ಬಿಹಾರ:ತಂದೆ ರಾಜ್ಯದ ಕಾಯಂ ನಿವಾಸಿಯಾಗಿದ್ದರೆ ಮಹಿಳೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಅರ್ಹಳು

Update: 2022-09-08 16:37 GMT

ಪಾಟ್ನಾ,ಸೆ.8: ರಾಜ್ಯ ಸರಕಾರದ ಹುದ್ದೆಗಳಿಗೆ ಮೀಸಲಾತಿಯಡಿ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರಿಗಾಗಿ ಬಿಹಾರ ಸರಕಾರವು ವಾಸಸ್ಥಳ ಷರತ್ತನ್ನು ಬದಲಿಸಿದೆ. ಸರಳವಾಗಿ ಹೇಳಬೇಕೆಂದರೆ ವಿವಾಹದ ಬಳಿಕ ಹೊರಗಡೆ ವಾಸವಾಗಿರುವ ಬಿಹಾರದ ಮಹಿಳೆಯು ತನ್ನ ತಂದೆ ರಾಜ್ಯದ ಕಾಯಂ ನಿವಾಸಿಯಾಗಿದ್ದರೆ ಮೀಸಲಾತಿ ಲಾಭಗಳನ್ನು ಪಡೆಯಬಹುದು. ಸಾಮಾನ್ಯ ಆಡಳಿತ ಇಲಾಖೆಯು ಸೆ.2ರಂದು ಎಲ್ಲ ಸರಕಾರಿ ಇಲಾಖೆಗಳ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಮಹಿಳೆಯು ತನ್ನ ತಂದೆಯ ಜಾತಿಯ ಆಧಾರದಲ್ಲಿ ಮೀಸಲಾತಿಯ ಲಾಭಗಳನ್ನು ಪಡೆಯಬಹುದೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಿದೆ.

ತನ್ನ ತಂದೆಯು ಬಿಹಾರದ ಕಾಯಂ ನಿವಾಸಿಯಾಗಿರುವ ವಿವಾಹಿತ ಮಹಿಳೆಯು ತನ್ನ ಪತಿಯ ವಿಳಾಸದ ಆಧಾರದಲ್ಲಿ ವಾಸಸ್ಥಳ ಪ್ರಮಾಣಪತ್ರವನ್ನು ಪಡೆದಿದ್ದಾಳೆ ಎಂಬ ಮಾತ್ರಕ್ಕೆ ಆಕೆ ಮೀಸಲಾತಿಯ ಲಾಭಗಳಿಂದ ವಂಚಿತಳಾಗುವಂತಿಲ್ಲ ಎಂದು ಹೇಳಿರುವ ಪತ್ರವು, ಮೀಸಲಾತಿಗೆ ವ್ಯಕ್ತಿಯ ಅರ್ಹತೆಯು ವ್ಯಕ್ತಿಯ ತಂದೆಯ ಜಾತಿಯ ಆಧಾರದಲ್ಲಿ ನಿರ್ಧರಿಸಲ್ಪಡುತ್ತದೆ ಎಂದು ತಿಳಿಸಿದೆ.

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ವಾಸಸ್ಥಳಗಳನ್ನು ಹೊಂದಿರಬಹುದು, ಆದರೆ ಒಂದು ಸಲಕ್ಕೆ ಒಂದೇ ವಾಸಸ್ಥಳ ಪ್ರಮಾಣಪತ್ರವನ್ನು ಹೊಂದಿರಲು ಸಾಧ್ಯ ಎಂದೂ ಪತ್ರದಲ್ಲಿ ಹೇಳಲಾಗಿದೆ.

ಹೆಚ್ಚಿನ ಮಹಿಳೆಯರು ತಮ್ಮ ಪತಿಯ ವಾಸಸ್ಥಳ ವಿಳಾಸಗಳನ್ನು ಬಳಸುವುದರಿಂದ ಮತ್ತು ಅವರಲ್ಲಿ ಅನೇಕರು ಜಾತಿಯಿಂದ ಹೊರಗೆ ವಿವಾಹವಾಗಿರುವುದರಿಂದ ಮೀಸಲಾತಿಯ ಲಾಭಗಳನ್ನು ಒದಗಿಸಲು ತಂದೆಯ ವಾಸಸ್ಥಳ ಮತ್ತು ಜಾತಿಯನ್ನು ಪರಿಗಣಿಸಲು ರಾಜ್ಯ ಸರಕಾರವು ನಿರ್ಧರಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮೀಸಲಾತಿಯ ಲಾಭಗಳನ್ನು ಪಡೆಯಲು ವ್ಯಕ್ತಿಯು ಬಿಹಾರದ ನಿವಾಸಿಯಾಗಿರುವುದನ್ನು ಅಗತ್ಯವಾಗಿಸಿರುವ 1996ರ ಸರಕಾರಿ ಆದೇಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 ಹೊಸ ಬದಲಾವಣೆಗಳೊಂದಿಗೆ ವಿವಾಹಿತ ಮಹಿಳಾ ಅಭ್ಯರ್ಥಿಯು ತನ್ನ ತಂದೆ ವಾಸವಿರುವ ಗ್ರಾಮ ಅಥವಾ ಪಟ್ಟಣದ ವೃತ್ತಕಚೇರಿಯಿಂದ ನೀಡಲಾಗಿರುವ ‘ಕೆನೆ ಪದರ ’ವರ್ಗಕ್ಕೆ ಸೇರಿಲ್ಲ ಎಂಬ ಪ್ರಮಾಣಪತ್ರ ಅಥವಾ ಒಬಿಸಿ ಪ್ರಮಾಣ ಪತ್ರವನ್ನು ಹಾಜರು ಪಡಿಸಬೇಕಾಗುತ್ತದೆ.

ಈ ಕ್ರಮವು ನಿತೀಶ ಕುಮಾರ ಸರಕಾರವು ವರ್ಷಗಳಿಂದಲೂ ಮಹಿಳೆಯರ ಸಬಲೀಕರಣಕ್ಕಾಗಿ ಕೈಗೊಂಡಿರುವ ಹಲವಾರು ಕ್ರಮಗಳಿಗೆ ಅನುಗುಣವಾಗಿದೆ.

2006ಲ್ಲಿ ಬಿಹಾರವು ದೇಶದಲ್ಲೇ ಮೊದಲ ಬಾರಿಗೆ ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಯನ್ನು ಒದಗಿಸಿತ್ತು. ಶಿಕ್ಷಕರ ನೇಮಕಾತಿಯಲ್ಲಿಯೂ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಯನ್ನು ಸರಕಾರವು ಜಾರಿಗೊಳಿಸಿದೆ.

ರಾಜ್ಯದಲ್ಲಿ ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರ ಮಟ್ಟದವರೆಗೆ ಉಚಿತ ಶಿಕ್ಷಣವನ್ನೂ ಬಿಹಾರ ಸರಕಾರವು ಒದಗಿಸುತ್ತದೆ.

ಸರಕಾರವು ಕಳೆದ ವರ್ಷದ ಜೂನ್‌ನಲ್ಲಿ ಮಹಿಳೆಯರಿಗೆ ಸರಕಾರಿ ಉದ್ಯೋಗಗಳಲ್ಲಿ ಕನಿಷ್ಠ ಶೇ.35ರಷ್ಟು ಮೀಸಲಾತಿಯನ್ನು ಪ್ರಕಟಿಸಿತ್ತು.

ಅದು ಒಂದು ವರ್ಷದೊಳಗೆ ಹಂತಹಂತವಾಗಿ ನಾಲ್ಕು ಲಕ್ಷ ಗುತ್ತಿಗೆ ಶಿಕ್ಷಕರ ನೇಮಕಾತಿಗಾಗಿ ಜಾಹೀರಾತು ಹೊರಡಿಸುವ ಸಾಧ್ಯತೆಯಿದೆ.

ಈ ನಡುವೆ ಕಾರ್ಮಿಕ ಪಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಬಿಹಾರದ ದಾಖಲೆ ನೀರಸವಾಗಿದೆ. ರಾಜ್ಯದ ನಗರ ಪ್ರದೇಶಗಳಲ್ಲಿ ಕೇವಲ ಶೇ.6.4 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇ.3.9 ಮಹಿಳೆಯರು ಉದ್ಯೋಗಸ್ಥರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News