2024ರ 'ಟಾರ್ಗೆಟ್ 350'ಗೆ ಅಡೆ ತಡೆ: ಬಿಜೆಪಿ ಸಚಿವರಿಗೆ ಅಮಿತ್ ಶಾ, ಜೆ.ಪಿ.ನಡ್ಡಾ ಎಚ್ಚರಿಕೆ

Update: 2022-09-08 02:35 GMT

ಹೊಸದಿಲ್ಲಿ: ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀಡಿದ್ದ ತಳಮಟ್ಟದ ಗುರಿಗಳನ್ನು ತಲುಪಲು ವಿಫಲರಾದ ಬಿಜೆಪಿ ಸಚಿವರಿಗೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮುಖ್ಯ ತಂತ್ರಗಾರ ಅಮಿತ್ ಶಾ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಡೆದ ಆಯಾ ಸಚಿವರಿಗೆ ನಿಗದಿಪಡಿಸಿದ್ದ ಕ್ಷೇತ್ರಗಳಿಗೆ ಕಡ್ಡಾಯವಾಗಿ ನೀಡಬೇಕಾದ ಭೇಟಿಯನ್ನು ತಪ್ಪಿಸಿಕೊಂಡ ಸಚಿವರಿಗೆ ಚಿಂತನಾ ಸಭೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

"ಸಂಘಟನೆಯಿಂದಾಗಿ ನಾವು ಇದ್ದೇವೆ. ಸಂಘಟನೆಯಿಂದಾಗಿ ಸರ್ಕಾರ ಇದೆ. ಸಂಘಟನೆಗೆ ಆದ್ಯತೆ ನೀಡಬೇಕು" ಎಂದು ಸಚಿವರಿಗೆ ಶಾ ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ.

"ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ವ್ಯಕ್ತಿ. ಮೋದಿ ಹೆಸರಿನಲ್ಲಿ ಯಾರು ಕೂಡಾ ಗೆಲ್ಲಬಹುದು. ಆದರೆ ತಳಮಟ್ಟದಲ್ಲಿ ಸಂಘಟನೆ ಇಲ್ಲದಿದ್ದರೆ, ನಮಗೆ ಇದರ ಲಾಭ ಪಡೆಯಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು.

2024ರ ಚುನಾವಣೆಗೆ ಬಿಜೆಪಿ 350 ಸ್ಥಾನಗಳ ಗುರಿ ಇಟ್ಟುಕೊಂಡಿದೆ. ಇದಕ್ಕಾಗಿ ಚುನಾವಣೆಗೆ 20 ತಿಂಗಳು ಮೊದಲೇ ಯೋಜನೆ ಆರಂಭಿಸಿದೆ. 2019ರ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತ 144 ಕ್ಷೇತ್ರಗಳ ಮೇಲೆ ಬಿಜೆಪಿ ಗಮನ ಕೇಂದ್ರೀಕರಿಸಿದೆ. ಈ 144 ಸ್ಥಾನಗಳ ಪೈಕಿ ಕನಿಷ್ಠ 70 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿ ಯೋಜನೆಯಾಗಿದೆ ಎಂದು ಸ್ಪಷ್ಟಪಡಿಸಿದರು.

2019ರ ಚುನಾವಣೆಯಲ್ಲಿ 543 ಸ್ಥಾನಗಳ ಪೈಕಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಕೆಲ ದಶಕಗಳಲ್ಲೇ ಒಂದು ಪಕ್ಷ ಬಹುಮತ ಸಾಧಿಸಿರುವುದು ಇದು ಮೊದಲು. ಕಾಂಗ್ರೆಸ್ ಪಕ್ಷ 53 ಸ್ಥಾನಗಳು ಸೇರಿ 100ಕ್ಕೂ ಹೆಚ್ಚು ಸ್ಥಾನಗಳನ್ನು ವಿರೋಧ ಪಕ್ಷಗಳು ಗೆದ್ದಿದ್ದವು.

ಕೇಂದ್ರ ಸಚಿವರು ಅವರಿಗೆ ನಿಗದಿಪಡಿಸಿದ ಕ್ಷೇತ್ರಗಳಿಗೆ ಭೇಟಿ ನೀಡಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ಕಲ್ಯಾಣ ಯೋಜನೆಗಳು ಯಾವ ಸ್ಥಿತಿಯಲ್ಲಿದೆ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಇವುಗಳನ್ನು "ಸರಳ" ಎಂಬ ವೆಬ್‍ಪೋರ್ಟೆಲ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ. ನಿಯತವಾಗಿ ಸಚಿವರು ಈ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ. ಸರ್ಕಾರ ಹಾಗೂ ಪಕ್ಷದ ಕೆಲಸಕ್ಕೆ ಸಮಾನ ಸಮಯ ಹಂಚಿಕೆ ಮಾಡುವಂತೆ ಆದೇಶ ನೀಡಲಾಗಿದೆ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News