ಕ್ರೈಸ್ತರ ಮೇಲೆ ದಾಳಿ ಆರೋಪ: ಕರ್ನಾಟಕ ಸಹಿತ ರಾಜ್ಯಗಳಿಂದ ವರದಿ ಕೋರಿದ ಸುಪ್ರೀಂ ಕೋರ್ಟ್

Update: 2022-09-01 18:06 GMT

ಹೊಸದಿಲ್ಲಿ, ಸೆ. 1: ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಆರೋಪಿಸಿದಂತೆ ಕ್ರಿಶ್ಚಿಯನ್ ಸಂಸ್ಥೆಗಳ ಮೇಲಿನ ದಾಳಿ ಕುರಿತಂತೆ ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ಒಡಿಶಾ, ಚತ್ತೀಸ್‌ಗಢ ಹಾಗೂ ಜಾರ್ಖಂಡ್ ಸೇರಿದಂತೆ ರಾಜ್ಯಗಳಿಂದ ವರದಿ ಕೋರುವಂತೆ ಸುಪ್ರೀಂ ಕೋರ್ಟ್ ಗುರುವಾರ ಗೃಹ ಸಚಿವಾಲಯಕ್ಕೆ ಸೂಚಿಸಿದೆ.

ವ್ಯಕ್ತಿಯೊಬ್ಬನ ಮೇಲಿನ ದಾಳಿ ಎಂದರೆ ಅದು ಸಮುದಾಯದ ಮೇಲಿನ ದಾಳಿ ಎಂದು ಅರ್ಥವಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ  ಸಮುದಾಯದ ಮೇಲಿನ ದಾಳಿ ಬಗ್ಗೆ ಪ್ರತಿಪಾದಿಸಿದ್ದರೆ, ಅದನ್ನು ಪರಿಶೀಲಿಸುವ ಅಗತ್ಯತೆ ಇದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

ಮನವಿಯಲ್ಲಿ ಉಲ್ಲೇಖಿಸಲಾದ ಪ್ರಕರಣಗಳು ಸುಳ್ಳು ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಪ್ರಕಟವಾದ ಸ್ವ ಸೇವಾ ಲೇಖನಗಳನ್ನು ಆಧಾರವಾಗಿ ಹೊಂದಿದೆ ಎಂಬುದು ಪರಿಶೀಲನೆಯಲ್ಲಿ ಕಂಡು ಬಂದಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೇಳಿದ್ದಾರೆ.

ಇಂತಹ ಮನವಿಯನ್ನು ಪರಿಗಣಿಸಿ ಆದೇಶ ನೀಡಬಾರದು ಎಂದು ಅವರು ತಿಳಿಸಿದ್ದಾರೆ.

ರಾಜ್ಯಗಳಿಂದ ವರದಿ ಕೋರಲು ಗೃಹ ಸಚಿವಾಲಯಕ್ಕೆ ನ್ಯಾಯಪೀಠ ಎರಡು ತಿಂಗಳ ಕಾಲಾವಕಾಶ ನೀಡಿದೆ.

ಇಂತಹ ಘಟನೆಗಳನ್ನು ವರದಿ ಮಾಡಲು ಹಾಗೂ ನಿಗಾ ವಹಿಸಲು ನೋಡಲ್ ಅಧಿಕಾರಿಯನ್ನು ನಿಯೋಜಿಸುವ ತನ್ನ ಹಿಂದಿನ ತೀರ್ಪಿನ ಬಗ್ಗೆ ನ್ಯಾಯಾಲಯ ಕಾಳಜಿ ಹೊಂದಿದ್ದು, ಇದನ್ನು ರಾಜ್ಯಗಳು ಅನುಸರಿಸಿವೆ ಎಂದು ನ್ಯಾಯಪೀಠ ತಿಳಿಸಿದೆ.

ನ್ಯಾಷನಲ್ ಸಾಲಿಡರಿಟಿ ಫೋರಂನ ರೆವರೆಂಡ್ ಡಾ. ಪೀಟರ್ ಮಚಾದೊ ಅವರ ಸಲ್ಲಿಸಿದ ಮನವಿಯ ಕುರಿತಂತೆ ನ್ಯಾಯಾಲಯ ಈ ಆದೇಶ ನೀಡಿದೆ. ಇವಾಂಜೆೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾದ ರೆವರೆಂಡ್ ವಿಜಯೇಶ್ ಲಾಲ್ ಹಾಗೂ ಇತರರು ದೇಶದಲ್ಲಿ ಕ್ರಿಶ್ಚಿಯನ್ ಸಮುದಾಯದ ವಿರುದ್ಧದ ಹಿಂಸಾಚಾರದ ಬಗ್ಗೆ ಮನವಿಯಲ್ಲಿ ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News