ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸಿ ಅಮಿತ್ ಶಾ ಭದ್ರತೆಯನ್ನು ಉಲ್ಲಂಘಿಸಿದ ವ್ಯಕ್ತಿಯ ಬಂಧನ
ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬೈಗೆ ಭೇಟಿ ನೀಡಿದ್ದಾಗ ಭದ್ರತಾ ಲೋಪವಾಗಿದ್ದು ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸಿ ಶಾ ಹತ್ತಿರ ಬಂದು ನಿರ್ಬಂಧಿತ ಪ್ರದೇಶಗಳಲ್ಲಿ ಮುಕ್ತವಾಗಿ ತಿರುಗಾಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು NDTV ವರದಿ ಮಾಡಿದೆ.
ಅಮಿತ್ ಶಾ ಅವರು ತಮ್ಮ ಎರಡು ದಿನಗಳ ಭೇಟಿಯನ್ನು ಬುಧವಾರ ಕೊನೆಗೊಳಿಸಿದರು. ಆದರೆ ಘಟನೆಯ ವರದಿಗಳು ಇಂದು ಹೊರಬಂದಿವೆ.
ಬಂಧಿತ ವ್ಯಕ್ತಿ ಹೇಮಂತ್ ಪವಾರ್ ಆಂಧ್ರ ಪ್ರದೇಶದ ಸಂಸದರೊಬ್ಬರ ಆಪ್ತ ಕಾರ್ಯದರ್ಶಿ ಎಂದು ತಿಳಿದುಬಂದಿದೆ.
ಪವಾರ್ ಗೃಹ ಸಚಿವಾಲಯದ ಐ-ಕಾರ್ಡ್ ಧರಿಸಿ ಅಮಿತ್ ಶಾ ಅವರ ಸುತ್ತಲೂ ಗಂಟೆಗಟ್ಟಲೆ ಸುಳಿದಾಡಿದ್ದ. ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಅಧಿಕಾರಿಯಂತೆ ಪೋಸ್ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಿತ್ ಶಾ ಭಾಗವಹಿಸಿದ ಎರಡು ಕಾರ್ಯಕ್ರಮಗಳಲ್ಲಿ ಈತನಿದ್ದ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಮನೆಗಳ ಹೊರಗೆ ಕೂಡ ಈತ ಕಾಣಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಅನುಮಾನಗೊಂಡ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಪವಾರ್ ರನ್ನು ಪ್ರಶ್ನಿಸಿದ್ದಾರೆ.
ಗೃಹ ಸಚಿವರ ಭದ್ರತಾ ತಂಡದ ಪಟ್ಟಿಯಲ್ಲಿ ಪವಾರ್ ಹೆಸರಿಲ್ಲ ಎಂಬುದು ಪೊಲೀಸರಿಗೂ ತಿಳಿದು ಬಂದಿದೆ.
ಪವಾರ್ ನನ್ನು ಬಂಧಿಸಲಾಯಿತು. ಆತನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಶಿವಸೇನೆಯಲ್ಲಿನ ವಿಭಜನೆಯ ನಂತರ ಜುಲೈ 30 ರಂದು ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾದ ನಂತರ ಅಮಿತ್ ಶಾ ಮೊದಲ ಬಾರಿಗೆ ಮುಂಬೈಗೆ ಭೇಟಿ ನೀಡಿದ್ದರು.