×
Ad

‘ದಹಿ ಹಂಡಿ’ ಸ್ಧರ್ಧಾಳು ಮೃತ್ಯು: ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್‌ಐಆರ್

Update: 2022-08-23 19:56 IST

ಮುಂಬೈ,ಆ.23: ‘ದಹಿಹಂಡಿ’ (ಮೊಸರುಕುಡಿಕೆ) ಉತ್ಸವದ ಸಂದರ್ಭ ಮಾನವಪಿರಮಿಡ್‌ನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು 24 ವರ್ಷದ ಯುವಕನ ಮೃತಪಟ್ಟ ಘಟನೆಗೆ ಸಂಬಂಧಿಸಿ ಮುಂಬೈ ಪೊಲೀಸರು ಕಾರ್ಯಕ್ರಮದ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

  ಶುಕ್ರವಾರ ವಿಲೆ ಪಾರ್ಲೆಯ ಬಾಮನ್‌ವಾಡಿ ಪ್ರದೇಶದಲ್ಲಿ ಶುಕ್ರವಾರ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಂದರ್ಭ ನಡೆದ ದಹಿಹಂಡಿ ಉತ್ಸವದಲ್ಲಿ ‘ಶಿವ ಶಂಭೋ ಗೋವಿಂದ ಪಾಠಕ್ ’ ಮಂಡಳದ ಸದಸ್ಯನಾದ ಸಂದೇಶ್ ದಳವಿ ಎಂಬಾತ ಗೋವಿಂದಗಳು (ಸ್ಪರ್ಧಿಗಳು) ರಚಿಸಿದ ಮಾನವಪಿರಾಮಿಡ್‌ನಿಂದ ಕೆಳಗೆ ಬಿದ್ದುದರಿಂದ ಆತನ ತಲೆಗೆ ಗಂಭೀರವಾದ ಗಾಯಗಳಾಗಿದ್ದವು.

ಸೋಮವಾರ ರಾತ್ರಿ ಆತ ನಾನಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ವಿಲೆಪಾರ್ಲೆ ಪೊಲೀಸ್ ಠಾಣಾ ಅಧಿಕಾರಿಗಳು ತಿಳಿಸಿದ್ದಾರೆ. ದಳವಿ ಗಾಯಗೊಂಡ ಬಳಿಕ ಪೊಲೀಸರು ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

 ಆತನ ಸಾವಿನ ಆನಂತರ, ಪೊಲೀಸರು ಆಯೋಜಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 304-ಎ ( ನಿರ್ಲಕ್ಷದಿಂದ ಸಾವಿಗೆ ಕಾರಣವಾದುದು) ಹಾಗೂ 338 ( ಜೀವಕ್ಕೆ ಅಪಾಯವನ್ನುಂಟು ಮಾಡುವ ಕೃತ್ಯದಿಂದಾಗಿ ಗಂಭೀರವಾದ ಗಾಯವನ್ನುಂಟು ಮಾಡಿರುವುದು) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಹಾಗೂ ತನಿಖೆ ಮುಂದುವರಿದಿದೆಯೆಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News