ಏಮ್ಸ್ ಕೇಂದ್ರಗಳಿಗೆ ಮರುನಾಮಕರಣ ಬೇಡ: ಕೇಂದ್ರಕ್ಕೆ ಭುವನೇಶ್ವರ ಏಮ್ಸ್‌ನ ವೈದ್ಯರ ಆಗ್ರಹ

Update: 2022-09-06 14:05 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ದೇಶಾದ್ಯಂತ ಏಮ್ಸ್(AIIMS) ಕೇಂದ್ರಗಳಿಗೆ ಮರುನಾಮಕರಣ ಮಾಡದಂತೆ ಭುವನೇಶ್ವರದ ಏಮ್ಸ್‌ನ ವೈದ್ಯರು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರನ್ನು ಆಗ್ರಹಿಸಿದ್ದಾರೆ.

ಮರುನಾಮಕರಣವನ್ನು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ದೇಶದಲ್ಲಿಯ ಎಲ್ಲ 23 ಏಮ್ಸ್ ಕೇಂದ್ರಗಳಿಗೆ ಸ್ವಾತಂತ್ರ ಹೋರಾಟಗಾರರು,ಪ್ರಾದೇಶಿಕ ಮಹಾನ್ ವ್ಯಕ್ತಿಗಳು,ಐತಿಹಾಸಿಕ ಘಟನೆಗಳು,ಪ್ರಮಖ ಸ್ಮಾರಕಗಳು ಅಥವಾ ಅವು ನೆಲೆಗೊಂಡಿರುವ ಪ್ರದೇಶದ ವಿಶಿಷ್ಟ ಭೌಗೋಳಿಕ ಅನನ್ಯತೆಯ ಹೆಸರುಗಳನ್ನಿಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೋರ್ವರು ಕಳೆದ ತಿಂಗಳು ಮಾಧ್ಯಮಗಳಿಗೆ ತಿಳಿಸಿದ್ದರು.

ಆರೋಗ್ಯ ಸಚಿವಾಲಯವು ಸಲಹೆಗಳನ್ನು ಕೋರಿದ ಬಳಿಕ ಹೆಚ್ಚಿನ ಏಮ್ಸ್ ಕೇಂದ್ರಗಳು ಹೆಸರುಗಳ ಪಟ್ಟಿಯನ್ನು ಸಲ್ಲಿಸಿವೆ ಎಂದೂ ಅವರು ಹೇಳಿದ್ದರು.
ಈ ಉಪಕ್ರಮದ ಹಿಂದಿನ ರಾಷ್ಟ್ರೀಯತೆಯ ಭಾವನೆಗಳು ಪ್ರಶಂಸಾರ್ಹವಾಗಿದ್ದರೂ ಹೆಸರುಗಳನ್ನು ಬದಲಿಸುವುದನ್ನು ತಾನು ಬಯಸುವುದಿಲ್ಲ ಎಂದು ಭುವನೇಶ್ವರ ಏಮ್ಸ್‌ನ ನಿವಾಸಿ ವೈದ್ಯರ ಸಂಘವು ರವಿವಾರ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

‘ಏಮ್ಸ್’ ಹಣೆಪಟ್ಟಿಯು ಈ ಕೇಂದ್ರಗಳು ದಿಲ್ಲಿಯ ಏಮ್ಸ್‌ಗೆ ಸಮನಾದ ಪ್ರಮುಖ ಆರೋಗ್ಯ ಸಂಸ್ಥೆಗಳಾಗಿವೆ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿರುವ ಸಂಘವು,ಅವು ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಶಿಕ್ಷಣದ ಶ್ರೇಷ್ಠ ಸಂಸ್ಥೆಗಳಾಗಿದ್ದು ಭಾರತ ಸರಕಾರದಿಂದ ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಡುತ್ತಿರುವ ಗುಣಮಟ್ಟಗಳನ್ನು ಹೊಂದಿವೆ ಎಂದು ಹೇಳಿದೆ.

ಹೆಸರುಗಳನ್ನು ಬದಲಿಸುವುದು ತರಬೇತಿ ಪಡೆಯುತ್ತಿರುವ ವೈದ್ಯರು ತಮ್ಮ ಅನನ್ಯತೆಯನ್ನು ಕಳೆದುಕೊಳ್ಳುವಂತೆ ಮತ್ತು ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಏಮ್ಸ್‌ನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವೈದ್ಯಕೀಯ ವೃತ್ತಿಪರರಾಗುವ ಆಕಾಂಕ್ಷಿಗಳು ಹಿಂಜರಿಯುವಂತೆ ಮಾಡುತ್ತದೆ ಎಂದು ಪತ್ರದಲ್ಲಿ ಹೇಳಿರುವ ಸಂಘವು, ಈ ಕೇಂದ್ರಗಳಿಗೆ ಏಮ್ಸ್ ಜೊತೆಗೆ ನಗರದ ಹೆಸರನ್ನು ಲಗತ್ತಿಸುವ ಈಗಿನ ನಾಮಕರಣ ಪದ್ಧತಿಯನ್ನೇ ಮುಂದುವರಿಸುವಂತೆ ಕೋರಿಕೊಂಡಿದೆ. ಐಐಟಿ ಮತ್ತು ಐಐಎಂಗಳಿಗೂ ಇದೇ ಪದ್ಧತಿಯಲ್ಲಿ ನಾಮಕರಣ ಮಾಡುತ್ತಿರುವುದನ್ನು ಅದು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News