ಗಾಝಾ ಪಟ್ಟಿಯ ಬಹುತೇಕ ಜನರಿಗೆ ಮಾನಸಿಕ, ಸಾಮಾಜಿಕ ನೆರವಿನ ಅಗತ್ಯವಿದೆ: ವಿಶ್ವಸಂಸ್ಥೆ

Update: 2022-09-05 16:53 GMT

ವಿಶ್ವಸಂಸ್ಥೆ, ಸೆ.5: ಗಾಝಾ ಪಟ್ಟಿಯ ಜನಸಂಖ್ಯೆಯ  ಮೂರನೇ ಒಂದು ಭಾಗದಷ್ಟು ಜನರಿಗೆ ಮಾನಸಿಕ ಮತ್ತು ಸಾಮಾಜಿಕ ನೆರವಿನ ಅಗತ್ಯವಿದೆ ಎಂದು  ವಿಶ್ವಸಂಸ್ಥೆ ವರದಿ ಮಾಡಿದೆ.

ಆಗಸ್ಟ್ 1ರಿಂದ ಆಗಸ್ಟ್ 7ರಂದು ಕದನ ವಿರಾಮ ಘೋಷಣೆಯಾಗುವವರೆಗಿನ ಅವಧಿಯಲ್ಲಿ ಗಾಝಾ ಪಟ್ಟಿಯಲ್ಲಿನ ಗುರಿಗಳನ್ನು ಉದ್ದೇಶಿಸಿ ಇಸ್ರೇಲ್‌ನ ರಕ್ಷಣಾ ಪಡೆಗಳು ಸುಮಾರು 147 ವಾಯುದಾಳಿ ನಡೆಸಿವೆ. ಇದೇ ಅವಧಿಯಲ್ಲಿ ಪೆಲೆಸ್ತೀನ್ ಹೋರಾಟಗಾರರು ಸುಮಾರು 1100 ರಾಕೆಟ್ ಮತ್ತು ಮೋರ್ಟಾರ್‌ಗಳನ್ನು ಇಸ್ರೇಲ್‌ನತ್ತ ಪ್ರಯೋಗಿಸಿದೆ. ಈ ಅವಧಿಯಲ್ಲಿ 46 ಪೆಲೆಸ್ತೀನೀಯರು ಮೃತಪಟ್ಟು 360 ಮಂದಿ ಗಾಯಗೊಂಡಿದ್ದರೆ, 70 ಇಸ್ರೇಲಿಯನ್ನರೂ ಗಾಯಗೊಂಡಿದ್ದಾರೆ ಎಂದು ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಯ ವಿಶೇಷ ಸಂಯೋಜಕ ಟಾರ್ ವೆನ್ನೆಸ್‌ಲ್ಯಾಂಡ್ ಆಗಸ್ಟ್ ೮ರಂದು ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಮಾಹಿತಿ ನೀಡಿದ್ದರು.

ಆಗಸ್ಟ್ನಲ್ಲಿ ಗಾಝಾದಲ್ಲಿ ಹತರಾದ ಪೆಲೆಸ್ತೀನೀಯರಲ್ಲಿ 17 ಮಕ್ಕಳೂ ಸೇರಿದ್ದಾರೆ. ಗಾಝಾ ಪಟ್ಟಿಯಲ್ಲಿನ ಪೆಲೆಸ್ತೀನಿಯನ್ ಮಕ್ಕಳು ಕಳೆದ 15 ವರ್ಷದಲ್ಲಿ 5ನೇ ಸಂಘರ್ಷಕ್ಕೆ ಸಾಕ್ಷಿಯಾಗಿದ್ದು ಹಿಂಸಾಚಾರಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ  ಇದರಲ್ಲಿ ಹಲವರು  ಈಗಾಗಲೇ ದೀರ್ಘಕಾಲೀನ ಮಾನಸಿಕ ಪರಿಣಾಮಗಳೊಂದಿಗೆ ಬದುಕುತ್ತಿದ್ದಾರೆ ಎಂದು ಯುನಿಸೆಫ್‌ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಪ್ರಾದೇಶಿಕ ನಿರ್ದೇಶಕ ಅಡೆಲ್ ಖೋಡರ್ ಹೇಳಿದ್ದಾರೆ. ಗಾಝಾದಲ್ಲಿನ ಮಾನವೀಯ ಪರಿಸ್ಥಿತಿ ಈಗಾಗಲೇ ಹದಗೆಡುತ್ತಿದ್ದು ಇತ್ತೀಚಿನ ಸಂಘರ್ಷ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಮಾನವೀಯ ಅಗತ್ಯಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪಕ್ಷಗಳೊಂದಿಗೆ ಕೆಲಸ ಮಾಡಲು ಸಿದ್ಧವಿದ್ದೇವೆ ಎಂದು ಆಕ್ರಮಿತ ಪೆಲೆಸ್ತೀನ್ ಪ್ರದೇಶದ ವಿಶ್ವಸಂಸ್ಥೆ ಮಾನವೀಯ ಉಪಕ್ರಮಗಳ ಸಂಯೋಜಕ  ಲಿನ್ ಹೇಸ್ಟಿಂಗ್ಸ್ ಹೇಳಿದ್ದಾರೆ.

ನಾವು ಈಗ ಪ್ರಕರಣಗಳ ಸಮೀಕ್ಷೆಯ ಪ್ರಕ್ರಿಯೆಯಲ್ಲಿ ತೊಡಗಿದ್ದು ಮಾನಸಿಕ ಬೆಂಬಲದ ಅಗತ್ಯವಿದೆ ಎಂದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಖಿನ್ನತೆ ಮತ್ತು ಅಪಸ್ಮಾರ ಸಾಮಾನ್ಯ ರೋಗಲಕ್ಷಣವಾಗಿದ್ದು ಮಾನಸಿಕ ಮೂಲದ ದೀರ್ಘ ಕಾಲದ ದೈಹಿಕ ಕಾಯಿಲೆಗಳಿಗೆ ಸಂಬಂಧಿಸಿದ ಇತರ ಪ್ರಕರಣಗಳೂ ಇವೆ ಎಂದು ಪೆಲೆಸ್ತೀನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ನೆರವು ಮತ್ತು ಪರಿಹಾರ ಏಜೆನ್ಸಿ(ಯುಎನ್‌ಆರ್‌ಡಬ್ಲೂö್ಯಎ)ದ ರೋಗ ತಡೆ ಮತ್ತು ನಿಯಂತ್ರಣ ವಿಭಾಗದ ಮುಖ್ಯಸ್ಥ ಡಾ. ಯೂಸುಫ್ ಶಹೀನ್ ಹೇಳಿದ್ದಾರೆ. ಗಾಝಾ ಪಟ್ಟಿಯಲ್ಲಿ ವಾಸಿಸುತ್ತಿರುವ ಪೆಲೆಸ್ತೀನೀಯರಲ್ಲಿ 65%ಕ್ಕೂ ಅಧಿಕ ಜನತೆ ಬಡತನ ರೇಖೆಗಿಂತ ಕೆಳಮಟ್ಟದಲ್ಲಿದ್ದಾರೆ  ಮತ್ತು 60%ಕ್ಕೂ ಅಧಿಕ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಗಾಝಾದಲ್ಲಿನ ಜನತೆ ಹತಾಶೆಯ ಸ್ಥಿತಿಯಲ್ಲಿದ್ದಾರೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಹದಗೆಟ್ಟ ಪರಿಣಾಮವಾಗಿ ಮಾನಸಿಕವಾಗಿ ಕ್ಷೀಣಿಸುತ್ತಿದ್ದಾರೆ ಎಂದು  ಗಾಝಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಡಾ. ಸಾಮಿ ಒವೈಡಾ ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News