ಹೈದರಾಬಾದ್: ಅಸದುದ್ದೀನ್ ಉವೈಸಿ ಮಧ್ಯಪ್ರವೇಶದ ನಂತರ 80 ಪ್ರತಿಭಟನಾಕಾರರ ಬಿಡುಗಡೆ
ಹೈದರಾಬಾದ್: ಅಮಾನತುಗೊಂಡ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರ ಹೇಳಿಕೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ಪೊಲೀಸರಿಂದ ಬಂಧಿಸಲ್ಪಟ್ಟ 80 ಪ್ರತಿಭಟನಾಕಾರರನ್ನು ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಅವರ ಮಧ್ಯ ಪ್ರವೇಶಿಸಿದ ನಂತರ ಬಿಡುಗಡೆ ಮಾಡಲಾಯಿತು(80 protestors in Hyderabad released after Asaduddin Owaisi's intervention) ಎಂದು India Today ವರದಿ ಮಾಡಿದೆ.
ಪ್ರವಾದಿ ಮುಹಮ್ಮದ್ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿರುವ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಿನ್ನೆ ತಡರಾತ್ರಿ ಬೃಹತ್ ಪ್ರತಿಭಟನೆ ನಡೆದಿದೆ. ಹೈದರಾಬಾದ್‌ನ ಹಳೆ ನಗರದಲ್ಲಿ ಸತತ ಮೂರನೇ ದಿನವೂ ಯುವಕರು ಪ್ರತಿಭಟನೆ ನಡೆಸಿದ್ದಾರೆ.
ಧಾರ್ಮಿಕ ಘೋಷಣೆಗಳನ್ನು ಕೂಗಿದ, ಪ್ರತಿಕೃತಿಗಳನ್ನು ಸುಟ್ಟುಹಾಕಿದ ಹಾಗೂ ಕಲ್ಲು ತೂರಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು. ಚಾರ್ಮಿನಾರ್ ಸೇರಿದಂತೆ ಹೈದರಾಬಾದ್‌ನ ಹಳೆಯ ನಗರ ಪ್ರದೇಶದ ಹಲವು ಸ್ಥಳಗಳಿಂದ ಪ್ರತಿಭಟನೆಗಳು ನಡೆದ ವರದಿಯಾಗಿವೆ.
ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಹಾಗೂ ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಟಿ. ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಮಂಗಳವಾರ ಬಂಧಿಸಲಾಯಿತು. ಕೆಲವು ಗಂಟೆಗಳ ನಂತರ,ಕಸ್ಟಡಿಗಾಗಿ ಪೊಲೀಸರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ಸಿಂಗ್ ಗೆ ಜಾಮೀನು ನೀಡಲಾಯಿತು.