ಎಲ್ಗಾರ್ ಪರಿಷದ್ ಪ್ರಕರಣ: ಜೈಲಿನಲ್ಲಿ ಪುಸ್ತಕ ಸ್ವೀಕರಿಸಲು ಜ್ಯೋತಿ ಜಗತಾಪ್‌ಗೆ ವಿಶೇಷ ನ್ಯಾಯಾಲಯ ಅನುಮತಿ

Update: 2022-09-06 19:06 GMT

ಮುಂಬೈ, ಸೆ. 6:  ಮುಂಬೈಯ ಬೈಕಲ್ಲಾ (ಮಹಿಳೆಯರ) ಕಾರಾಗೃಹದಲ್ಲಿರುವ ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ಆರೋಪಿ, ಸಾಮಾಜಿಕ ಹೋರಾಟಗಾರ್ತಿ ಜ್ಯೋತಿ ಜಗತಾಪ್ ಅವರಿಗೆ ಪ್ರತಿ ತಿಂಗಳು ಐದು ಶಿಕ್ಷಣಕ್ಕೆ ಸಂಬಂಧಿಸಿದ ಅಥವಾ ಸಾಮಾನ್ಯ ಪುಸ್ತಕಗಳನ್ನು ಸ್ವೀಕರಿಸಲು ಇಲ್ಲಿನ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ಕಾರಾಗೃಹದ ಒಳಗೆ ಪುಸ್ತಕಗಳನ್ನು ಒದಗಿಸುವಂತೆ ಕೋರಿ ಜ್ಯೋತಿ ಜಗತಾಪ್ ಅವರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಜೆ. ಕಟಾರಿಯಾ ಅವರು ಸೋಮವಾರ ಈ ಅನುಮತಿ ನೀಡಿದರು. 

ಕಬೀರ್ ಕಲಾ ಮಂಚ್‌ನ ಸದಸ್ಯೆಯಾಗಿದ್ದ ಜಗತಾಪ್ ಅವರನ್ನು ನಕ್ಸಲೀಯ ಚಟುವಟಿಕೆಗಳನ್ನು ಪ್ರಚಾರ ಮಾಡಿದ ಹಾಗೂ ಮಾವೋವಾದಿ ಸಿದ್ಧಾಂತವನ್ನು ಮುನ್ನಡೆಸಿದ ಆರೋಪದಲ್ಲಿ 2020 ಸೆಪ್ಟಂಬರ್‌ನಲ್ಲಿ ಬಂಧಿಸಲಾಗಿತ್ತು.

ಪುಣೆಯಲ್ಲಿ 2017 ಡಿಸೆಂಬರ್‌ನಲ್ಲಿ ನಡೆದ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಕಬೀರ್ ಕಲಾ ಮಂಚದ ಇತರ ಸದಸ್ಯರೊಂದಿಗೆ ಜ್ಯೋತಿ ಜಗತಾಪ್ ಅವರು ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ ಎಂದು ಎನ್‌ಐಎ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News