ವೃದ್ಧೆಯ ಕೆನ್ನೆಗೆ ಹೊಡೆದು, ದೂಡಿದ ಎಂಎನ್‌ಎಸ್ ಕಾರ್ಯಕರ್ತರು: ಘಟನೆಯ ವೀಡಿಯೊ ವೈರಲ್
ಮುಂಬೈ, ಸೆ. 1: ತನ್ನ ಅಂಗಡಿಯ ಮುಂದೆ ಪ್ರಚಾರ ಫಲಕ ಅಳವಡಿಸುವುದಕ್ಕೆ ಬಿದಿರಿನ ಕಂಬ ಹಾಕುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೃದ್ಧೆಗೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್)ಯ ಕಾರ್ಯಕರ್ತರು ಕೆನ್ನೆಗೆ ಹೊಡೆದ ಹಾಗೂ ದೂಡಿದ ವೀಡಿಯೊ ವೈರಲ್ ಆಗಿದೆ.
ಮುಂಬೈ ಮುಂಬಾ ದೇವಿ ಪ್ರದೇಶದಲ್ಲಿ ಎಂಎನ್‌ಎಸ್ ಕಾರ್ಯಕರ್ತರು ಪ್ರಚಾರ ಫಲಕವನ್ನು ಅಳವಡಿಸಲು ಬಿದಿರಿನ ಕಂಬ ಹಾಕುತ್ತಿದ್ದರು. ವೃದ್ಧೆ ಪ್ರಕಾಶ್ ದೇವಿ ತನ್ನ ಔಷಧ ಅಂಗಡಿಯ ಮುಂದೆ ಪ್ರಚಾರ ಫಲಕಗಳನ್ನು ಅಳವಡಿಸದಂತೆ ವಿನಂತಿಸಿದ್ದಾರೆ. ಆದರೆ, ಕಾಯಕರ್ತರು ಅವರ ಕೆನ್ನೆಗೆ ಬಾರಿಸಿದ್ದಾರೆ. ಅನಂತರ ದೂಡಿದ್ದಾರೆ. ಇದರಿಂದ ವೃದ್ಧೆ ಅಂಗಡಿಯ ಮೆಟ್ಟಿಲ ಮೇಲೆ ಬಿದ್ದಿದ್ದಾರೆ. ಇದು ವೀಡಿಯೊದಲ್ಲಿ ದಾಖಲಾಗಿದೆ.
ಮಹಾರಾಷ್ಟ್ರದ ಬಿಜೆಪಿ ನಾಯಕ ಅತುಲ್ ಭಟ್ಖಾಲ್ಕರ್ ಈ ಘಟನೆಯನ್ನು ಖಂಡಿಸಿದ್ದಾರೆ. ವೃದ್ಧೆ ಕೆನ್ನೆಗೆ ಹೊಡೆದ ಹಾಗೂ ಕೆಳಗೆ ಬೀಳುವಂತೆ ದೂಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಸಾಮಾಜಿಕ ಹೋರಾಟಗಾರ್ತಿ ಹಾಗೂ ವಕೀಲೆ ಅಭಾ ಸಿಂಗ್ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. ‘‘ಅವರು ಎಂಎನ್‌ಎಸ್ ಕಾರ್ಯಕರ್ತರಲ್ಲ. ಎಂಎನ್‌ಎಸ್ ಗೂಂಡಾಗಳು’’ ಎಂದು ಹೇಳಿದ್ದಾರೆ.
ಎಂಎನ್‌ಎಸ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಸಾಮಾಜಿಕ ಹೋರಾಟಗಾರ್ತಿ ಬೃಂದಾ ಅಡಿಗ, ಕಾರ್ಯಕರ್ತರ ಇಂತಹ ವರ್ತನೆಗೆ ಪಕ್ಷದ ವರಿಷ್ಠರನ್ನು ಉತ್ತರದಾಯಿಯನ್ನಾಗಿ ಮಾಡಬೇಕು ಎಂದಿದ್ದಾರೆ.
Hello ANI, The 'Man hitting & pushing a woman' is Vinod Argile from MNS. Just in case, South Asia's leading multimedia News agency didn't know. https://t.co/A0YpeFrrSn
— Mohammed Zubair (@zoo_bear) September 1, 2022