ಕೇರಳದ ಷರಿಯಾ ಅಕಾಡೆಮಿಯಲ್ಲಿ ಭಗವದ್ಗೀತೆ, ಅದ್ವೈತ ತತ್ವಶಾಸ್ತ್ರದ ಕಲಿಕೆ

Update: 2022-08-27 16:44 GMT
ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿರುವ ಮಹಮ್ಮದ್‌ ಫೈಝಿ | ಚಿತ್ರ: TheNewIndianExpress

ತ್ರಿಶ್ಶೂರ್:‌ ಪಾಲಕ್ಕಾಡ್‌ ಪಟ್ಟಾಂಬಿ ಮೂಲದ ರಿನ್‌ಶಾದ್ ಸಿ ಪಿ ಇಸ್ಲಾಮಿಕ್ ಷರಿಯಾ ಕೋರ್ಸ್‌ ವ್ಯಾಸಂಗ ಮಾಡುತ್ತಿದ್ದಾರೆ. ಅದರೊಂದಿಗೆ, ಅವರು ಸಂಸ್ಕೃತ, ಉಪನಿಷತ್ತುಗಳು, ಅದ್ವೈತ ತತ್ವಶಾಸ್ತ್ರ ಮತ್ತು ಭಗವದ್ಗೀತೆಯ ಬಗ್ಗೆ ತರಗತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ರಿನ್‌ಶಾದ್ ಭಾರತೀಯ ತತ್ವಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳನ್ನು ಅಧ್ಯಯನ ಮಾಡುತ್ತಿರುವುದು ಕೇವಲ ವೈಯಕ್ತಿಕ ಆಸಕ್ತಿಯಿಂದಲ್ಲ, ಬದಲಾಗಿ ತ್ರಿಶೂರ್ ಮೂಲದ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್ಡ್ ಸ್ಟಡೀಸ್ (ASAS) ನೀಡುತ್ತಿರುವ ಇಸ್ಲಾಮಿಕ್ ಷರಿಯಾ ಕೋರ್ಸ್ ಅನ್ನು ಈ ರೀತಿಯಾಗಿ ವಿನ್ಯಾಸಗೊಳಿಸಲಾಗಿದೆ.

ಜನರು ತಮ್ಮ ನಂಬಿಕೆಗಿಂತ ಭಿನ್ನವಾಗಿರುವ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಜಗತ್ತಿನಲ್ಲಿ, ಅಂತಹ ದೃಷ್ಟಿಕೋನಗಳ ಬಗ್ಗೆ ಕಲಿಯುವುದು ಹೇಗೆ ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುತ್ತದೆ ಎಂಬುದನ್ನು ASAS ಸಂಸ್ಥೆಯು ತೋರಿಸುತ್ತದೆ. ಮಲಿಕ್ ಬಿನ್ ದಿನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ನಡೆಸುತ್ತಿರುವ ASAS, ಸುನ್ನಿ ಸಂಘಟನೆಯಾದ ಸಮಸ್ತ ಕೇರಳ ಜಮ್-ಇಯ್ಯತುಲ್ ಉಲಮಾದ ನಿರ್ವಹಣೆಯಲ್ಲಿದೆ.

ಸ್ವತಃ ಸಂಸ್ಕೃತ ವಿದ್ವಾಂಸರಾದ ಸಮಸ್ತ ಎರ್ನಾಕುಲಂ ಜಿಲ್ಲಾ ಕಾರ್ಯದರ್ಶಿ ಓಂಪಲ್ಲಿ ಮುಹಮ್ಮದ್ ಫೈಝಿ ಅವರು ASAS ನ ಹಿಂದಿನ ರೂವಾರಿ. "ಇಲ್ಲಿ, ನಾವು ನಮ್ಮ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಶ್ರೀಮಂತ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತೇವೆ. ಅವರಲ್ಲಿ ಸಕಾರಾತ್ಮಕ ಮನೋಭಾವವನ್ನು ಮೂಡಿಸಲು ಪ್ರಯತ್ನಿಸುತ್ತೇವೆ" ಎಂದು ಕಾಲಡಿಯ ಶ್ರೀ ಶಂಕರ ಕಾಲೇಜಿನಿಂದ ಅದ್ವೈತ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಫೈಝಿ ಹೇಳಿದ್ದಾರೆ.

ಸಿಧ್ಧರೂಪದಿಂದ ಆರಂಭವಾಗಿ ಸಂಸ್ಕೃತವನ್ನು ವ್ಯವಸ್ಥಿತ ರೀತಿಯಲ್ಲಿ ಕಲಿಸಲಾಗುತ್ತದೆ. ಅದನ್ನು ಕಲಿಯಲು ಹೆಚ್ಚು ಆಸಕ್ತಿ ಹೊಂದಿರುವವರನ್ನು ಉನ್ನತ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಸಂಸ್ಕೃತ ವಿದ್ವಾಂಸರಾದ ಕೆ ಪಿ ನಾರಾಯಣ ಪಿಶಾರಡಿಯವರ ಶಿಷ್ಯರಾದ ಯತೀಂದ್ರನ್ ಅವರು ನಮ್ಮ ಅಧ್ಯಾಪಕರಲ್ಲಿ ಒಬ್ಬರು. ನಾನು ಭಗವದ್ಗೀತೆಯನ್ನು ಕಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ASAS ನಿಯಮಿತವಾಗಿ ಸಂಸ್ಕೃತದ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಅದನ್ನು ಹೇಗೆ ಮಾತನಾಡಬೇಕೆಂದು ಕಲಿಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ. “ಪ್ರವಾದಿ ಮುಹಮ್ಮದ್ ಯುವಕನಿಗೆ ಸಿರಿಯನ್ ಭಾಷೆಯನ್ನು ಕಲಿಯಲು ಹೇಳಿದ್ದರು. ನಾವು ಇತರ ವ್ಯವಸ್ಥೆಗಳನ್ನು ಎಷ್ಟು ಹೆಚ್ಚು ಪರಿಶೀಲಿಸುತ್ತೇವೆ, ಆಗ ನಮ್ಮ ಮಿತಿಗಳು ಹೆಚ್ಚು ವಿಸ್ತಾರಗೊಳ್ಳುತ್ತವೆ, ”ಎಂದು ಫೈಝಿ ಹೇಳಿದ್ದಾರೆ.

ಇಸ್ಲಾಮಿಕ್ ವಿಷಯಗಳನ್ನು ಅಧ್ಯಯನ ಮಾಡುವ ಮುಸ್ಲಿಂ ವಿದ್ಯಾರ್ಥಿಗಳು ಎದುರಿಸುತ್ತಿರುವ ಒಂದು ಅಡಚಣೆಯೆಂದರೆ ಅವರಿಗೆ ಇಸ್ಲಾಮಿಕ್ ಪರಿಭಾಷೆ ಮಾತ್ರ ತಿಳಿದಿದೆ. ಇದು ಸಮಾಜದ ಇತರ ವಿಭಾಗಗಳೊಂದಿಗೆ ಅವರ ಸಂವಹನದಲ್ಲಿ ಮಿತಿಗಳನ್ನು ಸೃಷ್ಟಿಸುತ್ತದೆ ಎಂದು ಫೈಝಿ ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾರ್ಥಿಗಳನ್ನು ಎಎಸ್‌ಎಎಸ್‌ಗೆ ಸೇರಿಸಲಾಗುತ್ತದೆ. ಎಂಟು ವರ್ಷಗಳ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ, ಅವರು 'ಮಾಲಿಕಿ' ಎಂಬ ಧಾರ್ಮಿಕ ಪದವಿಯ ಜೊತೆಗೆ ವಿಶ್ವವಿದ್ಯಾನಿಲಯ ಪದವಿಯನ್ನು ಪಡೆಯುತ್ತಾರೆ. ಡಿಗ್ರಿ ಪದವಿಯನ್ನು ಕ್ಯಾಲಿಕಟ್ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಅಡಿಯಲ್ಲಿ ನೀಡಲಾಗುತ್ತದೆ.

"ನಮಗೆ ತಜ್ಞರಿಂದ ಸಂಸ್ಕೃತ ಕಲಿಯಲು ಮತ್ತು ಇತರ ನಂಬಿಕೆಗಳು ಮತ್ತು ಜ್ಞಾನದ ಶಾಖೆಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಅವಕಾಶ ಸಿಗುತ್ತಿರುವುದರಿಂದ ಈ ಕೋರ್ಸ್‌ಗೆ ಸೇರಲು ನಾನು ಅದೃಷ್ಟಶಾಲಿಯಾಗಿದ್ದೆ." ಎಂದು ಆರನೇ ವರ್ಷದ ವಿದ್ಯಾರ್ಥಿ ರಿನ್ಶಾದ್ ಹೇಳಿದ್ದಾರೆ.
 

ಕೃಪೆ: TheNewIndianExpress

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News