ಅಸ್ಸಾಮ್ : ಆಧಾರ್-ಎನ್‌ಆರ್‌ಸಿ ಬಿಕ್ಕಟ್ಟಿನಿಂದಾಗಿ 15 ಲಕ್ಷ ಜನರಿಗೆ ಪಡಿತರ ಸಾಮಗ್ರಿ ವಂಚನೆ?

Update: 2022-08-24 08:12 GMT

ಅಸ್ಸಾಮಿನಲ್ಲಿ ಎನ್‌ಆರ್‌ಸಿ ಸಮಸ್ಯೆಯಿಂದಾಗಿ ಆಧಾರ್ ಸಂಖ್ಯೆಯನ್ನು ಪಡೆಯಲು ಸುಮಾರು 15 ಲ.ಜನರಿಗೆ ಸಾಧ್ಯವಾಗುತ್ತಿಲ್ಲ. ಸರಕಾರವು ಪಡಿತರ ಚೀಟಿಯೊಂದಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿರುವುದರಿಂದ ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ಪಡಿತರ ಧಾನ್ಯಗಳನ್ನೇ ನಂಬಿಕೊಂಡಿರುವ ಈ ನತದೃಷ್ಟರಿಗೆ ಅದನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಗುವಾಹಟಿಯ ನಿವಾಸಿ ಮೊಯಿಫುಲ್ ಬೇಗಂ (37) ನಾಲ್ಕು ಮನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಏಳು ಗಂಟೆಗಳ ಕಾಲ ದುಡಿಯುವ ಅವರಿಗೆ ತಿಂಗಳಿಗೆ ಹೆಚ್ಚೆಂದರೆ ಐದಾರು ಸಾವಿರ ರೂ.ಸಿಗುತ್ತದೆ. ಅವರ ಪತಿ ಅಶ್ರಫ್ ಅಲಿ (40) ದಿನಗೂಲಿ ಕಾರ್ಮಿಕರಾಗಿದ್ದಾರೆ.

ಕಳೆದ 15 ವರ್ಷಗಳಿಂದ ಈ ದಂಪತಿ ಗುವಾಹಟಿಯಂತಹ ದೊಡ್ಡ ನಗರದಲ್ಲಿ ಹೇಗೋ ಬದುಕು ದೂಡುತ್ತಿದ್ದಾರೆ. ಬಾಡಿಗೆಯ ಜೋಪಡಿಯಲ್ಲಿ ವಾಸಿಸುತ್ತಿದ್ದಾರೆ.

20 ವರ್ಷಗಳ ಹಿಂದೆ ಅವರಿಗೆ ಪಡಿತರ ಚೀಟಿ ದೊರಕಿತ್ತು. ಈವರೆಗೆ ಅವರು ಪಡಿತರ ಸಾಮಗ್ರಿಗಳನ್ನೇ ಮುಖ್ಯವಾಗಿ ನಂಬಿಕೊಂಡಿದ್ದರು.

ಕಳೆದ ಮೂರು ತಿಂಗಳುಗಳಿಂದ ಅವರ ಬದುಕು ದುಸ್ತರವಾಗಿದೆ. ಅಸ್ಸಾಂ ಸರಕಾರವು ಪಡಿತರ ಚೀಟಿಗೆ ಆಧಾರ ಜೋಡಣೆಯನ್ನು ಕಡ್ಡಾಯಗೊಳಿಸಿದೆ. ಮೊಯಿಫುಲ್ ಬೇಗಂ ಬಳಿ ಆಧಾರ ಕಾರ್ಡ್ ಇಲ್ಲ, ಹೀಗಾಗಿ ಅವರಿಗೆ ಪಡಿತರವನ್ನು ನಿರಾಕರಿಸಲಾಗುತ್ತಿದೆ.

‘‘ನಮ್ಮ ಅಲ್ಪ ಆದಾಯದಲ್ಲಿಯೇ ಈಗ ಹೇಗೋ ಬದುಕುತ್ತಿದ್ದೇವೆ. ನಾವು ಬಡವರು, ಪಡಿತರ ಅಂಗಡಿಯಿಂದ ಸಿಗುತ್ತಿದ್ದ ಉಚಿತ ಅಕ್ಕಿ ಹಸಿವೆಯಿಂದ ಪಾರಾಗಲು ನಮಗೆ ನೆರವಾಗುತ್ತಿತ್ತು’’ ಎಂದು ಮೊಯಿಫುಲ್ ಬೇಗಂ ಅಳಲು ತೋಡಿಕೊಳ್ಳುತ್ತಾರೆ.

ಅವ್ಯವಸ್ಥೆಯಿಂದ ತುಂಬಿರುವ ಅಧಿಕಾರಶಾಹಿಯ ಪ್ರಕ್ರಿಯೆಯು ಸಮಸ್ಯೆಯ ಮೂಲವಾಗಿದೆ. ಅಸ್ಸಾಮಿನಲ್ಲಿ ಸರಕಾರವು 2017ರಲ್ಲಿ ಆಧಾರ್ ನೋಂದಣಿಯನ್ನು ಸ್ಥಗಿತಗೊಳಿಸಿತ್ತು ಮತ್ತು ಆ ವೇಳೆಗೆ ರಾಜ್ಯದ ಕೇವಲ ಶೇ.7ರಷ್ಟು ಜನರು ನೋಂದಣಿಯನ್ನು ಮಾಡಿಸಿಕೊಂಡಿದ್ದರು. ಸರಕಾರವು ಎನ್‌ಆರ್‌ಸಿ ರಿಜಿಸ್ಟರ್ ಅನ್ನು ಪರಿಷ್ಕರಿಸುತ್ತಿದ್ದುದು ಇದಕ್ಕೆ ಕಾರಣವಾಗಿತ್ತು.

ಪರಿಷ್ಕೃತ ಎನ್‌ಆರ್‌ಸಿಯನ್ನು 2019,ಆ.31ರಂದು ಪ್ರಕಟಿಸಲಾಗಿತ್ತು. ಜೂನ್ 2020ರಲ್ಲಿ ಅಸ್ಸಾಮಿನಲ್ಲಿ ಆಧಾರ್ ನೋಂದಣಿಯನ್ನು ಪುನರಾರಂಭಿಸಲಾಗಿತ್ತು. ಎನ್‌ಆರ್‌ಸಿಯಿಂದ ಹೊರಗಿರಿಸಲ್ಪಟ್ಟಿರುವ ಮೊಯಿಫುಲ್ ಬೇಗಂರಂತಹ ಲಕ್ಷಾಂತರ ಜನರಿಗೆ ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅಂತಿಮ ಎನ್‌ಆರ್‌ಸಿಯಲ್ಲಿ ಇದ್ದರಾದರೂ ಕರಡು ಪಟ್ಟಿಯಿಂದ ಹೊರಗಿರಿಸಲಾಗಿರುವ ಅನೇಕರಿಗೂ ಆಧಾರ್‌ಗಾಗಿ ನೋಂದಾಯಿಸಿಕೊಳ್ಳಲು ತೊಂದರೆಯಾಗುತ್ತಿದೆ. ಎನ್‌ಆರ್‌ಸಿ ಪ್ರಕ್ರಿಯೆಯ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ 27 ಲಕ್ಷಕ್ಕೂ ಅಧಿಕ ಜನರ ಬಯೊಮೆಟ್ರಿಕ್ ಡಾಟಾವನ್ನು ಸ್ತಂಭನಗೊಳಿಸಿರುವುದು ಇದಕ್ಕೆ ಕಾರಣವಾಗಿದೆ.

ಆಧಾರ್ ಸಂಖ್ಯೆ ಇಲ್ಲದಿರುವುದು ಯಾತನಾಮಯ ಪರಿಣಾಮಗಳನ್ನುಂಟು ಮಾಡುತ್ತಿದೆ. ಅಸ್ಸಾಮಿನ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶಕ ಅಂಕುರ ಭರಲಿ ಹೇಳುವಂತೆ ಪಡಿತರ ಸಾಮಗ್ರಿ ಪಡೆಯಲು ಅರ್ಹರಾಗಿರುವ ಸುಮಾರು 15 ಲಕ್ಷ ಜನರ ಬಯೊಮೆಟ್ರಿಕ್ ಡಾಟಾ ಸ್ತಂಭನಗೊಂಡಿರುವುದರಿಂದ ಅವರ ಪಡಿತರ ಚೀಟಿಗಳು ಆಧಾರ್‌ನೊಂದಿಗೆ ಜೋಡಣೆಗೊಂಡಿಲ್ಲ.

ಎನ್‌ಆರ್‌ಸಿ ಪ್ರಕ್ರಿಯೆಯಿಂದಾಗಿ ಆಧಾರ್ ಪಡೆಯಲು ಸಾಧ್ಯವಾಗದ ಫಲಾನುಭವಿಗಳ ಪಡಿತರವನ್ನು ತಡೆಹಿಡಿಯದಂತೆ ರಾಜ್ಯ ಸರಕಾರವು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ, ಹೀಗಾಗಿ ಅವರಿಗೆ ಪಡಿತರವನ್ನು ಪಡೆಯಲು ತೊಂದರೆಯಿಲ್ಲ ಎಂದೂ ಭರಲಿ ಹೇಳಿದ್ದಾರೆ. ಆದರೆ ಸರಕಾರದ ಈ ನಿರ್ದೇಶದ ಅನುಷ್ಠಾನದಲ್ಲಿ ಕೊರತೆಯಿರುವಂತೆ ಕಂಡು ಬರುತ್ತಿದೆ. ಹಲವಾರು ಕುಟುಂಬಗಳು ತಮಗೆ ಪಡಿತರ ಸಾಮಗ್ರಿಗಳು ದೊರೆಯುತ್ತಿಲ್ಲ ಎಂದು ಹೇಳಿವೆೆ.

ಜುಲೈ 2018ರಲ್ಲಿ ಕರಡು ಎನ್‌ಆರ್‌ಸಿ ಪಟ್ಟಿಯಿಂದ ಹೊರಗಿರಿಸಲ್ಪಟ್ಟಿದ್ದ ಮೊಯಿಫುಲ್ ಬೇಗಂ 2019ರಲ್ಲಿ ಹೊಸದಾಗಿ ಪೌರತ್ವವನ್ನು ಕೋರಿ ಅರ್ಜಿ ಸಲ್ಲಿಸಿದಾಗ ತನ್ನ ಬಯೊಮೆಟ್ರಿಕ್ ಡಾಟಾ ನೀಡಿದ್ದರು. ಅವರ ಕುಟುಂಬದ ಇತರ ಸದಸ್ಯರ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿ ಇದೆಯಾದರೂ ಮೊಯಿಫುಲ್ ಬೇಗಂ ಹೆಸರು ಅದರಲ್ಲಿಲ್ಲ. ಅವರು ಎರಡು ಸಲ ಆಧಾರ್‌ಗಾಗಿ ಅರ್ಜಿ ಸಲ್ಲಿಸಿದ್ದರೂ ಅದು ತಿರಸ್ಕೃತಗೊಂಡಿದೆ.

ಇದು ಮೊಯಿಫುಲ್ ಬೇಗಂ ಅವರೊಬ್ಬರದೇ ಕಥೆಯಲ್ಲ. ಕರಡಿನಿಂದ ಹೊರಗಿರಿಸಲ್ಪಟ್ಟು ನಂತರ ಅಂತಿಮ ಎನ್‌ಆರ್‌ಸಿಯಲ್ಲಿ ಸೇರ್ಪಡೆಗೊಂಡ ಅನೇಕರ ಬಯೊಮೆಟ್ರಿಕ್ ಡಾಟಾ ಸ್ತಂಭನಗೊಂಡಿರುವುದರಿಂದ ಅವರಿಗೂ ಆಧಾರ್ ಪಡೆಯಲು ಸಾಧ್ಯವಾಗುತ್ತಿಲ್ಲ.

ಎನ್‌ಆರ್‌ಸಿ ಅರ್ಜಿದಾರರ ಬಯೊಮೆಟ್ರಿಕ್ ಡಾಟಾ ವಿವರಗಳು ಸ್ತಂಭನಗೊಂಡಿರುವ ದೂರುಗಳ ಕುರಿತು ರಾಜ್ಯ ಸರಕಾರವು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್‌ಜಿಐ) ಕಚೇರಿಗೆ ಕನಿಷ್ಠ ಎರಡು ಸಲ ಪತ್ರಗಳನ್ನು ಬರೆದಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದ ಬಳಿಕ ಈ ವಿಷಯವು ಈಗ ನ್ಯಾಯಾಲಯದ ಅಂಗಳದಲ್ಲಿದೆ. ಬಯೊಮೆಟ್ರಿಕ್ ಡಾಟಾ ಸ್ತಂಭನಗೊಂಡಿರುವ 27.4 ಲಕ್ಷ ಜನರಿಗೆ ಆಧಾರ್ ಸಂಖ್ಯೆಗಳನ್ನು ವಿತರಿಸಬೇಕೇ ಎಂಬ ಪ್ರಶ್ನೆಯನ್ನು ನ್ಯಾಯಾಲಯವು ಈಗ ಪರಿಶೀಲಿಸುತ್ತಿದೆ. ಅದು ಕೇಂದ್ರ, ಅಸ್ಸಾಂ ಸರಕಾರ, ಆರ್‌ಜಿಐ ಮತ್ತು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ನೋಟಿಸ್‌ಗಳನ್ನು ಜಾರಿಗೊಳಿಸಿದೆ.

27.4 ಲಕ್ಷ ಜನರ ಬಯೊಮೆಟ್ರಿಕ್ ಡಾಟಾ ಸ್ತಂಭನಗೊಂಡಿರು ವುದು ಅವರು ಆಧಾರ್ ಸಂಖ್ಯೆಗಳನ್ನು ಪಡೆಯುವುದನ್ನು ಅಸಾಧ್ಯವಾಗಿಸಿದೆ. ಅಸ್ಸಾಂ ಕಳೆದ ನವೆಂಬರ್‌ನಲ್ಲಿ ಪಡಿತರ ಚೀಟಿ ಗಳೊಂದಿಗೆ ಆಧಾರ್ ಸಂಖ್ಯೆಗಳ ಜೋಡಣೆಯನ್ನು ಆರಂಭಿಸಿತ್ತು.

ಆಧಾರ್ ನೋಂದಣಿ ಸಂಖ್ಯೆಯನ್ನು ಸಲ್ಲಿಸದ ಫಲಾನುಭವಿಗಳನ್ನು ಸರಕಾರವು ಪಡಿತರ ಯೋಜನೆಯಿಂದ ಕೈಬಿಡಲಿದೆ ಎಂದು ಭರಲಿ ತಿಳಿಸಿದ್ದಾರೆ.

ಎಪ್ರಿಲ್‌ನಿಂದ ನ್ಯಾಯಬೆಲೆ ಅಂಗಡಿಗಳು ತಮಗೆ ಪಡಿತರ ನೀಡಲು ನಿರಾಕರಿಸುತ್ತಿವೆ ಮತ್ತು ಮೊದಲು ಪಡಿತರ ಚೀಟಿಗೆ ಆಧಾರ್ ಸಂಖ್ಯೆಯ ಜೋಡಣೆ ಮಾಡುವಂತೆ ಒತ್ತಾಯಿಸುತ್ತಿವೆ ಎಂದು ಮೊಯಿಫುಲ್ ಬೇಗಂ ಹೇಳಿದರು. ಅವರ ಪತಿ ಮತ್ತು ಇಬ್ಬರು ಮಕ್ಕಳ ಹೆಸರುಗಳು ಎನ್‌ಆರ್‌ಸಿಯಲ್ಲಿವೆ ಮತ್ತು ಅವರು ತಮ್ಮ ಆಧಾರ್ ಸಂಖ್ಯೆಗಳನ್ನು ಕುಟುಂಬದ ಪಡಿತರ ಚೀಟಿಯೊಂದಿಗೆ ಜೋಡಣೆಗೊಳಿಸಿದ್ದಾರೆ, ಆದಾಗ್ಯೂ ನ್ಯಾಯಬೆಲೆ ಅಂಗಡಿ ಅವರಿಗೆ ಈಗಲೂ ಪಡಿತರವನ್ನು ನಿರಾಕರಿಸುತ್ತಿದೆ.

ಅಸ್ಸಾಮಿನಲ್ಲಿ ಲಕ್ಷಾಂತರ ಜನರು ಇದೇ ಗೋಳನ್ನು ಅನುಭವಿಸುತ್ತಿದ್ದಾರೆ. ‘‘ನಮಗೆ ಆಧಾರ್ ಮತ್ತು ಪಡಿತರವನ್ನು ನಿರಾಕರಿಸುವ ಮೂಲಕ ಸರಕಾರವು ನಮ್ಮ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ. ಎನ್‌ಆರ್‌ಸಿ ಸೇರಿದಂತೆ ಎಲ್ಲ ದಾಖಲೆಗಳು ನನ್ನ ಬಳಿಯಿವೆ, ಆದರೆ ಕೇವಲ ಎನ್‌ಆರ್‌ಸಿ ಪ್ರಕ್ರಿಯೆಯಿಂದಾಗಿ ಸರಕಾರದ ಯಾವುದೇ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಎಂದು ಪರಿಹಾರಗೊಳ್ಳುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ’’ ಎಂದು ಗುವಾಹಟಿ ನಿವಾಸಿ ರಾಕೇಶ್ ಪಾಸ್ವಾನ್ ಹೇಳಿದ್ದಾರೆ.

ಈಗ ಎಲ್ಲರ ಕಣ್ಣುಗಳು ಸರ್ವೋಚ್ಚ ನ್ಯಾಯಾಲಯದತ್ತ ನೆಟ್ಟಿವೆ.

ಕೃಪೆ:( Scroll.in)

Writer - ರಾಕಿಬುಝ್ಝಮಾನ್

contributor

Editor - ರಾಕಿಬುಝ್ಝಮಾನ್

contributor

Similar News