ಮಣಿಪಾಲ: ಸೆ.9ರಂದು ಆಕೃತಿ ಆರ್ಟ್ ಗ್ಯಾಲರಿ ಉದ್ಘಾಟನೆ
ಉಡುಪಿ, ಸೆ.8: ಸ್ಥಳೀಯ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ, ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುತ್ತಿರುವ ಮಣಿಪಾಲ ಆದರ್ಶ ನಗರ ಪ್ರಗತಿ ಪ್ರೈಡ್‌ನಲ್ಲಿ ಕಾರ್ಯಾಚರಿಸುತ್ತಿರುವ ‘ತಪೋವನ’ದ ಆಶ್ರಯದಲ್ಲಿ ಆಕೃತಿ ಆರ್ಟ್ ಗ್ಯಾಲರಿ ಸೆ.9ರ ಶನಿವಾರ ಕಾರ್ಯಾರಂಭ ಮಾಡಲಿದೆ.
ಇದರೊಂದಿಗೆ ಮೂರು ದಿನಗಳ ಕಾಲ ಖ್ಯಾತ ಕಲಾವಿದರಿಂದ ಕಲಾ ಪ್ರಾತ್ಯಕ್ಷತೆ ಹಾಗೂ ಕಲಾ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಆಕೃತಿ ಆರ್ಟ್ ಗ್ಯಾಲರಿ ಸೆ.9ರ ಸಂಜೆ 4ಗಂಟೆಗೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರಿಂದ ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭದಲ್ಲಿ ಉಡುಪಿಯ ಉದ್ಯಮಿ ಮನೋಹರ ಶೆಟ್ಟಿ ಉಪಸ್ಥಿತರಿರುವರು ಎಂದು ತಪೋವನದ ನಿರ್ದೇಶಕರಲ್ಲೊಬ್ಬರಾದ ವೆಂಕಟೇಶ ಶೇಟ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸೆ.9ರಿಂದ 11ರವರೆಗೆ ಕಲಾ ಪ್ರಾತ್ಯಕ್ಷತೆ ನಡೆಯಲಿದ್ದು, ಕಲಾವಿದರಾದ ರಮೇಶ್ ರಾವ್, ಗಣೇಶ ಸೋಮಯಾಜಿ, ಕಂದನ್ ಜಿ., ಶರತ್ ಪಲಿಮಾರು, ಪೆರ್ಮುದೆ ಮೋಹನ ಕುಮಾರ್ ಮತ್ತು ಸೈಯದ್ ಆಸಿಫ್ ಅಲಿ ಪ್ರಾತ್ಯಕ್ಷತೆ ನೀಡುವರು.
ಅಲ್ಲದೇ ಪೀಟರ್ ಲೂಯಿಸ್, ಭಾಸ್ಕರ ರಾವ್, ರಮೇಶ್ ರಾವ್, ರಾಮಮೂರ್ತಿ ಸೇರಿದಂತೆ ನಾಡಿನ ೧೮ ಮಂದಿ ಖ್ಯಾತ ನಾಮ ಕಲಾವಿದರ ಕಲಾಕೃತಿಗಳ ಪ್ರದರ್ಶನವೂ ಸೆ.25ರವರೆಗೆ ನಡೆಯಲಿದೆ. ಕಲಾಪ್ರದರ್ಶನ ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ ಎಂದು ಕಾರ್ಯಕ್ರಮ ಸಂಯೋಜಕ ಹಾಗೂ ಕಲಾವಿದ ಪುರುಷೋತ್ತಮ ಅಡ್ವೆ ತಿಳಿಸಿದರು.
ತಪೋವನದಿಂದ ಲಲಿತಕಲೆಗಳ ಪ್ರದರ್ಶನ ಹಾಗೂ ತರಬೇತಿಗಾಗಿ ‘ಪರಂಪರಾ’, ಕಲಾತ್ಮಕ ವಸ್ತುಗಳ ಮಾರಾಟ-ಪ್ರದರ್ಶನಕ್ಕಾಗಿ ‘ಪುರಾತನ’ ಎಂಬ ಘಟಕಗಳೂ ಶೀಘ್ರವೇ ಕಾರ್ಯಾಚರಿಸಲಿವೆ ಎಂದು ವೆಂಕಟೇಶ್ ಶೇಟ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ತಪೋವನದ ಮತ್ತೊಬ್ಬ ನಿರ್ದೇಶಕರಾದ ಜಯಂತಿಲಾಲ್ ಪಟೇಲ್ ಉಪಸ್ಥಿತರಿದ್ದರು.