ದಿಲ್ಲಿಯ ಕಾಲೇಜ್ ಹಾಸ್ಟೆಲ್ ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ
ಹೊಸದಿಲ್ಲಿ,ಸೆ.1: ಇಲ್ಲಿಯ ವರ್ಧಮಾನ ಮಹಾವೀರ ಮೆಡಿಕಲ್ ಕಾಲೇಜು ಮತ್ತು ಸಪ್ದರ್ಜಂಗ್ ಆಸ್ಪತ್ರೆಯ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯೋರ್ವಳು ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಕುರಿತು ಆಸ್ಪತ್ರೆಯಲ್ಲಿನ ಪೊಲೀಸ್ ಚೌಕಿಗೆ ಗುರುವಾರ ನಸುಕಿನ 3:30ಕ್ಕೆ ಮಾಹಿತಿ ತಲುಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದಿಲ್ಲಿ ನಿವಾಸಿ ವಿದ್ಯಾರ್ಥಿನಿ ಸಪ್ದರ್ಜಂಗ್ ಆಸ್ಪತ್ರೆಯ ಮಹಿಳಾ ಹಾಸ್ಟೆಲ್ನಲ್ಲಿ ವಾಸವಾಗಿದ್ದು,ತನ್ನ ಇಂಟರ್ನ್ಶಿಪ್ ಮಾಡುತ್ತಿದ್ದಳು.
ವಿದ್ಯಾರ್ಥಿನಿ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ. ತಾನು ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ ಎಂದು ಬರೆದಿದ್ದ ಚೀಟಿ ಆಕೆಯ ಡೈರಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು.
ವಿದ್ಯಾರ್ಥಿನಿಯ ಕೊಠಡಿಯನ್ನು ಒಳಗಿನಿಂದ ಭದ್ರಪಡಿಸಲಾಗಿತ್ತು ಮತ್ತು ಆಕೆಯ ಸ್ನೇಹಿತೆಯರು ಬಲಪ್ರಯೋಗದಿಂದ ಬಾಗಿಲು ಮುರಿದು ಒಳಪ್ರವೇಶಿಸಿದ್ದರು. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ತಕ್ಷಣ ಆಸ್ಪತ್ರೆಯ ಎಮರ್ಜನ್ಸಿ ವಿಭಾಗಕ್ಕೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದಳು ಎಂದು ಡಿಸಿಪಿ ಮನೋಜ್ ಸಿ.ತಿಳಿಸಿದರು.
ವಿದ್ಯಾರ್ಥಿನಿಯ ಕೋಣೆಯಲ್ಲಿ ಖಿನ್ನತೆ ನಿವಾರಕ ಔಷಧಿಯ ಎರಡು ಖಾಲಿ ಪ್ಯಾಕೆಟ್ಗಳು ಪತ್ತೆಯಾಗಿವೆ ಎಂದರು.