×
Ad

ಬಾಕಿ ಬಿಲ್ ಪಾವತಿ; ಮಧ್ಯಸ್ಥಿಕೆ ವಹಿಸಲು ಜಿಲ್ಲಾಧಿಕಾರಿ, ಶಾಸಕರಿಗೆ ಗುತ್ತಿಗೆದಾರರ ಆಗ್ರಹ

Update: 2022-09-03 18:09 IST

ಮಂಗಳೂರು, ಸೆ.3: ‘ಗೇಲ್’ ಸಂಸ್ಥೆಯ ಮಂಗಳೂರು-ಕೊಚ್ಚಿ ಪೈಪ್‌ಲೈನ್ ಕಾಮಗಾರಿಯ ಬಿಲ್ ಮೊತ್ತವನ್ನು ಪ್ರಧಾನ ಗುತ್ತಿಗೆದಾರ ಸಂಸ್ಥೆ ಐಎಲ್ ಆ್ಯಂಡ್ ಎಫ್‌ಎಸ್ ಇಂಜಿನಿಯರಿಂಗ್ ಆ್ಯಂಡ್ ಕನ್‌ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್ ಬಾಕಿಯಿರಿಸಿಕೊಂಡಿದ್ದು ಅದರ ಪಾವತಿಗೆ ಶಾಸಕರು ಮತ್ತು ಜಿಲ್ಲಾಧಿಕಾರಿಯವರು ಮಧ್ಯಸ್ಥಿಕೆ ವಹಿಸಬೇಕು ಎಂದು ಮಂಗಳೂರು ವಲಯದ ಗುತ್ತಿಗೆದಾರರು, ಒಳಗುತ್ತಿಗೆದಾರರ ಸಮೂಹ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರ ಸಮೂಹ ಹಾಗೂ ಅಖಿಲ್ ಅಸೋಸಿಯೇಟ್ಸ್‌ನ ದಿನೇಶ್ ವಿ. ಪೈ ಮಾತನಾಡಿ, ಗೇಲ್ ಪೈಪ್‌ಲೈನ್ ಯೋಜನೆಯ ಪ್ರಧಾನ ಗುತ್ತಿಗೆದಾರರಾದ ಐಎಲ್ ಆ್ಯಂಡ್ ಎಫ್‌ಎಸ್ ಇಂಜಿನಿಯರಿಂಗ್ ಆ್ಯಂಡ್ ಕನ್‌ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್‌ಗೆ ಒಳಗುತ್ತಿಗೆದಾರರಾಗಿ ೨೦೧೪ರಿಂದ ೨೦೨೧ರವರೆಗೆ ಹಲವು ಸಿವಿಲ್ ಕಾಮಗಾರಿಗಳನ್ನು ನಡೆಸಿದ್ದೆವು. ೨೦೧೮ರವರೆಗೆ ಪಾವತಿ ಸರಿಯಾಗಿ ಆಗಿತ್ತು. ಆದರೆ ೨೦೧೯-೨೦ರ ಅನಂತರ ಕಂಪೆನಿಯು  ಒಟ್ಟು 2,56,94,034 ರೂ.ಗಳನ್ನು ಬಾಕಿ ಇರಿಸಿದೆ ಎಂದರು.

ಐಎಲ್ ಆ್ಯಂಡ್ ಎಫ್‌ಎಸ್‌ನವರಿಗೆ ಪತ್ರ ಬರೆದು ಕರೆ ಮಾಡಿದರೆ ಸ್ಪಂದನೆ ಇಲ್ಲ. ಮಂಗಳೂರಿನಲ್ಲಿ ಈಗ ಆ ಸಂಸ್ಥೆಯ ಅಧಿಕಾರಿಗಳು ಕೂಡ ಇಲ್ಲ. ಹೊಸದಿಲ್ಲಿ ಕಚೇರಿಗೆ ಕರೆ ಮಾಡಿದರೆ ಕಂಪೆನಿ ನಷ್ಟದಲ್ಲಿರುವುದಾಗಿ ತಿಳಿಸಿದ್ದಾರೆ. ಕಳೆದ ಜೂನ್‌ನಲ್ಲಿ ಬಿಲ್ ಪಾವತಿಗಾಗಿ ಸಾಂಕೇತಿಕ ಪ್ರತಿಭಟನೆ ನಡೆಸಿದಾಗ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಮಧ್ಯಸ್ಥಿಕೆ ವಹಿಸಿ ಬಾಕಿ ಹಣವನ್ನು ಸಂದಾಯ ಮಾಡಿಸುವ ಭರವಸೆ ನೀಡಿದ್ದರು. ಅವರ ಮಾತಿಗೆ ಗೌರವ ನೀಡಿ ಪ್ರತಿಭಟನೆ ನಿಲ್ಲಿಸಿದ್ದೆವು. ಆದರೂ ಪಾವತಿ ಮಾಡಿಲ್ಲ. ನಮಗೆ ಜಿಲ್ಲಾಧಿಕಾರಿಗಳ ಮೇಲೆ ವಿಶ್ವಾಸವಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರರಾದ ದಾವೂದ್, ಸೆಲ್ವಂ, ಯೋಗೀಶ್ ಶೆಟ್ಟಿ, ಪ್ರತಾಪ್ ಉಪಸ್ಥಿತರಿದ್ದರು.

"ಸಾಲ ತೀರಿಸಲಾಗದೆ ಕೆಲ ದಿನಗಳ ಹಿಂದೆ ಓರ್ವ ಗುತ್ತಿಗೆದಾರ ಎರ್ನಾಕುಲಂನ ಗೇಲ್ ಕಚೇರಿ ಬಳಿ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತನಿಗೆ ಬಂದ ಪರಿಸ್ಥಿತಿ ನಮಗೂ ಬರಬಹುದು. ಮಂಗಳೂರು ಭಾಗದ 24 ಮಂದಿ ಗುತ್ತಿಗೆದಾರರು, ಒಳಗುತ್ತಿಗೆದಾರರು ಬಿಲ್ ಪಾವತಿಯಾಗದೆ ತೊಂದರೆಯಲ್ಲಿದ್ದಾರೆ. ಐಎಲ್ ಆ್ಯಂಡ್ ಎಫ್‌ಎಸ್ ಕಂಪೆನಿ ಇದೇ ರೀತಿ ದೇಶದ ವಿವಿಧೆಡೆ ಸುಮಾರು 7500 ಮಂದಿ ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಸಲು ಬಾಕಿ ಇದೆ".
*ದಿನೇಶ್ ವಿ. ಪೈ, ಗುತ್ತಿಗೆದಾರರು, ಅಖಿಲ್ ಅಸೋಸಿಯೇಟ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News