×
Ad

ಕೇರಳ ಬಳಿಕ, ಹರ್ಯಾಣ, ತಮಿಳುನಾಡು, ಒಡಿಶಾದಲ್ಲೂ 'ಟೊಮ್ಯಾಟೊ ಜ್ವರ'

Update: 2022-08-24 07:17 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮೇ 6ರಂದು ಮೊದಲ ಬಾರಿಗೆ ಪತ್ತೆಯಾದ ಕೈ-ಕಾಲು ಬಾಯಿ ರೋಗ ಪ್ರಬೇಧವಾದ ಟೊಮ್ಯಾಟೊ ಫ್ಲೂ (tomato flu) ಇದೀಗ ಮತ್ತೆ ಮೂರು ರಾಜ್ಯಗಳಿಗೆ ಹರಡಿದ್ದು, ತಮಿಳುನಾಡು, ಹರ್ಯಾಣ ಹಾಗೂ ಒಡಿಶಾದಲ್ಲಿ ಕೂಡಾ ಸೋಂಕು ಕಾಣಿಸಿಕೊಂಡಿವೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಜುಲೈ 26ರವರೆಗೆ ಕೇರಳದಲ್ಲಿ, ಅದರಲ್ಲೂ ಮುಖ್ಯವಾಗಿ ಕೊಲ್ಲಂ ಜಿಲ್ಲೆಯಲ್ಲಿ ಐದು ವರ್ಷಕ್ಕಿಂತ ಕೆಳಗಿನ ಸುಮಾರು 82 ಮಕ್ಕಳಿಗೆ ಟೊಮ್ಯಾಟೊ ಫ್ಲೂ ಸೋಂಕು ದೃಢಪಟ್ಟಿದೆ.

ಅಂಚಲ್, ಆರ್ಯಂಕಾವು ಮತ್ತು ನೆಡುವತ್ತೂರು ಇತರ ಸೋಂಕಿತ ಪ್ರದೇಶಗಳು ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಇದರ ಜತೆಗೆ ಒಡಿಶಾದಲ್ಲಿ ಒಂಬತ್ತು ವರ್ಷ ವಯಸ್ಸಿಗಿಂತ ಕೆಳಗಿನ ಮಕ್ಕಳಲ್ಲಿ ಕೂಡಾ ಈ ರೋಗ ಕಾಣಿಸಿಕೊಂಡಿದೆ ಎಂದು ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಬಹಿರಂಗಪಡಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇತರ ಎಲ್ಲ ವೈರಸ್ ಸೋಂಕುಗಳಂತೆ ಟೊಮ್ಯಾಟೊ ಫ್ಲೂ ರೋಗದಲ್ಲೂ ಜ್ವರ, ಗುಳ್ಳೆಗಳು, ಕೀಲು ನೋವು ಕಾಣಿಸಿಕೊಳ್ಳುತ್ತದೆ. ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಿಗೆ ಕೇಂದ್ರ ಸಚಿವಾಲಯ ಇದೀಗ ಮಾರ್ಗಸೂಚಿಗಳನ್ನು ಕಳುಹಿಸಿಕೊಟ್ಟಿದೆ.

ಜ್ವರ, ಬಾಯಿ, ಕೈಕಾಲು ಮತ್ತು ಚರ್ಮದಲ್ಲಿ ಗುಳ್ಳೆಗಳು ಇದರ ಪ್ರಮುಖ ಲಕ್ಷಣ. ಅಲ್ಪ ಜ್ವರದೊಂದಿಗೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕ್ರಮೇಣ ಹಸಿವು ಆಗದಿರುವುದು, ಗಂಟಲು ಕೆರೆತ ಮತ್ತು ಆಲಸ್ಯದಂಥ ರೋಗಲಕ್ಷಣಗಳು ಕಂಡುಬರುತ್ತವೆ.

ಜ್ವರ ಆರಂಭದ ಒಂದೆರಡು ದಿನಗಳ ಬಳಿಕ, ಚಿಕ್ಕಚಿಕ್ಕ ಕೆಂಪು ಗುಳ್ಳೆಗಳು ಹುಣ್ಣುಗಳಾಗಿ ಪರಿವರ್ತನೆಯಾಗುತ್ತವೆ. ನಾಲಿಗೆ, ದವಡೆ, ಕೆನ್ನೆಯ ಒಳಭಾಗ, ಅಂಗೈ ಮತ್ತು ಪಾದದ ಕೆಳಗೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ಎಂದು timesofindia.com ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News