ ಹಾಗೂ ಅದು ನನ್ನ ಹೃದಯವನ್ನು ಯಾವ ರೀತಿಯಲ್ಲಿ ತಟ್ಟುತ್ತದೆ ಎಂದರೆ ಭವಿಷ್ಯದಲ್ಲಿ ನಾನು ನಿಮ್ಮ ಪರವಾಗಿ ಇರುತ್ತೇನೆ ಹಾಗೂ ರಾಜಕೀಯವಾಗಿ ನಿಮಗೆ ಉಪಯುಕ್ತನಾಗಿರುತ್ತೇನೆ. ಹೆಚ್ಚಿನ ಸಂದರ್ಭಗಳಲ್ಲಿ ಶಕ್ತಿ ವಿಫಲವಾದಾಗ ಔದಾರ್ಯ ಗೆಲ್ಲುತ್ತದೆ’’.

ಅಂಡಮಾನ್ ಸೆಲ್ಯುಲರ್ ಜೈಲಿನ ಕೈದಿಗಳು ಬ್ರಿಟಿಷರಿಗೆ ದಯಾ ಅರ್ಜಿ ಬರೆಯುವುದರಲ್ಲಿ ಏನೂ ತಪ್ಪಿಲ್ಲ. ಅದು ಕೈದಿಗಳಿಗೆ ಸಿಗುವ ಮುಖ್ಯ ಕಾನೂನು ಸೌಲಭ್ಯ. ಸಾವರ್ಕರ್ ಅಲ್ಲದೆ, ಬರೀಂದ್ರ ಕುಮಾರ್ ಘೋಷ್, ಎಚ್.ಕೆ. ಕಾಂಜಿಲಾಲ್ ಮತ್ತು ನಂದ ಗೋಪಾಲ್ ಕೂಡ ದಯಾ ಅರ್ಜಿಗಳನ್ನು ಬರೆದಿದ್ದರು. ಆದರೆ, ತಮ್ಮ ಹಿಂದಿನ ಕ್ರಾಂತಿಕಾರಿ ಚಟುವಟಿಕೆಗಳನ್ನು ಕ್ಷಮಿಸುವಂತೆ ಕೋರಿದ್ದು ಸಾವರ್ಕರ್ ಮತ್ತು ಬರೀಂದ್ರ ಮಾತ್ರ. ಕಾಂಜಿಲಾಲ್ ಮತ್ತು ನಂದ ಗೋಪಾಲ್ ವೈಯಕ್ತಿಕ ಉಪಕಾರವನ್ನು ಕೇಳಲಿಲ್ಲ, ಬದಲಿಗೆ, ರಾಜಕೀಯ ಕೈದಿಗಳಿಗೆ ನೀಡುವ ಸ್ಥಾನಮಾನ ನೀಡುವಂತೆ ಮಾತ್ರಕೋರಿದ್ದರು.

ಸಾವರ್ಕರ್‌ರ 50 ವರ್ಷಗಳ ಜೈಲು ಶಿಕ್ಷೆಯ ಪೈಕಿ 37.5 ವರ್ಷಗಳನ್ನು ಮಾಫಿ ಮಾಡಲಾಯಿತು. ಅವರು 1911 ಜುಲೈ 4ರಿಂದ ಅಂಡಮಾನ್ ಜೈಲಿನಲ್ಲಿದ್ದರು. 1921 ಮೇ 2ರಂದು ಅವರನ್ನು ಅವರ ಅಣ್ಣ ಬಾಬಾರಾವ್ ಜೊತೆಗೆ ಪ್ರಧಾನ ನೆಲಕ್ಕೆ ಸ್ಥಳಾಂತರಿಸಲಾಯಿತು. ಅವರನ್ನು ಅಂತಿಮವಾಗಿ 1924 ಜನವರಿ 6ರಂದು ಯೆರವಾಡ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಅವರು ಒಟ್ಟು 12 ವರ್ಷ ಆರು ತಿಂಗಳು ಸೆರೆಮನೆಯಲ್ಲಿದ್ದರು.

Writer - ಶಮ್ಸುಲ್ ಇಸ್ಲಾಮ್

contributor

Editor - ಶಮ್ಸುಲ್ ಇಸ್ಲಾಮ್

contributor

Similar News