ಸಮಯದ ಅಭಾವ: ತೀಸ್ತಾ ಸೆಟಲ್ವಾಡ್‌ ಜಾಮೀನು ಅರ್ಜಿ ವಿಚಾರಣೆ ಸೆ.1 ಕ್ಕೆ ಮುಂದೂಡಿಕೆ

Update: 2022-08-30 13:51 GMT
Photo: TOI/Twitter

ಹೊಸದಿಲ್ಲಿ: 2002 ರ ಗುಜರಾತ್ ಗಲಭೆ ಪ್ರಕರಣಗಳಲ್ಲಿ ʼಅಮಾಯಕರನ್ನುʼ ಬಂಧಿಸಲು ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.

ಮಧ್ಯಾಹ್ನ 3:45ಕ್ಕೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿದ್ದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು, ಸಮಯದ ಕೊರತೆಯಿಂದಾಗಿ ಸೆಪ್ಟೆಂಬರ್ 1 ಕ್ಕೆ ಪ್ರಕರಣವನ್ನು ಮುಂದೂಡಿತು.

ʼಸಮಯದ ಕೊರತೆಯಿಂದಾಗಿ, ವಿಷಯವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಗುರುವಾರ ಮಧ್ಯಾಹ್ನ 3 ಗಂಟೆಗೆ ಈ ವಿಷಯವನ್ನು ಪಟ್ಟಿ ಮಾಡಿ,ʼ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ, ಹಿರಿಯ ರಾಜಕೀಯ ನಾಯಕರ ಆಜ್ಞೆಯ ಮೇರೆಗೆ ತೀಸ್ತಾ ಸೆಟಲ್ವಾಡ್ ಇತರ ಆರೋಪಿಗಳೊಂದಿಗೆ ಸಂಚು ರೂಪಿಸಿದ್ದಾರೆ ಎಂದು ಗುಜರಾತ್ ಸರ್ಕಾರವು ಹೇಳಿದೆ. ಅಲ್ಲದೆ, ಸೆಟಲ್ವಾಡ್‌ ದೊಡ್ಡ ಪ್ರಮಾಣದ ಹಣವನ್ನು ಸ್ವೀಕರಿಸಿದ್ದಾರೆ ಎಂದು ಸರ್ಕಾರ ತನ್ನ ಅಫಿಡವಿಟ್‌ ನಲ್ಲಿ ಹೇಳಿದೆ.

ಇದಕ್ಕೂ ಮುನ್ನ, ಗುಜರಾತ್ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸೆಟಲ್ವಾಡ್ ಅವರ ಅರ್ಜಿಗೆ ಪ್ರತಿಕ್ರಿಯೆ ಸಿದ್ಧವಾಗಿದೆ ಮತ್ತು ಕೆಲವು ತಿದ್ದುಪಡಿಗಳ ನಂತರ ಸಲ್ಲಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದ್ದರು.

ಜೂನ್‌ನಲ್ಲಿ ಬಂಧನಕ್ಕೊಳಗಾಗಿದ್ದ ಸೆಟಲ್ವಾಡ್ ಅವರ ಜಾಮೀನು ಅರ್ಜಿಯ ಕುರಿತು ಆಗಸ್ಟ್ 22 ರಂದು ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು.

ಆಗಸ್ಟ್ 3 ರಂದು ಗುಜರಾತ್ ಹೈಕೋರ್ಟ್, ಸೆಟಲ್ವಾಡ್ ಅವರ ಜಾಮೀನು ಅರ್ಜಿಯ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು ಮತ್ತು ಸೆಪ್ಟೆಂಬರ್ 19 ರಂದು ವಿಚಾರಣೆಗೆ ನಿಗದಿಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News