×
Ad

ಜಾರ್ಖಂಡ್ ಸಿಎಂ ಮೇಲೆ ಶಾಸಕ ಸ್ಥಾನದ ಅನರ್ಹತೆಯ ತೂಗುಗತ್ತಿ: ಬಿಜೆಪಿಯನ್ನು ದೂಷಿಸಿದ ಹೇಮಂತ್ ಸೊರೇನ್

Update: 2022-08-25 17:12 IST

ರಾಂಚಿ: ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಚುನಾವಣಾ ಆಯೋಗ(Election Commission) ಶಿಫಾರಸು ಮಾಡಿದೆಯೆಂಬ ಬಿಜೆಪಿ ಹೇಳಿಕೆಗಳ ಕುರಿತು ಮಾಧ್ಯಮ ವರದಿಗಳನ್ನು ನೋಡಿದ್ದೇನೆ ಆದರೆ ಈ ಕುರಿತು ಅಧಿಕೃತವಾಗಿ ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್(Hemanth Soren) ಹೇಳಿದರು. ಸೊರೇನ್ ಅವರನ್ನು ಅನರ್ಹಗೊಳಿಸಬೇಕೆಂಬ ತನ್ನ ಅಪೀಲು ಯಶಸ್ವಿಯಾಗಿದೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ನೈತಿಕತೆಯ ನೆಲೆಯಲ್ಲಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಬೇಕೆಂದು ಆಗ್ರಹಿಸಿದೆ.

ಆದರೆ  ಚುನಾವಣಾ ಆಯೋಗದ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ.

"ಒಬ್ಬ ಬಿಜೆಪಿ ಸಂಸದ ಸೇರಿದಂತೆ ಕೆಲ ಬಿಜೆಪಿ ನಾಯಕರು(BJP leader), ಸಂಸದನ ಕೈಗೊಂಬೆಯಾಗಿರುವ ಕೆಲ ಪತ್ರಕರ್ತರು  ತಾವಾಗಿಯೇ ಇಸಿಐ ವದಿಯನ್ನು ಸಿದ್ಧಪಡಿಸಿರುವಂತೆ ತೋರುತ್ತಿದೆ. ಇಲ್ಲದೇ ಹೋದರೆ ಚುನಾವಣಾ ಆಯೋಗದ ವರದಿ ಸೀಲ್ ಮಾಡಲ್ಪಟ್ಟ ಕವರಿನಲ್ಲಿರಬೇಕು" ಎಂದು ಸೊರೇನ್ ಆಕ್ರೋಶದಿಂದ ಹೇಳಿದರು.

ಸೊರೇನ್ ಅವರು ತಮಗೆ ತಾವಾಗಿಯೇ ಗಣಿಗಾರಿಕೆ ಲೀಸ್ ಕೊಡಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಕಾರಣ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು, ವಿಧಾನಸಭೆಯನ್ನು ವಿಸರ್ಜಿಸಬೇಕು ಹಾಗೂ ಮತ್ತೆ ಚುನಾವಣೆ ನಡೆಯಬೇಕು ಎಂದು ಆಗ್ರಹಿಸುತ್ತಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.

ರಾಜ್ಯದಲ್ಲಿ ಸೊರೇನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾದ  ಮೈತ್ರಿ ಪಕ್ಷವಾಗಿ ಕಾಂಗ್ರೆಸ್ ಇದ್ದು, ಸೊರೇನ್ ಅವರ್ ಸೀಎಂ ಸ್ಥಾನಕ್ಕೆ ಕುತ್ತು ಬಾರದು ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಪಕ್ಷವಿದೆ.

ಸೊರೇನ್ ಅವರು ಸ್ವಯಂ ಗಣಿಗಾರಿಕೆ ಲೀಸ್ ಪಡೆದುಕೊಂಡು ಜನ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 9ಎ ಅನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ ನಂತರ ನಿಯಮಾನುಸಾರ ರಾಜ್ಯಪಾಲರು ಸಂವಿಧಾನದ 192ನೇ ವಿಧಿಯನ್ವಯ ಈ ಪ್ರಕರಣವನ್ನು ಚುನಾವಣಾ ಆಯೋಗಕ್ಕೆ  ವಹಿಸಿದ್ದರು.

ಸೋಮವಾರ ಚುನಾವಣಾ ಆಯೋಗ ವಿಚಾರಣೆ ಮುಗಿಸಿ ತನ್ನ ಅಭಿಪ್ರಾಯವನ್ನು ಮಂಗಳವಾರ ರಾಜ್ಯಪಾಲ ರಮೇಶ್ ಬಾಯಿಸ್ ಅವರಿಗೆ ಸಲ್ಲಿಸಿತ್ತು.

ಹಣಬಲದೊಂದಿಗೆ ಬಿಜೆಪಿಯು ರಾಜ್ಯ ಸರಕಾರವನ್ನು ಉರುಳಿಸಲು ಯತ್ನಿಸುತ್ತಿದೆ ಎಂದು ಈ ಹಿಂದೆ ಜೆಎಂಎಂ ಮತ್ತು ಕಾಂಗ್ರೆಸ್ ಆರೋಪಿಸಿದ್ದವು.  ನೆರೆಯ ಬಂಗಾಳದಲ್ಲಿ ಮೂವರು ಜೆಎಂಎಂ ಶಾಸಕರು ರೂ 50 ಲಕ್ಷ ನಗದಿನೊಂದಿಗೆ ಸಿಕ್ಕಿ ಬಿದ್ದ ನಂತರ ಮೇಲಿನ ಆರೋಪ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News