ಭೀಕರ ಪ್ರವಾಹಕ್ಕೆ 937 ಮಂದಿ ಬಲಿ: ಪಾಕಿಸ್ತಾನದಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ

Update: 2022-08-26 16:11 GMT
photo ; pti 

ಇಸ್ಲಾಮಾಬಾದ್, ಆ.26: ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದ ಉಂಟಾದ ಭೀಕರ ಪ್ರವಾಹದಿಂದ ಇದುವರೆಗೆ 343 ಮಕ್ಕಳ ಸಹಿತ 937 ಮಂದಿ ಮೃತಪಟ್ಟಿದ್ದು, ಕನಿಷ್ಟ 30 ಮಿಲಿಯನ್ ಜನರು ಆಶ್ರಯ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ. ಈ ವರ್ಷದ ಜೂನ್ 14ರಿಂದ ಆಗಸ್ಟ್ 25ರವರೆಗೆ ಪ್ರವಾಹ ಮತ್ತು ಮಳೆಗೆ ಸಂಬಂಧಿಸಿದ ಘಟನೆಗಳಿಂದಾಗಿ ಸಿಂಧ್ ಪ್ರಾಂತದಲ್ಲಿ 306 ಮಂದಿ ಜೀವ ಕಳೆದುಕೊಂಡಿದ್ದಾರೆ.

ಬಲೋಚಿಸ್ತಾನದಲ್ಲಿ 234, ಖೈಬರ್ ಪಖ್ತೂಂಖ್ವದಲ್ಲಿ 185, ಪಂಜಾಬ್ ಪ್ರಾಂತದಲ್ಲಿ 165, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 37, ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದಲ್ಲಿ 9 ಸಾವಿನ ಪ್ರಕರಣ ವರದಿಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್ಡಿಎಂಎ) ಅಂಕಿಅಂಶ ಸಹಿತ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿರುವುದರಿಂದ ಹಲವೆಡೆ ದಿಢೀರ್ ಪ್ರವಾಹ ಉಂಟಾಗಿದೆ.

ಸಿಂಧ್ ಪ್ರಾಂತದ 23 ಜಿಲ್ಲೆಗಳನ್ನು ವಿಪತ್ತು ಪೀಡಿತ ಎಂದು ಘೋಷಿಸಿರುವುದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯ ಉಸ್ತುವಾರಿಗೆ ಎನ್ಡಿಎಂಎಯಲ್ಲಿ ನಿಯಂತ್ರಣಾ ಕೊಠಡಿ ಸ್ಥಾಪನೆಗೆ ಪ್ರಧಾನಿ ಶಹಬಾರ್ ಶರೀಫ್ ಆದೇಶಿಸಿದ್ದಾರೆ. ಆದರೆ ಎಡೆಬಿಡದೆ ಸುರಿಯುತ್ತಿರುವ ಭೀಕರ ಮಳೆ ಪರಿಹಾರ ಕಾರ್ಯಾಚರಣೆಗೆ ತೊಡಕಾಗಿದೆ. ಹೆಲಿಕಾಪ್ಟರ್ ಮೂಲಕದ ಕಾರ್ಯಾಚರಣೆಯೂ ಕಷ್ಟವಾಗಿದೆ ಎಂದು ಹವಾಮಾನ ಬದಲಾವಣೆ ಇಲಾಖೆಯ ಸಚಿವೆ ಶೆರ್ರೀ ರೆಹ್ಮಾನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಪಾಕಿಸ್ತಾನವು ಹಿಂದೆಂದೂ ಕಂಡು ಕೇಳರಿಯದ ಮುಂಗಾರು ಮಳೆಯ ಹೊಡೆತಕ್ಕೆ ಸಿಲುಕಿದ್ದು ಸಾಮಾನ್ಯವಾಗಿ ದೇಶದಲ್ಲಿ 4 ಆವರ್ತದಲ್ಲಿ ಮುಂಗಾರು ಮಳೆಯಾಗುತ್ತಿದ್ದರೆ ಈ ಬಾರಿ 8 ಆವೃತ್ತಿಯ ಮಳೆಯಾಗಿದೆ. ಸೆಪ್ಟಂಬರ್ನಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆಯಿದೆ. ಉತ್ತರದಿಂದ ಮುನ್ನುಗ್ಗಿ ಬರುತ್ತಿರುವ ನೆರೆ ನೀರಿನಿಂದಾಗಿ ಹಲವೆಡೆ ಮನೆಗಳು, ಸೇತುವೆಗಳು, ಸಂಪರ್ಕ ಮತ್ತು ಸಂವಹನ ವ್ಯವಸ್ಥೆ ಕೊಚ್ಚಿಕೊಂಡು ಹೋಗಿವೆ.

ಸುಮಾರು 30 ಮಿಲಿಯನ್ ಜನತೆ ನೆಲೆ ಕಳೆದುಕೊಂಡಿದ್ದಾರೆ. ತಾತ್ಕಾಲಿಕ ಶಿಬಿರ ಕಲ್ಪಿಸಲು ಸಿಂಧ್ ಆಡಳಿತ 1 ಮಿಲಿಯನ್ ಟೆಂಟ್ ಮತ್ತು ಬಲೋಚಿಸ್ತಾನ 1 ಲಕ್ಷ ಟೆಂಟ್ಗೆ ಬೇಡಿಕೆ ಸಲ್ಲಿಸಿದೆ. ಇತರ ಪ್ರಾಂತಗಳಿಂದಲೂ ಬೇಡಿಕೆ ಬಂದಿದೆ. ಆದ್ದರಿಂದ ವಿದೇಶದ ನೆರವನ್ನು ಕೋರಲಾಗಿದೆ ಎಂದು ಸಚಿವೆ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News