ಹಣದುಬ್ಬರವನ್ನು ಕೇಂದ್ರದಿಂದ ಮಾತ್ರ ನಿಭಾಯಿಸಲು ಸಾಧ್ಯವಿಲ್ಲ: ನಿರ್ಮಲಾ ಸೀತಾರಾಮನ್

Update: 2022-09-08 16:26 GMT
ನಿರ್ಮಲಾ ಸೀತಾರಾಮನ್ (File Photo: PTI)

ಹೊಸದಿಲ್ಲಿ,ಸೆ.8: ಹಣದುಬ್ಬರವನ್ನು ತಗ್ಗಿಸುವ ಜವಾಬ್ದಾರಿಯನ್ನು ಕೇಂದ್ರಕ್ಕೆ ಮಾತ್ರ ಬಿಡಲು ಸಾಧ್ಯವಿಲ್ಲ ಮತ್ತು ರಾಜ್ಯಗಳೂ ತಮ್ಮ ಪಾತ್ರಗಳನ್ನು ನಿರ್ವಹಿಸಬೇಕಿದೆ. ಇದಕ್ಕಾಗಿ ರಾಜ್ಯಗಳೊಂದಿಗೆ ಸೇರಿ ಶ್ರಮಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಇಲ್ಲಿ ಹೇಳಿದರು. ಹಣದುಬ್ಬರ ನಿರ್ವಹಣೆಯ ನಿರ್ಣಾಯಕ ಭಾಗವನ್ನು ಆರ್‌ಬಿಐ ನಿರ್ವಹಿಸುತ್ತದೆ,ಆದರೆ ಆರ್ಥಿಕತೆಯಲ್ಲಿ ಹಣದುಬ್ಬರ ಏರಿಕೆಯನ್ನು ನಿಭಾಯಿಸಲು ವಿತ್ತೀಯ ನೀತಿಯು ಹಣಕಾಸು ನೀತಿಯೊಂದಿಗೆ ಒಟ್ಟಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದೂ ಅವರು ತಿಳಿಸಿದರು.

ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಕುರಿತು ಭಾರತೀಯ ಸಂಶೋಧನಾ ಮಂಡಳಿಯು ಇಲ್ಲಿ ಹಣದುಬ್ಬರ ನಿಯಂತ್ರಣ ಕುರಿತು ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಸೀತಾರಾಮನ್, ಜಿಎಸ್‌ಟಿ,ಏಕ ಮಾರುಕಟ್ಟೆಯ ಸೃಷ್ಟಿ,ರಸ್ತೆಸುಂಕಗಳು ಮತ್ತು ತೆರಿಗೆಗಳ ನಿವಾರಣೆ ಹಾಗೂ ಸರಕು ಸಾಗಾಣಿಕೆಯನ್ನು ಮುಕ್ತಗೊಳಿಸುವಿಕೆಯ ಹೊರತಾಗಿಯೂ ದೇಶದ ವಿವಿಧ ಭಾಗಗಳಲ್ಲಿ ಹಣದುಬ್ಬರ ಅಸ್ತಿತ್ವದಲ್ಲಿದೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ ಎಂದು ಹೇಳಿದರು.

ಅಂತಿಮ ಬಳಕೆದಾರನ ಮೇಲೆ ಜಾಗತಿಕ ಕಚ್ಚಾತೈಲ ಬೆಲೆಗಳ ಏರಿಕೆಯ ಹೊರೆಯನ್ನು ತಗ್ಗಿಸಲು ಕೇಂದ್ರವು 2021,ನವಂಬರ್ ಮತ್ತು 2022 ಮೇ ತಿಂಗಳಿನಲ್ಲಿ ತನ್ನಿಂದ ಸಾಧ್ಯವಿದ್ದಷ್ಟು ಮಟ್ಟಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು,ಆದಾಗ್ಯೂ ಕೆಲವು ರಾಜ್ಯಗಳು ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ಕೈಗೊಂಡಿರಲಿಲ್ಲ ಮತ್ತು ರಾಜ್ಯಮಟ್ಟದ ತೆರಿಗೆಗಳನ್ನು ಇಳಿಕೆ ಮಾಡಿರಲಿಲ್ಲ ಎಂದು ವಾದಿಸಿದ ಸೀತಾರಾಮನ್,‘ನಾನಿಲ್ಲಿ ರಾಜಕೀಯವನ್ನು ಮಾಡುತ್ತಿಲ್ಲ’ಎಂದು ಅದೇ ಉಸಿರಿನಲ್ಲಿ ಸೇರಿಸಿದರು.

‘ಅದಕ್ಕೆ ಹಲವಾರು ಕಾರಣಗಳಿರಬಹುದು,ಆದರೆ ವಾಸ್ತವವು ಉಳಿದುಕೊಳ್ಳುತ್ತದೆ. ಕಾಕತಾಳೀಯವಾಗಿ,ಇಂಧನ ಬೆಲೆಗಳನ್ನು ತಗ್ಗಿಸದ ರಾಜ್ಯಗಳಲ್ಲಿ ಹಣದುಬ್ಬರವು ರಾಷ್ಟ್ರೀಯ ಮಟ್ಟದ ಹಣದುಬ್ಬರಕ್ಕಿಂತ ಹೆಚ್ಚಾಗಿದೆ ಎನ್ನುವುದನ್ನು ನಾನು ಗಮನಿಸಿದ್ದೇನೆ ’ ಎಂದರು.

  ಇಂದು ತೆರಿಗೆ ಆದಾಯಗಳ ಹಂಚಿಕೆ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಇದೇ ರೀತಿ ರಾಜ್ಯಗಳೂ ತಮ್ಮ ಹಣದುಬ್ಬರವನ್ನು ಹೇಗೆ ನಿರ್ವಹಿಸುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಸಾಕಷ್ಟು ಸಮರ್ಥನೆಗಳಿವೆ. ಹಣದುಬ್ಬರವನ್ನು ಕೇಂದ್ರ ಸರಕಾರವು ಮಾತ್ರ ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ ಸೀತಾರಾಮನ್,ರಾಜ್ಯಗಳು ಕ್ರಮಗಳನ್ನು ಕೈಗೊಳ್ಳದಿದ್ದರೆ ಭಾರತದ ಆ ಭಾಗವು ಹಣದುಬ್ಬರದ ಒತ್ತಡದಿಂದಾಗಿ ಪರಿಹಾರದ ಕೊರತೆಯಿಂದ ಬಳಲುತ್ತದೆ. ಬಾಹ್ಯ ಅಂಶಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ ಎಂದರು. ತಾನು ಆರ್‌ಬಿಐಗೆ ಯಾವುದೇ ಮುಂದುವರಿಯುವ ನಿರ್ದೇಶನವನ್ನು ನೀಡುತ್ತಿಲ್ಲ ಎಂದು ಹೇಳಿದ ಅವರು,ಆರ್‌ಬಿಐ ತನ್ನ ಹಣಕಾಸು ನೀತಿಯನ್ನು ಇತರ ಸೆಂಟ್ರಲ್ ಬ್ಯಾಂಕುಗಳ ನೀತಿಗಳ ಜೊತೆ ಮೇಳೈಸಬೇಕಿದ್ದರೂ ಅದನ್ನು ಶ್ರೀಮಂತ ದೇಶಗಳ ಸೆಂಟ್ರಲ್ ಬ್ಯಾಂಕುಗಳೊಂದಿಗೆ ಮೇಳೈಸಲು ಸಾಧ್ಯವಾಗದಿರಬಹುದು. ಭಾರತದ ಹಣದುಬ್ಬರ ನಿರ್ವಹಣೆಯು ಹಲವಾರು ಅಂಶಗಳನ್ನು ಹೊಂದಿದೆ,ಅವುಗಳಲ್ಲಿ ಹೆಚ್ಚಿನವು ಹಣಕಾಸು ನೀತಿಯ ವ್ಯಾಪ್ತಿಯಿಂದ ಹೊರಗಿವೆ. ವಿತ್ತಸಚಿವರೊಬ್ಬರು ಹೀಗೆ ಹೇಳುವುದು ಅಪಹಾಸ್ಯ ಎಂದು ಜನರು ಭಾವಿಸುವ ಸಮಯವೂ ಇರಬಹುದು. ಹಣದುಬ್ಬರ ನಿಭಾವಣೆಯಲ್ಲಿ ಆರ್‌ಬಿಐ,ಅದರ ಸಾಧನಗಳು ಮತ್ತು ಅದರ ಬಡ್ಡಿದರ ನಿರ್ವಹಣೆ ಅತ್ಯಂತ ನಿರ್ಣಾಯಕ ಭಾಗವಾಗಿದೆ,ಆದರೆ ಅದು ಒಂದೇ ಮಾರ್ಗವಾಗಿರಲು ಸಾಧ್ಯವಿಲ್ಲ ಎಂದರು.

 ರಷ್ಯಾದಿಂದ ಕಚ್ಚಾತೈಲಗಳ ಆಮದನ್ನು ಮುಂದುವರಿಸುವ ಕೇಂದ್ರದ ನಿರ್ಧಾರವು ಕೂಡ ಹಣದುಬ್ಬರ ನಿರ್ವಹಣೆಯ ಭಾಗವಾಗಿದೆ ಎಂದೂ ಸೀತಾರಾಮನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News