ಮೋದಿ ಬಗೆಗಿನ ಕೃತಿಯನ್ನು ಭಗವದ್ಗೀತೆಗೆ ಹೋಲಿಸಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್!

Update: 2022-08-24 04:46 GMT

ಜೈಪುರ: 'ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ' (Modi@20: Dreams Meet Delivery) ಕೃತಿಯನ್ನು ಭಗವದ್ಗೀತೆಗೆ ಹೋಲಿಸುವ ಮೂಲಕ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ವಿವಾದ ಹುಟ್ಟುಹಾಕಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, "ಮುಂದಿನ ಪೀಳಿಗೆಗೆ ಈ ಪುಸ್ತಕ ಮಹತ್ವದ್ದು ಮತ್ತು ಶ್ರೀ ಕೃಷ್ಣ ಪರಮಾತ್ಮ ಬೋಧಿಸಿದ ಭಗವದ್ಗೀತೆಯಷ್ಟೇ ಪವಿತ್ರದ್ದಾಗುತ್ತದೆ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ" ಎಂದು ಹೇಳಿದರು.

ಈ ಹೇಳಿಕೆಗೆ ಸಂಬಂಧಿಸಿದ ವೀಡಿಯೊ ತುಣುಕು ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಹೋಲಿಕೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ, ಟ್ವಿಟ್ಟರ್‌ನಲ್ಲಿ ಶೇಖಾವತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ಅಧಿಕಾರಕ್ಕಾಗಿ ನಾಚಿಕೆಗೇಡುತನವನ್ನು ಮಾರಾಟ ಮಾಡುವವರು, ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಅವಮಾನಿಸುವ ಮೂಲಕ ಧಾರ್ಮಿಕ ವಿಧಾನವನ್ನು ಕಲುಷಿತಗೊಳಿಸಬಾರದು. ಅವರು ಎಲ್ಲೆ ಮೀರಿದ್ದಾರೆ. ಓ ಕೃಷ್ಣಾ.. ಅವರಿಗೆ ಒಳ್ಳೆಯ ಬುದ್ಧಿ ಕೊಡಿ" ಎಂದು ಟ್ವೀಟ್ ಮಾಡಿದ್ದಾರೆ.

ಮೋದಿಯವರ ರಾಜಕೀಯ ಪಯಣದ ಬಗ್ಗೆ ಸುಧಾಮೂರ್ತಿ, ಅರ್ಥಶಾಸ್ತ್ರಜ್ಞ ಅರವಿಂದ್ ಪನಗಾರಿಯಾ, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಮತ್ತು ಧಾರ್ಮಿಕ ಗರು ಸದ್ಗುರು ಬರೆದ ಲೇಖನಗಳ ಸಂಗ್ರಹ ಕೃತಿ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News