‘ಬಳಸಿ ಎಸೆಯುವ’ ಸಂಸ್ಕೃತಿಯು ಕೇರಳದಲ್ಲಿಯ ವೈವಾಹಿಕ ಸಂಬಂಧಗಳ ಮೇಲೆ ಪ್ರಭಾವ ಬೀರಿರುವಂತಿದೆ: ಹೈಕೋರ್ಟ್
ಕೊಚ್ಚಿ,ಸೆ.1: ಯಾವುದೇ ಹೊಣೆಗಾರಿಕೆಗಳು ಮತ್ತು ಕಟ್ಟುಪಾಡುಗಳಿಲ್ಲದ ಮುಕ್ತ ಜೀವನವನ್ನು ಆನಂದಿಸಲು ಮದುವೆಯು ನಿವಾರಿಸಬಹುದಾದ ಅಡ್ಡಿಯಾಗಿದೆ ಎಂದು ಈ ದಿನಗಳಲ್ಲಿ ಯುವಪೀಳಿಗೆಯು ಭಾವಿಸುತ್ತಿದೆ ಎಂದು ಕೇರಳ ಉಚ್ಚ ನ್ಯಾಯಾಲಯವು ಬೆಟ್ಟು ಮಾಡಿದೆ.
ಯುವಪೀಳಿಗೆಯು ‘ವೈಫ್ (ಪತ್ನಿ)’ ಶಬ್ದವನ್ನು ‘ವೈಸ್ ಇನ್ವೆಸ್ಟ್ ಮೆಂಟ್ ಫಾರ್ ಎವರ್(ಶಾಶ್ವತವಾಗಿ ಜಾಣ ಹೂಡಿಕೆ)’ ಎಂಬ ಹಳೆಯ ಪರಿಕಲ್ಪನೆಯ ಬದಲು ‘ವರಿ ಇನ್ವೈಟೆಡ್ ಫಾರ್ ಎವರ್ (ಶಾಶ್ವತವಾಗಿ ಚಿಂತೆಗೆ ಆಹ್ವಾನ)’ ಎಂದು ಅರ್ಥೈಸಿಕೊಳ್ಳುತ್ತಿದೆ. ‘ಬಳಸು ಮತ್ತು ಎಸೆ ’ ಗ್ರಾಹಕ ಸಂಸ್ಕೃತಿಯು ನಮ್ಮ ವೈವಾಹಿಕ ಸಂಬಂಧಗಳ ಮೇಲೂ ಪ್ರಭಾವ ಬೀರಿರುವಂತೆ ಕಾಣುತ್ತಿದೆ. ಸಂಬಂಧ ಮುರಿದುಬಿದ್ದಾಗ ವಿದಾಯ ಹೇಳಲಷ್ಟೇ ಲಿವ್-ಇನ್ ರಿಲೇಷನ್ಶಿಪ್ಗಳು ಹೆಚ್ಚುತ್ತಿವೆ ಎಂದು ನ್ಯಾಯಮೂರ್ತಿಗಳಾದ ಮುಹಮ್ಮದ್ ಮುಷ್ತಾಕ್ ಮತ್ತು ಸೋಫಿ ಥಾಮಸ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅಭಿಪ್ರಾಯಿಸಿತು.
ತನಗೆ ವಿಚ್ಛೇದನವನ್ನು ತಿರಸ್ಕರಿಸಿದ ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಲಪ್ಪುಝದ 34 ಹರೆಯದ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸಂದರ್ಭ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಆತ ಕ್ರೌರ್ಯದ ಆಧಾರದಲ್ಲಿ ವಿಚ್ಛೇದನವನ್ನು ಬಯಸಿದ್ದ. ತಮ್ಮ ವೈವಾಹಿಕ ಸಂಬಂಧವು ಸರಿಪಡಿಸಲಾಗದಷ್ಟು ಕೆಟ್ಟಿದೆ,ಹೀಗಾಗಿ ತಾನು ಪತ್ನಿಯಿಂದ ವಿಚ್ಛೇದನವನ್ನು ಬಯಸಿದ್ದೇನೆ ಎಂದಾತ ಹೇಳಿಕೊಂಡಿದ್ದ.
ತನ್ನ ಪತ್ನಿಯು ವಿಪರೀತವಾಗಿ ವರ್ತಿಸುತ್ತಾಳೆ,ತಾನು ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದೇನೆ ಎಂದು ಆರೋಪಿಸಿ ತನ್ನೊಂದಿಗೆ ಜಗಳವಾಡುತ್ತಾಳೆ ಎಂದು ವ್ಯಕ್ತಿ ನ್ಯಾಯಾಲಯದಲ್ಲಿ ನಿವೇದಿಕೊಂಡಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು,ತನ್ನ ಪತಿಯ ನೈತಿಕತೆ ಮತ್ತು ದಾಂಪತ್ಯ ನಿಷ್ಠೆಯನ್ನು ಶಂಕಿಸಲು ಪತ್ನಿಯು ಸಮಂಜಸವಾದ ಕಾರಣಗಳನ್ನು ಹೊಂದಿರುವಾಗ ಮತ್ತು ಆಕೆ ಪತಿಯನ್ನು ಪ್ರಶ್ನಿಸಿದರೆ ಅಥವಾ ತನ್ನ ತೀವ್ರ ನೋವು ಮತ್ತು ದುಃಖವನ್ನು ಆತನೆದುರು ವ್ಯಕ್ತಪಡಿಸಿದರೆ ಅದನ್ನು ವಿಪರೀತದ ವರ್ತನೆ ಎಂದು ಹೇಳಲಾಗುವುದಿಲ್ಲ, ಏಕೆಂದರೆ ಅದು ಸಾಮಾನ್ಯ ಪತ್ನಿಯ ಸಹಜ ಮಾನವ ನಡವಳಿಕೆಯಾಗಿದೆ ಎಂದು ಹೇಳಿತು.
‘ದೇವರ ಸ್ವಂತ ನಾಡು ’ಎಂದು ಕರೆಯಲ್ಪಡುವ ಕೇರಳವು ಒಂದು ಕಾಲದಲ್ಲಿ ಸದೃಢ ಕೌಟುಂಬಿಕ ಬಂಧನಕ್ಕಾಗಿ ಪ್ರಸಿದ್ಧವಾಗಿತ್ತು. ಆದರೆ ಕ್ಷುಲ್ಲಕ ಅಥವಾ ಸ್ವಾರ್ಥಿ ಕಾರಣಗಳಿಗಾಗಿ ಅಥವಾ ವಿವಾಹೇತರ ಸಂಬಂಧಗಳಿಗಾಗಿ ತಮ್ಮ ಮಕ್ಕಳ ಬಗ್ಗೆಯೂ ಆಲೋಚಿಸದೆ ಮದುವೆಯನ್ನು ಮುರಿದುಕೊಳ್ಳುವುದು ಪ್ರಸ್ತುತ ಪ್ರವೃತ್ತಿಯಾಗಿರುವಂತೆ ಕಂಡು ಬರುತ್ತಿದೆ ಎಂದು ಉಚ್ಚ ನ್ಯಾಯಾಲಯವು ಅಭಿಪ್ರಾಯವನ್ನು ವ್ಯಕ್ತಪಡಿಸಿತು.
‘ಕ್ಷೋಭೆಗೊಂಡ ಮತ್ತು ಹಾಳಾದ ಕುಟುಂಬಗಳಿಂದ ಹೊರಬೀಳುವ ಅಳಲು ಮತ್ತು ಕಿರುಚಾಟಗಳು ಇಡೀ ಸಮಾಜದ ಆತ್ಮಸಾಕ್ಷಿಯನ್ನೇ ಅಲುಗಾಡಿಸುತ್ತವೆ. ಜಗಳವಾಡುವ ದಂಪತಿಗಳು,ಪರಿತ್ಯಕ್ತ ಮಕ್ಕಳು ಮತ್ತು ಹತಾಶ ವಿಚ್ಛೇದನದ ಸಂಖ್ಯೆಗಳು ಹೆಚ್ಚಾದಾಗ ಅದು ನಿಸ್ಸಂಶಯವಾಗಿ ನಮ್ಮ ಸಾಮಾಜಿಕ ಜೀವನದ ನೆಮ್ಮದಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಮತ್ತು ನಮ್ಮ ಸಮಾಜದ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ ’ ಎಂದು ಹೇಳಿದ ಉಚ್ಚ ನ್ಯಾಯಾಲಯವು,ಕಾನೂನು ಮತ್ತು ಧರ್ಮ ಎರಡೂ ಮದುವೆಯನ್ನು ಒಂದು ಸಂಸ್ಥೆಯನ್ನಾಗಿ ಪರಿಗಣಿಸಿವೆ ಮತ್ತು ದಂಪತಿ ತಮ್ಮ ವಿವಾಹವನ್ನು ಕೊನೆಗಾಣಿಸಲು ನ್ಯಾಯಾಲಯದ ಮೂಲಕ ಅಥವಾ ತಮ್ಮನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನಿನ ಮೂಲಕ ಕಾನೂನು ಅಗತ್ಯಗಳನ್ನು ಪೂರೈಸುವವರೆಗೆ ಏಕಪಕ್ಷೀಯವಾಗಿ ಸಂಬಂಧವನ್ನು ಮುರಿದುಕೊಳ್ಳಲು ಅನುಮತಿಸುವುದಿಲ್ಲ ಎಂದು ಹೇಳಿತು.