ಆರ್ ಜೆಡಿಯ ಇಬ್ಬರು ಹಿರಿಯ ನಾಯಕರ ಮನೆ ಮೇಲೆ ಸಿಬಿಐ ದಾಳಿ

Update: 2022-08-24 04:42 GMT
Photo:PTI

ಪಾಟ್ನಾ: ಲಾಲು ಯಾದವ್ ಅವರು  ಯುಪಿಎ-1 ಸರಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ನಡೆದ "ಉದ್ಯೋಗಕ್ಕಾಗಿ ಭೂಮಿ"   ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಯಾದವ್ (Tejashwi Yadav)ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)( Rashtriya Janata Dal (RJD))  ಇಬ್ಬರು ಹಿರಿಯ ನಾಯಕರ ಮನೆಗಳ ಮೇಲೆ ಕೇಂದ್ರ ತನಿಖಾ ದಳ (CBI) ಇಂದು ದಾಳಿ ನಡೆಸಿದೆ.

ಜನತಾ ದಳ (ಸಂಯುಕ್ತ) ಬಿಜೆಪಿಯಿಂದ ಬೇರ್ಪಟ್ಟು ಆರ್‌ಜೆಡಿಯೊಂದಿಗೆ ಕೈಜೋಡಿಸಿ ಎರಡು ವಾರಗಳ ನಂತರ, ಆರ್‌ಜೆಡಿ ಬೆಂಬಲಿತ ನಿತೀಶ್ ಕುಮಾರ್ ನೇತೃತ್ವದ ಸರಕಾರವು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ದಿನದಂದೇ  ಈ ದಾಳಿಗಳನ್ನು ನಡೆಸಲಾಯಿತು.

ಇಂದು ಬೆಳಗ್ಗೆ ಆರ್‌ಜೆಡಿಯ ರಾಜ್ಯಸಭಾ ಸಂಸದ ಅಹ್ಮದ್ ಅಶ್ಫಾಕ್ ಕರೀಂ ಹಾಗೂ  ಬಿಹಾರದ ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್ ಅವರ ಮನೆಗಳಿಗೆ ಸಿಬಿಐ ತಂಡಗಳು ಆಗಮಿಸಿವೆ.

"ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಅರ್ಥವಿಲ್ಲ. ಅವರು ನಮ್ಮ ಶಾಸಕರು ಭಯದಿಂದ ಬಿಜೆಪಿಯನ್ನು  ಸೇರುತ್ತಾರೆ ಎಂಬ ಭರವಸೆಯಿಂದ ಇದನ್ನು ಮಾಡುತ್ತಿದ್ದಾರೆ" ಎಂದು ಪಾಟ್ನಾ ಮನೆ ಮೇಲೆ ದಾಳಿ ಮಾಡಿದ ನಂತರ ಸಿಂಗ್ ಹೇಳಿದರು.

ಬಿಹಾರದಲ್ಲಿ ಅಧಿಕಾರ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ತೀವ್ರ ಆಕ್ರೋಶಗೊಂಡಿರುವ ಕಾರಣ ಸಿಬಿಐ ಹಾಗೂ  ಇತರ ಕೇಂದ್ರೀಯ ಸಂಸ್ಥೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂದು ಆರ್‌ಜೆಡಿ ವಕ್ತಾರರು ನಿನ್ನೆ ರಾತ್ರಿಯೇ  ಟ್ವೀಟ್ ಮಾಡಿದ್ದರು.

"ಬಿಹಾರದಲ್ಲಿ ಉಗ್ರರೂಪ ತಾಳಿರುವ  ಬಿಜೆಪಿ ಮಿತ್ರಪಕ್ಷಗಳಾದ ಸಿಬಿಐ, ಈಡಿ, ಐಟಿ ಶೀಘ್ರದಲ್ಲೇ ದಾಳಿಗೆ ಸಿದ್ಧತೆ ನಡೆಸುತ್ತಿವೆ. ಪಾಟ್ನಾದಲ್ಲಿ ಸಭೆ ಆರಂಭವಾಗಿದೆ. ನಾಳೆ ಮಹತ್ವದ ದಿನ" ಎಂದು ಆರ್ ಜೆಡಿ ವಕ್ತಾರರು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News