×
Ad

ಬೈಕಂಪಾಡಿ; ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಅಣಕು ಶವಯಾತ್ರೆ, ಪ್ರತಿಕೃತಿ ದಹನ

Update: 2022-09-07 17:45 IST

ಸುರತ್ಕಲ್, ಸೆ. 7: ಹಸಿರು ವಲಯ ನಿರ್ಮಿಸಲು ಹಿಂದೇಟು ಹಾಕುತ್ತಿರುವ ಎಮ್ಆರ್ ಪಿಎಲ್,  ಗಂಭೀರ ಪರಿಸರ ಮಾಲಿನ್ಯ ಎಸಗುತ್ತಿರುವ ಅದಾನಿ ವಿಲ್ಮಾ, ರುಚಿಗೋಲ್ಡ್, ಯು. ಬಿ. ಬಿಯರ್ ಸಹಿತ ಬೃಹತ್ ಕೈಗಾರಿಕೆಗಳ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದೆ‌ ಎಂದು ಆರೋಪಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ವತಿಯಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹನ ಮಾಡಿ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಪರಿಸರ ಮಾಲಿನ್ಯ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಬೃಹತ್ ಕೈಗಾರಿಕೆಗಳ ಅಡಿಯಾಳಾಗಿ ಅಕ್ರಮಗಳನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಜೋಕಟ್ಟೆ, ಬಜ್ಪೆ, ಬೈಕಂಪಾಡಿ, ಸುರತ್ಕಲ್ ಮುಂತಾದ ಕೈಗಾರಿಕಾ ಬಾಹುಳ್ಯ ಪ್ರದೇಶಗಳು ಗಂಭೀರವಾದ ಕೈಗಾರಿಕಾ ಮಾಲಿನ್ಯಕ್ಕೆ ಗುರಿಯಾಗಿದ್ದು ಜನರ ಆರೋಗ್ಯಕ್ಕೆ  ಕಂಟಕ ಎದುರಾಗಿದೆ ಎಂದು ಆರೋಪಿಸಿದರು.

ಸರಕಾರದ ಆದೇಶದ ಹೊರತಾಗಿಯು ಹಸಿರು ವಲಯ ನಿರ್ಮಾಣಕ್ಕಾಗಿ  ಎಮ್ ಆರ್ ಪಿ ಎಲ್ 27 ಎಕರೆ ಭೂಸ್ವಾಧೀನಕ್ಕೆ ಸಹಕರಿಸುತ್ತಿಲ್ಲ. ಶೇ.33 ಜಮೀನಿನಲ್ಲಿ ಹಸಿರು ವಲಯ ನಿರ್ಮಿಸದಿರುವುದು ಕಂಪೆನಿಗೆ ಬೀಗ ಜಡಿಯುವ ಅಪರಾಧವಾದರೂ ಮಾಲಿನ್ಯ ನಿಯಂತ್ರಣ ಮಂಡಳಿ ಎಮ್ಅರ್ ಪಿಎಲ್ ಅಧಿಕಾರಿಗಳಿಗೆ ವಿಧೇಯವಾಗಿ ನಡೆದುಕೊಳ್ಳುತ್ತಿದೆ. ಗೌತಮ್ ಅದಾನಿಯ ವಿಲ್ಮಾ, ಬಾಬಾ ರಾಮ್ ದೇವ್ ಒಡೆತನದ ರುಚಿಗೋಲ್ಡ್ ಮತ್ತಿತರ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬೃಹತ್ ಕಂಪೆನಿಗಳ ಮಾಲಿನ್ಯದಿಂದ ಪಲ್ಗುಣಿ ನದಿ ವಿಷಮಯಗೊಳ್ಳುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಣು ಮುಚ್ಚಿ ಕೂತಿದೆ‌ ಎಂದು ದೂರಿದರು.

ಈ ಕುರಿತು ಹದಿನೈದು ದಿನಗಳ ಅಂತರದಲ್ಲಿ ಎರಡು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿ ಮುಂಭಾಗ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಖೇದಕರ. ಇಂತಹ ಹೊಣೆಗೇಡಿತನದ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಡಿವೈಎಫ್ಐ ಮುಖಂಡರಾದ ಬಿ.ಕೆ.ಇಮ್ತಿಯಾಜ್, ಶ್ರೀನಾಥ್ ಕುಲಾಲ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಆರಂಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಣಕು ಶವಯಾತ್ರೆಯನ್ನು ಬೈಕಂಪಾಡಿ ಜಂಕ್ಷನ್ ನಿಂದ ಮಾಲಿ‌ನ್ಯ ನಿಯಂತ್ರಣ ಮಂಡಳಿಯ ಕಚೇರಿ ವರಗೆ ನಡೆಸಲಾಯಿತು. ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಎಸ್. ಬಶೀರ್, ಹೋರಾಟ ಸಮಿತಿ ಸಹ ಸಂಚಾಲಕ ಅಬೂಬಕರ್ ಬಾವ, ಗ್ರಾಪಂ ಸದಸ್ಯೆ ಝುಬೇದಾ, ಮನೋಜ್ ಜೋಕಟ್ಟೆ, ಶ್ರೀನಿವಾಸ್, ಸುರೇಂದ್ರ ಜೋಕಟ್ಟೆ, ಶೇಖರ್ ನಿರ್ಮುಂಜೆ, ಇಕ್ಬಾಲ್ ಜೋಕಟ್ಟೆ, ಚಂದ್ರ ಶೇಖರ್, ಸಿಲ್ವಿಯಾ, ಯಮುನಾ ಕೆಂಜಾರು, ಹನೀಫ್ ಜೋಕಟ್ಟೆ, ರಾಜು ಜೋಕಟ್ಟೆ, ಲಾನ್ಸಿ ಜೋಕಟ್ಟೆ, ದೊಂಬಯ್ಯ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜೋಕಟ್ಟೆ, ಬಜ್ಪೆ ನಾಗರೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News