ಉತ್ತರ ಪ್ರದೇಶ: ಮನೆಯಲ್ಲಿ ಸಾಮೂಹಿಕ ನಮಾಝ್‌ ಮಾಡಿದ್ದಕ್ಕೆ ಎಫ್‌ಐಆರ್‌ ದಾಖಲು

Update: 2022-08-29 15:29 GMT
ಮೊರಾದಾಬಾದ್ ಎಸ್ಪಿ ಸಂದೀಪ್ ಕುಮಾರ್ ಮೀನಾ (Photo: Twitter/@ANI) 

ಲಕ್ನೋ: ಮನೆಯಲ್ಲಿ ಸಾಮೂಹಿಕ ನಮಾಝ್‌ ಮಾಡಿದ ಕಾರಣಕ್ಕಾಗಿ ಉತ್ತರ ಪ್ರದೇಶದ(Uttar Pradesh) ಮೊರಾದಾಬಾದ್ ಪೊಲೀಸರು ಎರಡು ಮನೆಗಳ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಾಮೂಹಿಕ ನಮಾಝ್(namaz) ಮಾಡಲು‌ ಮುಸ್ಲಿಮರು ಅಲ್ಲಿ ನೆರೆದಿದ್ದರು ಎಂದು ಪೊಲೀಸರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಉತ್ತರ ಪ್ರದೇಶದ ಛಾಜ್ಲೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ದುಲ್ಹೇಪುರ್ ಗ್ರಾಮದಲ್ಲಿ ಆಗಸ್ಟ್ 24 ರಂದು ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಮೀನಾ ತಿಳಿಸಿದ್ದಾರೆ.

"ಅಲ್ಲಿ ಯಾವುದೇ ಮಸೀದಿ ಇಲ್ಲ, ಕೇವಲ ಎರಡು ಮನೆಗಳು ಮಾತ್ರ ಇದೆ. ಆರೋಪಿಗಳು ತಮ್ಮ ಮನೆಗಳಲ್ಲಿ ನಮಾಝ್ ಮಾಡುವ ಮೊದಲು ಅನುಮತಿಯನ್ನು ತೆಗೆದುಕೊಂಡಿಲ್ಲ” ಎಂದು ಅಧಿಕಾರಿ ಹೇಳಿರುವುದಾಗಿ ವರದಿಯಾಗಿದೆ. 

ಚಂದ್ರ ಪಾಲ್ ಸಿಂಗ್ ಎಂಬ ವ್ಯಕ್ತಿಯ ದೂರಿನ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505-2 ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

"ಇನ್ನೊಂದು ಸಮುದಾಯಕ್ಕೆ ಸೇರಿದ ನೆರೆಹೊರೆಯವರ ಆಕ್ಷೇಪಣೆಯನ್ನು ಅನುಸರಿಸಿ, ಮನೆಯಲ್ಲಿ ಇಂತಹ ಅಭ್ಯಾಸದಲ್ಲಿ ಪಾಲ್ಗೊಳ್ಳದಂತೆ ಅವರಿಗೆ ಹಿಂದೆ ಎಚ್ಚರಿಕೆ ನೀಡಲಾಗಿತ್ತು. ಆರೋಪಿಗಳು ತಲೆಮರೆಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ” ಎಂದು ಸಂದೀಪ್‌ ಕುಮಾರ್ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

"ಭಾರತದಲ್ಲಿರುವ ಮುಸ್ಲಿಮರು ಇನ್ನು ಮುಂದೆ ಮನೆಯಲ್ಲಿಯೂ ನಮಾಝ್ ಮಾಡಲು ಸಾಧ್ಯವಿಲ್ಲವೇ? ಈಗ ಪ್ರಾರ್ಥನೆ ಸಲ್ಲಿಸಲು ಸರ್ಕಾರದಿಂದ ಅಥವಾ ಪೊಲೀಸರಿಂದ ಅನುಮತಿ ಪಡೆಯಬೇಕೇ " ಎಂದು ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಟ್ವಿಟರ್‌ನಲ್ಲಿ ಪೊಲೀಸ್ ಕ್ರಮವನ್ನು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಮುಸ್ಲಿಮರನ್ನು ಯಾವಾಗ ಎರಡನೇ ದರ್ಜೆಯ ಪ್ರಜೆಗಳೆಂದು ಪರಿಗಣಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿದ ಉವೈಸಿ, ಪೊಲೀಸ್ ಕ್ರಮವನ್ನು "ಅನ್ಯಾಯ" ಎಂದು ಬಣ್ಣಿಸಿದ್ದಾರೆ.

"ನಮಾಝ್ ಎಲ್ಲಿ ಬೇಕಾದರೂ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿರುವಾಗ ಮನೆಯಲ್ಲಿ ನಮಾಝ್ ಮಾಡಲು ಏಕೆ ವಿರೋಧ ವ್ಯಕ್ತವಾಗಿದೆ?" ಎಂದು ಉವೈಸಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮುರುಘಾ ಶರಣರ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಹೊರ ರಾಜ್ಯಕ್ಕೆ ವರ್ಗಾಯಿಸಿ: ಲೆಹರ್ ಸಿಂಗ್ ಆಗ್ರಹ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News