ಪ್ರಧಾನಿ ಮೋದಿ ಕ್ಷೇತ್ರದಲ್ಲಿ ಬೀದಿಗಳಲ್ಲೇ ಶವಸಂಸ್ಕಾರ!

Update: 2022-08-27 03:37 GMT

ವಾರಣಾಸಿ: ವಾರಣಾಸಿ(Varanasi)ಯ ಪ್ರಸಿದ್ಧ ಘಾಟ್‍ಗಳು ಸೇರಿದಂತೆ ನಗರದ ಹಲವು ಪ್ರದೇಶಗಳು ಗಂಗಾ(Ganga) ಹಾಗೂ ವರುಣಾ(Varuna) ನದಿ ನೀರಿನಿಂದ ಮುಳುಗಿದ್ದು, ಹರಿಶ್ಚಂದ್ರ(Harishchandra ghat) ಹಾಗೂ ಮಣಿಕಂಟಕ ಘಾಟ್‍(Manikarnika ghat)ಗಳಿಗೆ ಸಂಸ್ಕಾರಕ್ಕಾಗಿ ತಂದ ಮೃತದೇಹಗಳನ್ನು ಅಕ್ಕಪಕ್ಕದ ಬೀದಿಗಳಲ್ಲಿ ಹಾಗೂ ಮನೆಗಳ ಟೆರೇಸ್‍ಗಳ ಮೇಲೆ ಅಂತ್ಯಸಂಸ್ಕಾರ ನಡೆಸುತ್ತಿರುವ ದೃಶ್ಯ ಕಂಡುಬರುತ್ತಿದೆ ಎಂದು ndtv ವರದಿ ಮಾಡಿದೆ.

ಪ್ರವಾಹದಿಂದ ಸಂತ್ರಸ್ತರಾಗಿರುವ ನಿರಾಶ್ರಿತರು ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದು, ಇವರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲು ಆಡಳಿತ ಯಂತ್ರ ಸಜ್ಜಾಗುತ್ತಿದೆ.

ತಮ್ಮ ಕ್ಷೇತ್ರದ ಜನ ಗಂಭೀರ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಈಗಾಗಲೇ ಪರಿಹಾರ ಶಿಬಿರಗಳಲ್ಲಿ ಆಸರೆ ಪಡೆದಿರುವ ಮಂದಿಗೆ ಸಾಧ್ಯವಾದ ಎಲ್ಲ ನೆರವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಾಗ್ವಾ, ಸಾಮ್ನೇ ಘಾಟ್, ಮಾರುತಿನಗರ, ಕಾಶಿಪುರಂ ಸೇರಿದಂತೆ ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. "ಮನೆಗೆ ನೀರು ನುಗ್ಗುತ್ತಿದ್ದಂತೆ ಕುಟುಂಬ ಸದಸ್ಯರನ್ನು ಗ್ರಾಮಕ್ಕೆ ಕಳುಹಿಸಿದ್ದೇನೆ ಹಾಗೂ ಮನೆಯನ್ನು ನೋಡಿಕೊಳ್ಳಲು ಒಬ್ಬನೇ ಉಳಿದಿದ್ದೇನೆ" ಎಂದು ಸಾಮ್ನೆ ಘಾಟ್‍ನ ನಿವಾಸಿ ವೀರೇಂದ್ರ ಚೌಬೆ ಹೇಳಿದ್ದಾರೆ.

ಅಸ್ಸಿ ಘಾಟ್‍ನಿಂದ ನಮೋ ಘಾಟ್‍ವರೆಗಿನ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಹರಿಶ್ಚಂದ್ರ ಘಾಟ್ ಮತ್ತು ಮಣಿಕರ್ಣಿಕಾ ಘಾಟ್‍ಗೆ ಅಂತಿಮ ಸಂಸ್ಕಾರಕ್ಕಾಗಿ ತಂದ ಮೃತದೇಹಗಳನ್ನು ಪಕ್ಕದ ಬೀದಿಗಳಲ್ಲಿ ಅಥವಾ ಟೆರೇಸ್ ಮೇಲೆ ಸುಡುವುದು ಅನಿವಾರ್ಯವಾಗಿದೆ. ಸ್ಥಳಾವಕಾಶದ ಕೊರತೆಯಿಂದಾಗಿ ಶವಸಂಸ್ಕಾರಕ್ಕಾಗಿ ಜನ ಉದ್ದ ಸರದಿಗಳಲ್ಲಿ ನಿಂತಿರುವುದು ಕಂಡುಬರುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಗುಲಾಂ ನಬಿ ಆಝಾದ್ ಬೆಂಬಲಿಸಿ ಮತ್ತೆ 8 ಕಾಂಗ್ರೆಸ್ ಮುಖಂಡರ ರಾಜೀನಾಮೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News