6 ವರ್ಷಗಳಿಂದ ಬುಡಕಟ್ಟು ಮಹಿಳೆಯನ್ನು ಮನೆಯೊಳಗೆ ಕೂಡಿಹಾಕಿ ಚಿತ್ರಹಿಂಸೆಗೈದ ಬಿಜೆಪಿ ನಾಯಕಿ: ಆರೋಪ

Update: 2022-08-30 14:51 GMT
Photo: Twitter

ರಾಂಚಿ: ಜಾರ್ಖಂಡ್‌ನ ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರು ತಮ್ಮ ಮನೆಯ ಸಹಾಯಕಿಯಾಗಿದ್ದ ಬುಡಕಟ್ಟು ಮಹಿಳೆಯನ್ನು ಕಳೆದ ಆರು ವರ್ಷಗಳಿಂದ ಕೋಣೆಯೊಳಗೆ ಕೂಡಿ ಹಾಕಿ, ನಿರಂತವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆಘಾತಕಾರಿ ಸುದ್ದಿ ವರದಿಯಾಗಿದೆ.

ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಸೀಮಾ ಪಾತ್ರಾ ಅವರು ʼಭೇಟಿ ಬಚಾವೋ, ಭೇಟಿ ಪಡಾವೋʼದ ರಾಜ್ಯ ಸಂಚಾಲಕಿಯೂ ಆಗಿದ್ದಾರೆ. ಅವರ ಪತಿ ಮಹೇಶ್ವರ್ ಪಾತ್ರಾ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದಾರೆ.

ಪಾತ್ರಾ ಅವರ ಮನೆಗೆಲಸದಲ್ಲಿದ್ದ ಸುನೀತಾ ಎಂಬವರೇ ಸಂತ್ರಸ್ತ ಮಹಿಳೆಯಾಗಿದ್ದು, ಪ್ರಸ್ತುತ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಸುನಿತಾ ಅವರ ವಿಡಿಯೋ ಈಗ ವೈರಲ್‌ ಆಗಿದ್ದು, ಸುನಿತಾರ ಹಲವಾರು ಹಲ್ಲುಗಳು ಕಾಣೆಯಾಗಿವೆ, ಹಾಗೂ ಕುಳಿತುಕೊಳ್ಳಲು ಅಸಮರ್ಥಳಾಗಿದ್ದಾರೆ. ಆಕೆಯ ದೇಹದ ಮೇಲಿನ ಗಾಯದ ಗುರುತುಗಳು ಪುನರಾವರ್ತಿತ ದಾಳಿಯನ್ನು ಸೂಚಿಸುತ್ತವೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಸುನಿತಾ ಅವರು ಆಸ್ಪತ್ರೆಯಲ್ಲಿರುವ ಹೃದಯ ವಿದ್ರಾವಕ ದೃಶ್ಯಗಳು ವೈರಲ್‌ ಆಗುತ್ತಿದ್ದಂತೆ, ಬಿಜೆಪಿ ನಾಯಕಿಯ ಬಂಧನಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಸದ್ಯ ಅವರನ್ನು ಅವರ ಸ್ಥಾನದಿಂದ  ವಜಾಗೊಳಿಸಲಾಗಿದೆ.

29 ವರ್ಷ ಪ್ರಾಯದ ಸಂತ್ರಸ್ತೆ ಸುನೀತಾ, ಅವರು, ಜಾರ್ಖಂಡ್‌ನ ಗುಮ್ಲಾ ಮೂಲದವರಾಗಿದ್ದು, ಸುಮಾರು 10 ವರ್ಷಗಳ ಹಿಂದೆ ಪಾತ್ರಾ ಬಳಿ ಮನೆಗೆಲಸಕ್ಕೆ ಸೇರಿದ್ದರು. ಅವರ ಮಗಳು ವತ್ಸಲಾ ಕೆಲಸದ ನಿಮಿತ್ತ ದಿಲ್ಲಿಗೆ ತೆರಳಿದ್ದಾಗ, ಸುನೀತಾ ಅವರ ಸಹಾಯಕ್ಕೆ ಅವರೊಂದಿಗೆ ತೆರಳಿದ್ದರು. ಸುಮಾರು ನಾಲ್ಕು ವರ್ಷಗಳ ಬಳಿಕ ವತ್ಸಲಾ ಮತ್ತು ಸುನೀತಾ ರಾಂಚಿಗೆ ಮರಳಿದ್ದರು.

ನಂತರದ ಆರು ವರ್ಷಗಳಲ್ಲಿ, ಸೀಮಾ ಪಾತ್ರಾ ಅವರಿಂದ ಕ್ರೂರ ಚಿತ್ರಹಿಂಸೆಗೆ ಒಳಗಾಗಿದ್ದೇನೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಪಾರ ನೋವಿನಿಂದ ಮಾತನಾಡಿದ ಸುನೀತಾ, ತನಗೆ ಬಿಸಿ ತವಾ ಮತ್ತು ರಾಡ್‌ಗಳಿಂದ ಥಳಿಸಲಾಯಿತು ಮತ್ತು ತನ್ನ ಹಲ್ಲುಗಳನ್ನು ಒಡೆದುಹಾಕಲಾಯಿತು ಎಂದು ಹೇಳಿದ್ದಾರೆ. ಅಲ್ಲದೆ, ನೆಲದ ಮೇಲೆ ಮೂತ್ರವನ್ನು ನೆಕ್ಕುವಂತೆ ಆಕೆಯನ್ನು ಬಲವಂತಪಡಿಸಲಾಗಿತ್ತು ಎಂದೂ ಯುವತಿ ಹೇಳಿದ್ದಾರೆ.

ಈ ಚಿತ್ರಹಿಂಸೆಯನ್ನು ತನಗೆ ಶಿಕ್ಷೆಯಾಗಿ ನೀಡಲಾಯಿತು, ಆದರೆ ತನ್ನ ತಪ್ಪುಗಳೇನು ಎಂದು ತನಗೆ ತಿಳಿದಿರಲಿಲ್ಲ ಎಂದು ಸುನೀತಾ ತಿಳಿಸಿದ್ದಾರೆ.

ಅದೇ ವೇಳೆ, ಸೀಮಾ ಪಾತ್ರಾ ಅವರ ಮಗ ಆಯುಷ್ಮಾನ್ ತನಗೆ ಸಹಾಯ ಮಾಡಿದ್ದಾನೆ ಎಂದು ಹೇಳಿದ, ಸುನಿತಾ ʼನಾನು ಬದುಕಿರುವುದು ಅವನಿಂದ ಮಾತ್ರʼ ಎಂದು ತಿಳಿಸಿದ್ದಾರೆ. 

ವರದಿಗಳ ಪ್ರಕಾರ, ಆಯುಷ್ಮಾನ್ ಅವರು ಸುನೀತಾ ಅವರ ಪರಿಸ್ಥಿತಿಯನ್ನು ತನ್ನ ಸ್ನೇಹಿತರಿಗೆ ವಿವರಿಸಿ, ಸಹಾಯಕ್ಕಾಗಿ ಕೇಳಿದರು. ನಂತರ ಅವರ ಸ್ನೇಹಿತ ಪೊಲೀಸ್ ದೂರು ದಾಖಲಿಸಿದ್ದು, ಸುನೀತಾರನ್ನು ರಕ್ಷಿಸಲಾಗಿದೆ. ಆಕೆ ಈಗ ರಾಂಚಿಯ ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಶೀಘ್ರದಲ್ಲೇ ಆಕೆಯ ಹೇಳಿಕೆಯನ್ನು ದಾಖಲಿಸುವ ನಿರೀಕ್ಷೆಯಿದ್ದು, ಬಳಿಕ ಪಾತ್ರಾ ಅವರನ್ನು ಬಂಧಿಸಬಹುದು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News