×
Ad

ಜಾರ್ಖಂಡ್:‌ ಗೆಳೆತನಕ್ಕೆ ನಿರಾಕರಿಸಿದ ಬಾಲಕಿಗೆ ಬೆಂಕಿ ಹಚ್ಚಿದ ಯುವಕ, ಜೀವನ್ಮರಣ ಹೋರಾಟದಲ್ಲಿದ್ದ ಬಾಲಕಿ ಸಾವು

Update: 2022-08-29 21:25 IST
Photo: Twitter/@ANI 

ದುಮ್ಕಾ: ಆಗಸ್ಟ್ 23 ರಂದು ಜಾರ್ಖಂಡ್‌ನ ದುಮ್ಕಾದಲ್ಲಿ 16 ವರ್ಷದ ಶಾಲಾ ಬಾಲಕಿಯೊಬ್ಬಳ ಮೇಲೆ ಯುವಕನೊಬ್ಬ ಬೆಂಕಿ ಹಚ್ಚಿದ ಪ್ರಕರಣ ನಗರದಲ್ಲಿ ಉದ್ವಿಗ್ನ ಸ್ಥಿತಿಯನ್ನು ಉಂಟು ಮಾಡಿದೆ. ಮಲಗಿದ್ದ ಬಾಲಕಿ ಮೇಲೆ ಯುವಕ ಬೆಂಕಿ ಹಚ್ಚಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಹುತೇಕ ಸುಟ್ಟ ಗಾಯಗೊಂಡಿದ್ದ ರವಿವಾರ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. 

ತನಗೆ ಬೆಂಕಿ ಹಚ್ಚಿದ ಯುವಕ ತನಗೆ ಕಿರುಕುಳ ನೀಡುತ್ತಿರುವುದಾಗಿ ಸಂತ್ರಸ್ತೆ ಆರೋಪಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ದುಷ್ಕರ್ಮಿಯನ್ನು ಶಾರುಖ್‌ ಹುಸೇನ್‌ ಎಂದು ಗುರುತಿಸಲಾಗಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿವೆ.
 
ಹುಡುಗಿ ಮ್ಯಾಜಿಸ್ಟ್ರೇಟ್‌ಗೆ ಹೇಳಿಕೆಯಲ್ಲಿ ಆರೋಪಿಯನ್ನು ಹೆಸರಿಸಿದ್ದಾಳೆ ಎಂದು ndtv.com ವರದಿ ಮಾಡಿದೆ. ಸುಮಾರು 10 ದಿನಗಳ ಹಿಂದೆ ಆಕೆಗೆ ಮೊಬೈಲ್‌ಗೆ ಕರೆ ಮಾಡಿದ್ದ ಆತ, ತನ್ನ ಸ್ನೇಹಿತನಾಗುವಂತೆ ಪೀಡಿಸಿದ್ದು, ಆತನ ಬೇಡಿಕೆಯನ್ನು ತಿರಸ್ಕರಿಸಿದಾಗ ಆಕೆಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.  ಕಳೆದ ಸೋಮವಾರ ಆತ ಕರೆ ಮಾಡಿ ಬೆದರಿಕೆ ಹಾಕಿದ್ದ ಎಂದೂ ಬಾಲಕಿ ಹೇಳಿದ್ದಾಗಿ ವರದಿಯಾಗಿದೆ. 

"ಆತನ ಬೆದರಿಕೆಯ ಬಗ್ಗೆ ನಾನು ನನ್ನ ತಂದೆಗೆ ತಿಳಿಸಿದ್ದೇನೆ, ಅದರ ನಂತರ ಅವರು ಮಂಗಳವಾರ ಆತನ ಕುಟುಂಬದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದರು. ನಮ್ಮ ಊಟದ ನಂತರ ನಾವು ಮಲಗಲು ಹೋದೆವು, ನಾನು ಇನ್ನೊಂದು ಕೋಣೆಯಲ್ಲಿ ಮಲಗಿದ್ದೆ. ಮಂಗಳವಾರ ಬೆಳಗಿನ ಹೊತ್ತಿಗೆ, ನನ್ನ ಬೆನ್ನಿನಲ್ಲಿ ನೋವು ಕಾಣಿಸಿಕೊಂಡಿತು. ನಾನು ಕಣ್ಣು ತೆರೆದಾಗ ಆತ ಓಡಿಹೋಗುತ್ತಿರುವುದನ್ನು ನಾನು ಕಂಡೆ, ನಾನು ನೋವಿನಿಂದ ಕಿರುಚಲು ಪ್ರಾರಂಭಿಸಿ, ನನ್ನ ತಂದೆಯ ಕೋಣೆಗೆ ಹೋದೆ, ನನ್ನ ಪೋಷಕರು ಬೆಂಕಿಯನ್ನು ನಂದಿಸಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು, ”ಎಂದು ಬಾಲಕಿ ಹೇಳಿದ್ದಳು. 

ಆಕೆಯ ಮುಖವನ್ನು ಹೊರತುಪಡಿಸಿ ಇಡೀ ದೇಹವು ಸುಟ್ಟುಹೋಗಿತ್ತು ಎಂದು ಎನ್‌ಡಿಟಿವಿ ವರದಿ ಹೇಳಿದೆ. 

ಸಂತ್ರಸ್ತೆ ಮತ್ತು ಆರೋಪಿಗಳು ಬೇರೆ ಬೇರೆ ಸಮುದಾಯದವರಾಗಿರುವುದರಿಂದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಮಹಿಳೆಯರ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣ ಕಾವು ಪಡೆಯುತ್ತಿದ್ದಂತೆಯೇ ಪ್ರಕರಣವನ್ನು ತೀವ್ರವಾಗಿ ಪರಿಗಣಿಸಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಉನ್ನತ ಪೋಲೀಸ್ (ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಮಟ್ಟದಲ್ಲಿ) ಪ್ರಕರಣವನ್ನು ಮೇಲ್ವಿಚಾರಣೆ ಮಾಡುವುದಾಗಿ ಘೋಷಿಸಿದ್ದಾರೆ. ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಅದಾಗ್ಯೂ, ಪರಿಸ್ಥಿತಿ ಸಹಜವಾಗಿದ್ದು ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಆರೋಪಿ ಶಾರುಖ್‌ನನ್ನು ಬಂಧಿಸಲಾಗಿದೆ. ತ್ವರಿತ ವಿಚಾರಣೆಗಾಗಿ ನಾವು ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇವೆ. ಜನರು ನಮಗೆ ಸಹಕರಿಸುತ್ತಿದ್ದಾರೆ. ನಾವು ಶಾಂತಿಯನ್ನು ಕಾಪಾಡುವಂತೆ ನಾವು ಜನರಿಗೆ ಮನವಿ ಮಾಡುತ್ತೇವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಸೆಕ್ಷನ್ 144 ವಿಧಿಸಲಾಗಿದೆ" ಎಂದು ದುಮ್ಕಾ ಸೂಪರಿಂಟೆಂಡೆಂಟ್ ಪೊಲೀಸ್ ಅಂಬರ್ ಲಕ್ಡಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News