ಭಾರತ ನಿರ್ಮಿತ ಗರ್ಭಕಂಠ ಕ್ಯಾನ್ಸರ್ ಲಸಿಕೆ ಶೀಘ್ರವೇ 200-400 ರೂ.ಗೆ ಲಭ್ಯ
ಹೊಸದಿಲ್ಲಿ,ಸೆ.1: ಸರ್ವಿಕಲ್ ಅಥವಾ ಗರ್ಭಕಂಠ ಕ್ಯಾನ್ಸರ್ ತಡೆಯಲು ಭಾರತದ ಮೊದಲ ಸ್ವದೇಶಿ ನಿರ್ಮಿತ ಲಸಿಕೆ ಕ್ವಾಡ್ರಿವಲಂಟ್ ಹ್ಯೂಮನ್ ಪಾಪಿಲೋಮಾ ವೈರಸ್ (ಎಚ್ಪಿವಿ) ಲಸಿಕೆಯು ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ ಮತ್ತು 200 ರೂ.ನಿಂದ 400 ರೂ.ಗಳ ಕೈಗೆಟಕುವ ಬೆಲೆಯಲ್ಲಿ ಜನರಿಗೆ ಲಭ್ಯವಾಗಲಿದೆ.
ಲಸಿಕೆಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಿರುವುದನ್ನು ಘೋಷಿಸಲು ಗುರುವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು, ‘ಕೋವಿಡ್ ಮುನ್ನೆಚ್ಚರಿಕೆಯ ಆರೋಗ್ಯ ರಕ್ಷಣೆ ಕ್ರಮಗಳ ಬಗ್ಗೆ ಜಾಗ್ರತಿಯನ್ನು ಹೆಚ್ಚಿಸಿದ್ದು,ಇದು ಗರ್ಭಕಂಠ ಕ್ಯಾನ್ಸರ್ ವಿರುದ್ಧದಂತಹ ಲಸಿಕೆಗಳ ಅಭಿವೃದ್ಧಿಗೆ ಕಾರಣವಾಗಿದೆ. ಆಯುಷ್ಮಾನ್ ಭಾರತದಂತಹ ಯೋಜನೆಗಳು ನಾವು ಮುನ್ನೆಚ್ಚರಿಕೆಯ ಆರೋಗ್ಯ ರಕ್ಷಣೆ ಕ್ರಮಗಳ ಬಗ್ಗೆ ಆಲೋಚಿಸುವಂತೆ ಮಾಡಿವೆ ಮತ್ತು ನಾವು ಈಗ ಅದನ್ನು ನಿಭಾಯಿಸಬಲ್ಲೆವು. ಈ ವಿಷಯದಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯು ನೇತೃತ್ವವನ್ನು ವಹಿಸಿದೆ ಮತ್ತು ಸಹಭಾಗಿತ್ವವನ್ನು ಉತ್ತೇಜಿಸುತ್ತಿದೆ. ವೈಜ್ಞಾನಿಕ ಪ್ರಯತ್ನಗಳು ಕೆಲವೊಮ್ಮೆ ಅರ್ಹ ಮನ್ನಣೆಯನ್ನು ಪಡೆಯುವುದಿಲ್ಲ. ಹೀಗಾಗಿ ಲಸಿಕೆಯ ವೈಜ್ಞಾನಿಕ ಪೂರ್ಣಗೊಳಿಸುವಿಕೆಯನ್ನು ಸಂಭ್ರಮಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಲಸಿಕೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ಪೂರ್ಣಗೊಂಡಿವೆ ಮತ್ತು ಸಾರ್ವಜನಿಕರಿಗೆ ಅದನ್ನು ಲಭ್ಯವಾಗಿಸುವುದು ಮುಂದಿನ ಹೆಜ್ಜೆಯಾಗಿದೆ ಎನ್ನುವುದನ್ನು ವೈಜ್ಞಾನಿಕ ಪೂರ್ಣಗೊಳಿಸುವಿಕೆಯು ಸೂಚಿಸುತ್ತದೆ.
ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಾಲಾ ಅವರು,ಗರ್ಭಕಂಠ ಕ್ಯಾನ್ಸರ ಲಸಿಕೆಯು 200 ರೂ.ಗಳಿಂದ 400 ರೂ.ಗಳ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ,ಆದಾಗ್ಯೂ ಅಂತಿಮ ಬೆಲೆಯನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ಲಸಿಕೆಯು ಈ ವರ್ಷದ ಅಂತ್ಯದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಆರಂಭದಲ್ಲಿ ಲಸಿಕೆಯನ್ನು ಸರಕಾರಿ ಏಜೆನ್ಸಿಗಳ ಮೂಲಕ ಲಭ್ಯವಾಗಿಸಲಾಗುವುದು ಮತ್ತು ಮುಂದಿನ ವರ್ಷದಿಂದ ಕೆಲವು ಖಾಸಗಿ ಪಾಲುದಾರರನ್ನೂ ಇದರಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದ ಪೂನಾವಾಲಾ,200 ಮಿಲಿಯನ್ ಡೋಸ್ಗಳನ್ನು ಸಿದ್ಧಗೊಳಿಸುವ ಯೋಜನೆಯನ್ನು ಹೊಂದಲಾಗಿದ್ದು,ಮೊದಲು ಭಾರತದಲ್ಲಿ ಲಸಿಕೆಯನ್ನು ನೀಡಲಾಗುವುದು. ಅದರ ನಂತರವಷ್ಟೇ ಇತರ ದೇಶಗಳಿಗೆ ರಫ್ತು ಮಾಡಲಾಗುವುದು ಎಂದೂ ತಿಳಿಸಿದರು.