×
Ad

ಮಣಿಪಾಲ: ಕುಡಿದ ಮತ್ತಿನಲ್ಲಿ ಕಾರು ಚಾಲನೆ; ಓರ್ವ ಪೊಲೀಸ್ ವಶಕ್ಕೆ

Update: 2022-09-04 15:17 IST

ಮಣಿಪಾಲ, ಸೆ.4: ಕುಡಿದ ಮತ್ತಿನಲ್ಲಿ ಕಾರನ್ನು ಹಿಮ್ಮುಖವಾಗಿ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಓರ್ವ ಗಾಯಗೊಂಡು, ಎರಡು ಕಾರುಗಳು ಜಖಂಗೊಂಡಿರುವ ಘಟನೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಶನಿವಾರ ತಡರಾತ್ರಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಅಪಘಾತ ಪಡಿಸಿದ ಕಾರು ಚಾಲಕ ಸುಹಾಸ್ ಹಾಗೂ ಆತನ ಕಾರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇವರು ತನ್ನ ಸ್ನೇಹಿತರೊಂದಿಗೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ಬ್ಯಾರೆಲ್ಸ್ ಪಬ್‌ಗೆ ಬಂದಿದ್ದು, ಅಲ್ಲಿ ಮದ್ಯ ಸೇವಿಸಿ ಪಬ್‌ನಿಂದ ಹೊರಗೆ ತನ್ನ ಇನ್ನೋವಾ ಕಾರನ್ನು ಕುಡಿದ ಮತ್ತಿನಲ್ಲಿ ಹಿಮ್ಮುಖವಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದ ಎನ್ನಲಾಗಿದೆ.

ಇದರಿಂದ ಕಾರು ಪಬ್ ನೌಕರ ವಿಕ್ರಾಂತ್ ಎಂಬವರಿಗೆ ಹಾಗೂ ಪಾರ್ಕಿಂಗ್‌ನಲ್ಲಿದ್ದ ಸ್ಕೋಡಾ ಮತ್ತು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ವಿಕ್ರಾಂತ ಕಾಲಿಗೆ ಗಾಯವಾಗಿದ್ದು, ಎರಡು ಕಾರು ಗಳು ಜಖಂಗೊಂಡಿವೆ. ಈ ಬಗ್ಗೆ ಇನ್ನೋವಾ ಕಾರು ಚಾಲಕ ಸುಹಾಸ್ ವಿರುದ್ಧ ಜಖಂಗೊಂಡ ಕಾರು ಚಾಲಕ ರೋಶನ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಸುಹಾಸ್ ನನ್ನು ಪೊಲೀಸರು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದ್ದು, ಆತ ಮದ್ಯ ಸೇವಿಸಿ ಕಾರು ಚಾಲನೆ ಮಾಡಿರುವುದು ದೃಢ ಪಟ್ಟಿದೆ. ಅಲ್ಲದೆ ಇನ್ನಿತರೆ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆಯೂ ಆತನನ್ನು ಪೊಲೀಸರು ಪರೀಕ್ಷೆಗೆ ಒಳಪಡಿಸಲಾಗಿದೆ. ಅದೇ ರೀತಿ ಇನ್ನೋವಾ ಕಾರಿನಲ್ಲಿದ್ದ ಸುಹಾಸ್ ಸ್ನೇಹಿತರಾದ ಭರತ್, ನವೀನ್  ಕಲ್ಯಾಣ್, ನಿರ್ಮಲ, ಕವನ ಎಂಬವರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವೆಲ್ಲರೂ ಬೆಂಗಳೂರು ಮತ್ತು ಶಿವಮೊಗ್ಗದ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಐಟಿ ಸೆಕ್ಟರ್‌ನಲ್ಲಿ ಉದ್ಯೋಗ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಇವರೆಲ್ಲರೂ ಸಂಬಂಧಿಕರ ಮದುವೆಗೆ ಉಡುಪಿಗೆ ಬಂದಿದ್ದು, ರಾತ್ರಿ ಪಬ್‌ಗೆ ಆಗಮಿಸಿದ್ದರೆನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News