ಉಡುಪಿ: ವಿದ್ಯಾರ್ಥಿಗಳ ಅಪಹರಣ ಯತ್ನ, ಹಲ್ಲೆ; ಮೂವರು ಆರೋಪಿಗಳ ಬಂಧನ
ಉಡುಪಿ(Udupi): ಕ್ಯಾಟರಿಂಗ್ ಉದ್ಯೋಗ ಮುಗಿಸಿ ಮಣಿಪಾಲ(Manipal)ದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಬಂದ ತಂಡ ಬಲಾತ್ಕಾರವಾಗಿ ಕರೆದೊಯ್ದು, ಅವರ ಸೊತ್ತುಗಳನ್ನು ವಶಪಡಿಸಿಕೊಂಡು, ಹಲ್ಲೆ ನಡೆಸಿದ ಮಂಗಳವಾರ ತಡರಾತ್ರಿ ನಗರದ ಕಲ್ಸಂಕ ಬಳಿ ನಡೆದಿದೆ.
ಉಡುಪಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಬ್ರೈಟಿಲ್ ಬಿಜು ಹಾಗೂ ಆತನ ಸ್ನೇಹಿತ ಸಿನಾನ್ ಎಂಬವರನ್ನು ಬಲವಂತವಾಗಿ ಕರೆದೊಯ್ದು ಅವರಲ್ಲಿದ್ದ ಮೊಬೈಲ್‌ಗಳನ್ನು ಕಿತ್ತುಕೊಂಡು ಹಲ್ಲೆ ನಡೆಸಿದ್ದ ಹಾಗೂ ಎರಡು ಲಕ್ಷ ರೂ. ತಂದುಕೊಂಡುವಂತೆ ಬೆದರಿಕೆ ಒಡ್ಡಿದ ಕಾರಿನಲ್ಲಿದ್ದ ಆರೋಪಿಗಳ ಪೈಕಿ ಮೂವರನ್ನು ಉಡುಪಿ ನಗರ ಠಾಣೆ ಪೊಲೀಸರು ಶಿರ್ವ ಹಾಲುಡೈರಿ ಬಳಿ ವಶಕ್ಕೆ ಪಡೆದು ಬಂಧಿಸಿದ್ದಾರೆ.
ಬಂಧಿತರನ್ನು ಮುಹಮ್ಮದ್ ರಜಿನ್, ಝುಕ್ರಿಯಾ, ಖಾಲಿದ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಆರೋಪಿ ರೆಹಮಾನ್ ತಲೆಮರೆಸಿಕೊಂಡಿದ್ದಾನೆ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಿಜು ನರ್ಸಿಂಗ್ ಕಾಲೇಜು ವಿದ್ಯಾರ್ಥಿಯಾಗಿದ್ದು ಬಿಡುವಿನ ವೇಳೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಕೇಟರಿಂಗ್ ಕೆಲಸ ಮಾಡುತಿದ್ದರು. ಆ.30ರಂದು ಸಂಜೆ ತರಗತಿ ಮುಗಿಸಿ ಉಡುಪಿಯ ಮಣಿಪಾಲ್ ಇನ್ ಹೊಟೇಲಿನಲ್ಲಿ ಕೇಟರಿಂಗ್ ಕೆಲಸ ಮುಗಿಸಿ, ಸ್ನೇಹಿತ ಸಿನಾನ್‌ರೊಂದಿಗೆ ಮಣಿಪಾಲಕ್ಕೆ ನಡೆದುಕೊಂಡು ಮಧ್ಯರಾತ್ರಿ 12:45ಕ್ಕೆ ಕಲ್ಸಂಕ ಬಳಿ ಹೋಗುತಿದ್ದಾಗ ಉಡುಪಿ ಕಡೆಯಿಂದ ಬಂದ ಕಾರೊಂದನ್ನು ತಡೆದು ಲಿಫ್ಟ್ ಕೇಳಿದ್ದರು. ಆದರೆ ಕಾರಿನಲ್ಲಿದ್ದವರನ್ನು ನೋಡಿ ಕಾರನ್ನೇರಲು ನಿರಾಕರಿಸಿದರು. ಆಗ ಇಬ್ಬರನ್ನು ಬಲಾತ್ಕಾರವಾಗಿ ಕಾರಿನೊಳಗೆ ಕುಳ್ಳಿರಿಸಿ ಮಣಿಪಾಲ ಕಡೆ ಕಾರನ್ನು ಓಡಿಸಿಕೊಂಡು ಹೋಗಿ ಅವರಲ್ಲಿದ್ದ ಸೊತ್ತುಗಳನ್ನು ಬಲಾತ್ಕಾರವಾಗಿ ಸೆಳೆದು ಕೊಂಡರು. ದೊಡ್ಡಣಗುಡ್ಡೆ ಪಾರ್ಕ್ ಬಳಿ ಕಾರನ್ನು ತೆಗೆದುಕೊಂಡು ಹೋಗಿ ಇಬ್ಬರ ಮೇಲೆ ಹಲ್ಲೆ ನಡೆಸಿ 2 ಲಕ್ಷರೂ.ತಂದುಕೊಡುವಂತೆ ಬೆದರಿಕೆ ಹಾಕಿದ್ದರು ಎಂದು ದೂರಲಾಗಿತ್ತು.
ಅವರು ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಗಳ ಕಾರಿನ ಜಾಡು ಹಿಡಿದು ಶಿರ್ವ ಬಳಿ ಅವರನ್ನು ಬಂಧಿಸಿದ್ದರು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳದ ಆರೋಪ: ಮುರುಘಾ ಶ್ರೀ ಬಂಧನ