×
Ad

ಎಲ್ಗಾರ್ ಪರಿಷದ್ ತನಿಖೆಯಿಂದ ಲಭ್ಯ ಸಾಕ್ಷ್ಯಗಳನ್ನು ಸಲ್ಲಿಸಲು ಎನ್ಐಎಗೆ ಮುಂಬೈ ಕೋರ್ಟ್ ಅನುಮತಿ

Update: 2022-09-02 21:02 IST

ಮುಂಬೈ,ಸೆ.2: 2019ರ ಗಡಚಿರೋಳಿ ಸ್ಫೋಟ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಮುಂಬೈ ನ್ಯಾಯಾಲಯವು ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಸಂಗ್ರಹಿಸಿರುವ ಹೆಚ್ಚುವರಿ ಸಾಕ್ಷಾಧಾರಗಳನ್ನು ಸಲ್ಲಿಸಲು ಅನುಮತಿಯನ್ನು ನೀಡಿದೆ.

2019,ಮೇ 1ರಂದು ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿ 15 ಪೊಲೀಸ್ ಸಿಬ್ಬಂದಿಗಳು ಮತ್ತು ವಾಹನದ ಚಾಲಕ ಸಾವನ್ನಪ್ಪಿದ್ದರು.

ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ದ ಸದಸ್ಯರು ಪೊಲೀಸ್ ವಾಹನದ ಮೇಲೆ ದಾಳಿಯ ಸಂಚು ರೂಪಿಸಿದ್ದರು ಎಂದು ಎನ್ಐಎ ಆರೋಪಿಸಿತ್ತು.

ಗಡಚಿರೋಲಿ ಪ್ರಕರಣದಲ್ಲಿ ಕೆಲವು ಸಾಕ್ಷಾಧಾರಗಳನ್ನು ದಾಖಲಿಸುವ ಅಗತ್ಯವಿದೆ ಎಂದು ಎನ್ಐಎ ವಿಶೇಷ ನ್ಯಾಯಾಧೀಶ ರಾಜೇಶ ಕಟಾರಿಯಾ ಅವರಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿತ್ತು. ಇಬ್ಬರು ಸಾಕ್ಷಿಗಳ ಹೇಳಿಕೆಗಳನ್ನು ಮತ್ತು ಫೋಟೊ ಗುರುತು ಪಂಚನಾಮೆಯನ್ನು ಸಲ್ಲಿಸಲು ನ್ಯಾಯಾಲಯವು ಎನ್ಐಎಗೆ ಅನುಮತಿ ನೀಡಿದೆ.

ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿಗಳಲ್ಲಿ ಓರ್ವರಾಗಿರುವ ರೋನಾ ವಿಲ್ಸನ್ ಈಗ ತಲೆಮರೆಸಿಕೊಂಡಿರುವ ಗಡಚಿರೋಲಿ ಪ್ರಕರಣದಲ್ಲಿಯ ಆರೋಪಿ ಭೂಪತಿಯನ್ನು ಭೇಟಿಯಾಗಿದ್ದರು ಎಂಬ ಸಾಕ್ಷಿಯ ಹೇಳಿಕೆಯನ್ನು ಎನ್ಐಎ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News