ಹೈದರಾಬಾದ್‌ನ ಹುಸೇನ್ ಸಾಗರ್ ಕೆರೆಯನ್ನು 'ವಿನಾಯಕ ಸಾಗರ' ಎಂದು ಕರೆದ ತೆಲಂಗಾಣ ಬಿಜೆಪಿ ಅಧ್ಯಕ್ಷ

Update: 2022-09-08 11:38 GMT

ಹೈದರಾಬಾದ್: ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ (Telangana BJP President, Bandi Sanjay Kumar)ಅವರು ಹೈದರಾಬಾದ್‌ನ ಪ್ರಸಿದ್ಧ 'ಹುಸೇನ್ ಸಾಗರ' ಕೆರೆಯನ್ನು 'ವಿನಾಯಕ ಸಾಗರ' ಎಂದು ಕರೆದಿದ್ದು, ಗಣೇಶ ಹಬ್ಬಕ್ಕೆ ವ್ಯವಸ್ಥೆಯನ್ನು ಮಾಡದ  ತೆಲಂಗಾಣ ರಾಷ್ಟ್ರ ಸಮಿತಿ ಅಥವಾ ಟಿಆರ್‌ಎಸ್ ನೇತೃತ್ವದ ತೆಲಂಗಾಣ ಸರಕಾರದ (TRS-led Telangana government) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಅಧ್ಯಕ್ಷ ಕುಮಾರ್, ‘ವಿನಾಯಕ ಸಾಗರ’ ಕೆರೆಯಲ್ಲಿ ಗಣೇಶ್ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು, ‘ಹುಸೇನ್ ಸಾಗರ’ ಕೆರೆಯನ್ನು ಉಲ್ಲೇಖಿಸಿ ಹೇಳಿದರು. ಗಣೇಶ ನವರಾತ್ರಿ ಆಚರಣೆಯ ವ್ಯವಸ್ಥೆ ಮಾಡುವಲ್ಲಿ ತೆಲಂಗಾಣ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

“ಪ್ರತಿ ವರ್ಷವೂ ಇದೇ ಮಾತು, ಭಾಗ್ಯನಗರ ಗಣೇಶ ಉತ್ಸವ ಸಮಿತಿಯವರು ರಸ್ತೆಗಿಳಿದು ಪ್ರತಿಭಟನೆ ಮಾಡಿದ ನಂತರವೇ ಸರಕಾರ ವ್ಯವಸ್ಥೆ ಆರಂಭಿಸಿದೆ. ಹಿಂದೂಗಳು ಹೋರಾಟ ನಡೆಸುತ್ತಿದ್ದರೆ, ಎಐಎಂಐಎಂ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಇದು ಟಿಆರ್‌ಎಸ್ ಪಕ್ಷದ ಪರಿಸ್ಥಿತಿಯಾಗಿದೆ" ಎಂದು ಕುಮಾರ್ ಹೇಳಿದರು.

“ಎರಡು ದಿನಗಳಲ್ಲಿ ದೊಡ್ಡ ಪ್ರಮಾಣದ ಗಣೇಶ್ ಮೂರ್ತಿ ವಿಸರ್ಜನೆ ನಡೆಯಲಿದ್ದು, ಕನಿಷ್ಠ ವ್ಯವಸ್ಥೆಯನ್ನೂ ಮಾಡಿಲ್ಲ. ಬೆಳಗ್ಗೆ ಕೆಲವು ಕ್ರೇನ್‌ಗಳನ್ನು ಮಾತ್ರ ಅಳವಡಿಸಲಾಗಿತ್ತು, ಅದು ಇನ್ನೂ ಕೆಲಸ ಮಾಡುತ್ತಿಲ್ಲ. ಕಳೆದ ಬಾರಿ ಸುಮಾರು 60 ಕ್ರೇನ್‌ಗಳನ್ನು ಅಳವಡಿಸಲಾಗಿತ್ತು. ಹಿಂದೂಗಳು ಈ ಸ್ಥಿತಿಯ ಬಗ್ಗೆ ಯೋಚಿಸಬೇಕು’’ ಎಂದು  ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News