ಜಮ್ಮು ಕಾಶ್ಮೀರ: ಗುಲಾಂ ನಬಿ ಆಝಾದ್ ಬೆಂಬಲಿಸಿ ಮತ್ತೆ 8 ಕಾಂಗ್ರೆಸ್ ಮುಖಂಡರ ರಾಜೀನಾಮೆ

Update: 2022-08-27 02:29 GMT
ಗುಲಾಂ ನಬಿ ಆಝಾದ್ (PTI)

ಶ್ರೀನಗರ: ಶುಕ್ರವಾರ ಮುಂಜಾನೆ ಕಾಂಗ್ರೆಸ್*(Congress) ಪಕ್ಷಕ್ಕೆ ರಾಜೀನಾಮೆ ನೀಡಿದ ಹಿರಿಯ ಮುಖಂಡ ಗುಲಾಂ ನಬಿ ಆಝಾದ್( Ghulam Nabi Azad) ಅವರನ್ನು ಬೆಂಬಲಿಸಿ ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಎಂಟು ಮಂದಿ ಮಾಜಿ ಶಾಸಕರು ಹಾಗೂ ಮಾಜಿ ಸಚಿವರು ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಎಂಟು ಮಂದಿಯ ಪೈಕಿ ಮೂವರು ಕಾಶ್ಮೀರದವರು ಹಾಗೂ ಐದು ಮಂದಿ ಜಮ್ಮು ಪ್ರದೇಶದವರು.

ಮಾಜಿ ಸಚಿವರಾದ ಜಿ.ಎಂ.ಸರೂರಿ, ಆರ್.ಎಸ್.ಛಿಬ್ ಮತ್ತು ಜುಗಲ್ ಕಿಶೋರ್ ಶರ್ಮಾ, ಮಾಜಿ ಶಾಸಕರಾದ ಚೌಧರಿ ಅಕ್ರಮ್, ಮುಹಮ್ಮದ್ ಅಮೀನ್ ಭಟ್, ಗುಲ್ಜರ್ ಅಹ್ಮದ್ ವಾನಿ, ಹಾಜಿ ಅಬ್ದುಲ್ ರಶೀದ್ ಮತ್ತು ನರೇಶ್ ಗುಪ್ತಾ ಸೇರಿದ್ದಾರೆ. ಗುಲಾಂ ನಬಿ ಆಝಾದ್ ಅವರ ಬೆಂಬಲಾರ್ಥವಾಗಿ ಪಕ್ಷದ ಎಲ್ಲ ಹುದ್ದೆಗಳಿಗೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಎಂಟು ಮಂದಿ ಮುಖಂಡರು ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ ಛಿಬ್ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪ್ರತ್ಯೇಕ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಕಾರು-ಲಾರಿ ಢಿಕ್ಕಿ; ಮೂವರು ಮೃತ್ಯು

"ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಸದಸ್ಯರಾಗಿ ನಮ್ಮ ರಾಜ್ಯದ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ನನ್ನ ರಾಜ್ಯದ ಅಭಿವೃದ್ಧಿಗಾಗಿ ಕೊಡುಗೆ ನೀಡುವ ವೇಗವನ್ನು ಕಳೆದುಕೊಂಡಿದೆ ಎನಿಸುತ್ತದೆ" ಎಂದು ಛಿಬ್ ತಮ್ಮ ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ.

ರಾಜೀನಾಮೆ ನೀಡಿದವರ ಪೈಕಿ ಐದು ಮಂದಿ ಆಝಾದ್ ಅವರ ಆಪ್ತರಾಗಿದ್ದು, ದೆಹಲಿಯಲ್ಲಿ ಆಝಾದ್ ಜತೆ ಬೀಡು ಬಿಟ್ಟಿದ್ದಾರೆ. ಏತನ್ಮಧ್ಯೆ ಕಾಂಗ್ರೆಸ್ ಪಕ್ಷದ ಹಲವು ಮಂದಿ ಮುಖಂಡರು ಶನಿವಾರ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ರಾತ್ರಿ ಸಭೆ ನಡೆಸಿ ಚರ್ಚಿಸಿದ ಬಳಿಕ ಹೇಳಿಕೆ ನೀಡುವುದಾಗಿ ಹಿರಿಯ ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News